Women Rights 
ಸುದ್ದಿಗಳು

ಅವಿವಾಹಿತ ಮಹಿಳೆಯನ್ನು ಸರ್ಕಾರಿ ಉದ್ಯೋಗದಿಂದ ಹೊರಗಿಡುವುದು ಸಮಾನತೆಯ ಹಕ್ಕಿನ ಉಲ್ಲಂಘನೆ: ರಾಜಸ್ಥಾನ ಹೈಕೋರ್ಟ್‌

ಅಂಗನವಾಡಿ ಕಾರ್ಯಕರ್ತೆ, ಮಿನಿ ಕಾರ್ಯಕರ್ತೆ ಅಥವಾ ಸಹಾಯಕಿಯಾಗಿ ನೇಮಕವಾಗಲು ಮಹಿಳೆಯು ಮದುವೆಯಾಗಿರುವುದನ್ನು ಕಡ್ಡಾಯಗೊಳಿಸಿದ್ದ ಷರತ್ತನ್ನು ಒಳಗೊಂಡಿದ್ದ ಸುತ್ತೋಲೆ ವಜಾ ಮಾಡಿದ ಹೈಕೋರ್ಟ್‌.

Bar & Bench

ಅಂಗನವಾಡಿ ಕಾರ್ಯಕರ್ತೆ, ಮಿನಿ ಕಾರ್ಯಕರ್ತೆ ಅಥವಾ ಸಹಾಯಕಿಯಾಗಿ ನೇಮಕವಾಗಲು ಮಹಿಳೆಯು ವಿವಾಹವಾಗಿರಬೇಕು ಎಂದು 2016ರ ನವೆಂಬರ್‌ನಲ್ಲಿ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಮತ್ತು 2019ರ ಜೂನ್‌ನಲ್ಲಿ ಪ್ರಕಟವಾಗಿದ್ದ ಜಾಹೀರಾತನ್ನು ಈಚೆಗೆ ರಾಜಸ್ಥಾನ ಹೈಕೋರ್ಟ್‌ ವಜಾ ಮಾಡುವ ಮೂಲಕ ಮಹತ್ವದ ಆದೇಶ ಮಾಡಿದೆ [ಮಧು ವರ್ಸಸ್‌ ರಾಜಸ್ಥಾನ ಸರ್ಕಾರ].

ಜಾಹೀರಾತು ನೋಡಿ ತನ್ನೂರಿನಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಉದ್ಯೋಗ ಕೋರಿ ಅರ್ಜಿದಾರೆ ಮಧು ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ದಿನೇಶ್‌ ಮೆಹ್ತಾ ಅವರ ನೇತೃತ್ವದ ಏಕಸದಸ್ಯ ಆದೇಶ ಪ್ರಕಟಿಸಿದೆ.

ಅವಿವಾಹಿತ ಮಹಿಳೆಗೆ ಸರ್ಕಾರಿ ಉದ್ಯೋಗ ನಿರಾಕರಿಸುವುದು ಆಕೆಯ ಸಮಾನತೆ ಹಕ್ಕು ಮತ್ತು ಸಮಾನ ಅವಕಾಶ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಆಕೆ ವಿವಾಹವಾಗಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಉದ್ಯೋಗ ನಿರಾಕರಿಸುವುದು ಸಂವಿಧಾನದ 14 ಮತ್ತು 16ನೇ ವಿಧಿಯ ಅಡಿ ಕಲ್ಪಿಸಲಾಗಿರುವ ಮೂಲಭೂತ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ ಅದು ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡುವುದಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಹಾಲಿ ಪ್ರಕರಣದಲ್ಲಿ ಮಹಿಳೆಗೆ ಎದುರಾಗುವ ತಾರತಮ್ಯದ ಮತ್ತೊಂದು ರೂಪ ಅನಾವರಣಗೊಂಡಿದ್ದು, ಅವಿವಾಹಿತೆ ಮತ್ತು ವಿವಾಹಿತೆಯ ನಡುವೆ ತಾರತಮ್ಯ ಉಂಟು ಮಾಡಲಾಗಿದೆ. ಮದುವೆಯ ನಂತರ ಅವಿವಾಹಿತ ಮಹಿಳೆಯು ತನ್ನ ಪತಿಯ ಮನೆ ಹೋಗುತ್ತಾಳೆ ಎಂಬ ಷರತ್ತನ್ನು ಬೆಂಬಲಿಸಲು ನೀಡಿದ ತೋರಿಕೆಯ ಕಾರಣವು ಸಮಂಜಸತೆ ಮತ್ತು ವಿವೇಕದ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಿಲ್ಲ” ಎಂದು ಪೀಠ ಹೇಳಿದೆ.

