HD Kumaraswamy and Karnataka HC  
ಸುದ್ದಿಗಳು

ಕೋವಿಡ್ ಪೀಡಿತ ಮಾಜಿ ಮುಖ್ಯಮಂತ್ರಿಗೇ ಆಸ್ಪತ್ರೆಯಲ್ಲಿ ಹಾಸಿಗೆ ದೊರೆತಿಲ್ಲ: ಕರ್ನಾಟಕ ಹೈಕೋರ್ಟ್‌ನಲ್ಲಿ‌ ವಕೀಲರ ಆತಂಕ

ಆರ್‌ಟಿ- ಪಿಸಿಆರ್ ಪರೀಕ್ಷಾ ಫಲಿತಾಂಶಗಳನ್ನು 48 ಗಂಟೆಗಳ ಒಳಗೆ ನೀಡುತ್ತಿಲ್ಲ ಎಂದು ಕೂಡ ನ್ಯಾಯಾಲಯದ ಗಮನಕ್ಕೆ ತರಲಾಗಿದ್ದು, ನ್ಯಾಯಾಲಯವು 24 ಗಂಟೆಗಳ ಒಳಗೆ ಫಲಿತಾಂಶ ನೀಡುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದೆ.

Bar & Bench

ಕೋವಿಡ್‌ ದೃಢಪಟ್ಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೇ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಹಾಸಿಗೆ ದೊರೆತಿಲ್ಲ ಎಂದು ಶನಿವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.

ರಾಜ್ಯದಲ್ಲಿ ಕೋವಿಡ್‌ -19 ಪೀಡಿತರಿಗೆ ಹಾಸಿಗೆಗಳ ತೀವ್ರ ಕೊರತೆ ಇದೆ ಎಂದು ವಾದ ಮಂಡಿಸುವ ಸಂದರ್ಭದಲ್ಲಿ ವಕೀಲ ಕ್ಲಿಫ್ಟನ್‌ ಡಿ ರೊಜಾರಿಯೊ ಅವರು ಕುಮಾರಸ್ವಾಮಿಯವರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಅಲಭ್ಯವಾಗಿದ್ದ ಘಟನೆಯನ್ನು ವಿವರಿಸಿದರು. ಸವಲತ್ತು ಪಡೆದ ಜನರಿಗೇ ಹಾಸಿಗೆಗಳು ಸಿಗದಿದ್ದಾಗ ಸಮಾಜದ ಬಡ ವರ್ಗಗಳ ದುಃಸ್ಥಿತಿ ಊಹಾತೀತ ಎಂದು ಅವರು ಹೇಳಿದರು. ಅಲ್ಲದೆ ಘಟನೆ ಸಂಬಂಧ ಟ್ವೀಟ್‌ ಒಂದು ವೈರಲ್‌ ಆಗಿರುವುದನ್ನೂ ತಿಳಿಸಿದರು.

ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಆಸ್ಪತ್ರೆಗೆ ದಾಖಲಾಗಬೇಕೆಂದು ವೈದ್ಯಕೀಯ ಸಲಹೆ ಪಡೆದ ಯಾವುದೇ ಕೋವಿಡ್‌ -19 ರೋಗಿ ಸೌಲಭ್ಯ ವಂಚಿತನಾಗಬಾರದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ. “ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರೆ, COVID-19 ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲು ನಿಯಮ ರೂಪಿಸಬೇಕೆ ಎಂಬ ಬಗ್ಗೆ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.

ರಾಜ್ಯದಲ್ಲಿ ಕೋವಿಡ್‌ ರೋಗಿಗಳು ಎದುರಿಸುತ್ತಿರುವ ವಿವಿಧ ತೊಂದರೆಗಳನ್ನು ವಿವರಿಸುವ ಎರಡು ಪತ್ರಗಳನ್ನು ಆಧರಿಸಿ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪ್ರಕರಣದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಆರ್‌ಟಿ- ಪಿಸಿಆರ್ ಪರೀಕ್ಷಾ ಫಲಿತಾಂಶಗಳನ್ನು 48 ಗಂಟೆಗಳ ಒಳಗೆ ನೀಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಆಗ ನ್ಯಾಯಾಲಯ 24 ಗಂಟೆಗಳ ಒಳಗೆ ಫಲಿತಾಂಶ ನೀಡುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿತು.

"ಫಲಿತಾಂಶಗಳ ಅಲಭ್ಯತೆ ತೀವ್ರ ಪರಿಣಾಮ ಬೀರುತ್ತದೆ. ಪರೀಕ್ಷಾ ಫಲಿತಾಂಶಗಳನ್ನು ತ್ವರಿತವಾಗಿ ಒದಗಿಸಬೇಕೇ ವಿನಾ 24 ಗಂಟೆಗಳ ನಂತರ ಅಲ್ಲ ಎಂದು ರಾಜ್ಯ ಸರ್ಕಾರ ಪ್ರಯೋಗಾಲಯಗಳಿಗೆ ಸೂಚಿಸಬೇಕು. ಫಲಿತಾಂಶ ದೊರೆಯುವವರೆಗೂ ವ್ಯಕ್ತಿಗಳು ಕ್ವಾರಂಟೈನ್‌ ಆಗಿರಬೇಕು. ಮನೆಯಲ್ಲೇ ಕ್ವಾರಂಟೈನ್‌ ಆಗುವುದರ ಮಹತ್ವವನ್ನೂ ಜನರಿಗೆ ತಿಳಿಸಬೇಕು” ಎಂದು ಆದೇಶದಲ್ಲಿ ವಿವರಿಸಲಾಗಿದೆ. ಕೋವಿಡ್‌ ಸಂಬಂಧಿತ ಅಹವಾಲುಗಳನ್ನು ಸಲ್ಲಿಸಲು ಉನ್ನತ ಅಧಿಕಾರ ಸಮಿತಿಯೊಂದನ್ನು ನೇಮಕ ಮಾಡುವ ಬಗ್ಗೆ ರಾಜ್ಯ ಸರ್ಕಾರ ಆಲೋಚಿಸಬೇಕು ಎಂದು ಕೂಡ ನ್ಯಾಯಾಲಯ ಸೂಚಿಸಿದೆ.