Karnataka High Court 
ಸುದ್ದಿಗಳು

ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ನಾಗಣ್ಣಗೌಡ ನೇಮಕಕ್ಕೆ ಆಕ್ಷೇಪ: ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಆಯೋಗದ ಪಾತ್ರ, ಜವಾಬ್ದಾರಿ, ಕರ್ತವ್ಯಗಳಿಗೆ ಅನುಗುಣವಾಗಿ ಅಧ್ಯಕ್ಷರನ್ನು ನೇಮಕ ಮಾಡದ ಸರ್ಕಾರವು, ಅಪಾರದರ್ಶಕ ಮತ್ತು ಸ್ವೇಚ್ಛೆಯಿಂದ ಅಧಿಕಾರ ಚಲಾಯಿಸಿ ನಾಗಣ್ಣ ಗೌಡ ಅವರನ್ನು ನೇಮಿಸಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Bar & Bench

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಬಿಜೆಪಿಯ ಮುಖಂಡ ಕೆ ನಾಗಣ್ಣ ಗೌಡ ಅವರ ನೇಮಕಾತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ವಕೀಲೆ ಸುಧಾ ಕಾಟ್ವಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದು, ಮೂರು ವಾರಗಳ ಕಾಲ ವಿಚಾರಣೆ ಮುಂದೂಡಿದೆ.

ಆಯೋಗದ ಪಾತ್ರ, ಜವಾಬ್ದಾರಿ, ಕರ್ತವ್ಯಗಳಿಗೆ ಅನುಗುಣವಾಗಿ ಅಧ್ಯಕ್ಷರನ್ನು ನೇಮಕ ಮಾಡದ ಸರ್ಕಾರವು, ಅಪಾರದರ್ಶಕ ಮತ್ತು ಸ್ವೇಚ್ಛೆಯಿಂದ ಅಧಿಕಾರ ಚಲಾಯಿಸಿ ನಾಗಣ್ಣ ಗೌಡ ಅವರನ್ನು ನೇಮಿಸಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಕೊನೆ ಕ್ಷಣದಲ್ಲಿ ಅಂತಿಮಗೊಳಿಸಿದ್ದ ಹೆಸರುಗಳನ್ನು ಕೈಬಿಟ್ಟು, ಆಡಳಿತರೂಢ ಪಕ್ಷದ ಜೊತೆ ಸಂಪರ್ಕ ಹೊಂದಿರುವ ನಾಗಣ್ಣ ಗೌಡ ಅವರನ್ನು ನೇಮಕ ಮಾಡಲಾಗಿದೆ. ನಾಗಣ್ಣ ಗೌಡ ಅವರು ಬಿಜೆಪಿಯ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಈ ನೆಲೆಯಲ್ಲಿ 2022ರ ಅಕ್ಟೋಬರ್‌ 21ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಲಾಗಿದೆ.