Arvind Kejriwal, Rouse Avenue Courts, Delhi  Arvind Kejriwal image source: Facebook
ಸುದ್ದಿಗಳು

ಅಬಕಾರಿ ನೀತಿ: ಸಿಬಿಐ ಪ್ರಕರಣದಲ್ಲಿ ಜುಲೈ 12ರವರೆಗೆ ಅರವಿಂದ್‌ ಕೇಜ್ರಿವಾಲ್‌ಗೆ ನ್ಯಾಯಾಂಗ ಬಂಧನ

Bar & Bench

ಅಬಕಾರಿ ನೀತಿ ಕುರಿತ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜುಲೈ 12ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ದೆಹಲಿ ನ್ಯಾಯಾಲಯ ಶನಿವಾರ ಆದೇಶಿಸಿದೆ.

ಮೂರು ದಿನಗಳ ಸಿಬಿಐ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಈ ವೇಳೆ ಕಸ್ಟಡಿ ಅವಧಿ ವಿಸ್ತರಿಸುವಂತೆ ಸಿಬಿಐ ಕೋರದ ಹಿನ್ನೆಲೆಯಲ್ಲಿ ಶನಿವಾರ ಕೇಜ್ರಿವಾಲ್‌ ಅವರನ್ನು ರೌಸ್ ಅವೆನ್ಯೂ ರಜಾಕಾಲೀನ ನ್ಯಾಯಾಲಯದ ನ್ಯಾಯಾಧೀಶೆ ಸುನೇನಾ ಶರ್ಮಾ ಅವರು ನ್ಯಾಯಾಂಗ ಬಂಧನಕ್ಕೆ ನೀಡಿದರು.

ಪ್ರಭಾವಿ ರಾಜಕಾರಣಿಯಾಗಿರುವ ಕೇಜ್ರಿವಾಲ್‌ ಅವರು ಕಸ್ಟಡಿಯಲ್ಲಿ ಇರದೇ ಹೋದರೆ ಸಾಕ್ಷ್ಯ ನಾಶಮಾಡುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಸಿಬಿಐ ಕೋರಿತು.  

ತಾನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೆ ಕೇಜ್ರಿವಾಲ್‌ ನುಣುಚಿಕೊಳ್ಳುತ್ತಿದ್ದು, ಸತ್ಯ ನುಡಿಯುತ್ತಿಲ್ಲವಾದರೂ ಸದ್ಯಕ್ಕೆ ಅವರನ್ನು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಅದು ಹೇಳಿತು. ಈ ನಡುವೆ ಕೇಜ್ರಿವಾಲ್‌ ಅವರ ಮನವಿ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಗೆ ಜೈಲಿನಿಂದಲೇ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಹಾಜರಾಗಲು ನ್ಯಾಯಾಲಯ ಅನುಮತಿಸಿತು.

ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ ಬಂಧಿಸಿತ್ತು.

ದೆಹಲಿ ಅಬಕಾರಿ ನೀತಿ ಕರಡು ರಚನೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಇ ಡಿ ಮತ್ತು ಸಿಬಿಐ ಎರಡೂ ತನಿಖೆ ನಡೆಸುತ್ತಿವೆ.