ಮಹಿಳೆಯು ವಿವಾಹವಾಗಿಲ್ಲ ಎಂಬ ಕಾರಣವು ಆಕೆಯನ್ನು ಅನರ್ಹಗೊಳಿಸಲು ಕಾರಣವಾಗುವುದಿಲ್ಲ ಎಂದು ನ್ಯಾಯಾಲಯವು ಒತ್ತಿ ಹೇಳಿದೆ. ಅವಿವಾಹಿತ ಮಹಿಳೆಯು ಉದ್ಯೋಗಕ್ಕೆ ಅರ್ಜಿ ಹಾಕುವಂತಿಲ್ಲ ಎಂದು ಸರ್ಕಾರದ ಸುತ್ತೋಲೆ ಮತ್ತು ಜಾಹೀರಾತಿನಲ್ಲಿ ಹೇಳಲಾಗಿತ್ತು.

“ಒಂದೊಮ್ಮೆ ಮಹಿಳೆಯು ತನ್ನದೇ ಊರಿನ ಅಥವಾ ಸಮೀಪ ಸ್ಥಳದ ಯುವಕನನ್ನು ಮದುವೆಯಾದರೆ ಏನು ಮಾಡುವುದು? ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಪಡೆದ ಮೇಲೆ ವಿವಾಹಿತ ಮಹಿಳೆಯು ಆಕೆ ಬೇರೆ ಕಡೆ ಸ್ಥಳಾಂತರವಾದರೆ ಏನು ಮಾಡುವುದು? ಮಹಿಳೆಯ ಪತಿಯು ಮಾವನ ಮನೆಯಲ್ಲಿ ನೆಲೆಸಿದರೆ ಏನು ಮಾಡುವುದು? ಮಹಿಳೆಯು ವಿಧವೆಯಾದರೆ ಅಥವಾ ವಿಚ್ಛೇದನೆ ಪಡೆದು, ಹೊಸ ಸ್ಥಳಕ್ಕೆ ಹೋದರೆ ಏನು ಮಾಡುವುದು? ಮಹಿಳೆಯು ಮದುವೆಯಾಗಲು ಇಚ್ಛಿಸದಿದ್ದರೆ ಏನು ಮಾಡುವುದು” ಎನ್ನುವಂತಹ ಪ್ರಶ್ನೆಗಳನ್ನು ನ್ಯಾಯಾಲಯವು ನೀತಿನಿರೂಪಕರಿಗೆ ಕೇಳಿದೆ.

ಇಂತಹ ಸನ್ನಿವೇಶಗಳನ್ನು ಸರ್ಕಾರವು ತಡೆಯಲು ಸಾಧ್ಯವಿಲ್ಲ, ಅದೇ ರೀತಿ ಇವುಗಳ ಆಧಾರದಲ್ಲಿ ಮಹಿಳೆಯ ಉದ್ಯೋಗದ ಹಕ್ಕನ್ನು ತಡೆಯಲು ಸಾಧ್ಯವಿಲ್ಲ ಎಂದು ಅದು ವಿವರಿಸಿದೆ.