Karnataka High Court 
ಸುದ್ದಿಗಳು

ತೆರಿಗೆ ಪಾವತಿಯಿಂದ ವಿನಾಯಿತಿ: ಶಾಲೆಗಳ ಮಾನ್ಯತಾ ನವೀಕರಣ ಅರ್ಜಿ ಪರಿಗಣಿಸಲು ಶಿಕ್ಷಣ ಇಲಾಖೆಗೆ ಹೈಕೋರ್ಟ್‌ ಆದೇಶ

ಶಿಕ್ಷಣ ಕಾಯಿದೆ ಸೆಕ್ಷನ್ 36ರ ಪ್ರಕಾರ ಕಾಲ ಕಾಲಕ್ಕೆ ನವೀಕರಣದ ಅಗತ್ಯವಿಲ್ಲ. ಅದೇ ರೀತಿ ಶಿಕ್ಷಣ ನಿಯಮ 1999ರಂತೆ ಮಾನ್ಯತಾ ನವೀಕರಣ ಅವಧಿ 10 ವರ್ಷ. ಹೀಗಿದ್ದಾಗ, ಇವರೆಡಕ್ಕೂ ವಿರುದ್ಧವಾಗಿ ಸುತ್ತೋಲೆ ಹೊರಡಿಸಲಾಗಿದೆ ಎಂಬುದು ಅರ್ಜಿದಾರರ ವಾದ.

Bar & Bench

ತೆರಿಗೆ ಪಾವತಿಯಿಂದ ವಿನಾಯಿತಿ ಇದೆ ಎಂದು ರುಜುವಾತುಪಡಿಸುವ ಶಾಲೆಗಳ ಮಾನ್ಯತಾ ನವೀಕರಣ ಅರ್ಜಿಗಳನ್ನು ಪರಿಗಣಿಸುವಂತೆ ಶಿಕ್ಷಣ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ಆದೇಶ ಮಾಡಿದೆ.

ಶಾಲೆಗಳ ಮಾನ್ಯತಾ ನವೀಕರಣಕ್ಕೆ ಷರತ್ತುಗಳನ್ನು ವಿಧಿಸಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು 2024ರ ಜುಲೈ 24ರಂದು ಹೊರಡಿಸಿರುವ ಸುತ್ತೋಲೆ ರದ್ದುಪಡಿಸುವಂತೆ ಕೋರಿ 'ಕೃಪಾ’ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಘ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ವಾದ ಆಲಿಸಿದ ಪೀಠವು ತೆರಿಗೆ ಪಾವತಿಯಿಂದ ತಮಗೆ ವಿನಾಯಿತಿ ಇದೆ ಎಂದು ರುಜುವಾತುಪಡಿಸುವ ಶಾಲೆಗಳ ಮಾನ್ಯತಾ ನವೀಕರಣ ಅರ್ಜಿಗಳನ್ನು ಪರಿಗಣಿಸುವಂತೆ ಶಿಕ್ಷಣ ಇಲಾಖೆಗೆ ಮಧ್ಯಂತರ ಆದೇಶ ಮಾಡಿತು. ಅಲ್ಲದೆ, ಅರ್ಜಿ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳಾದ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿತು.

ಶಾಲೆಗಳ ಮಾನ್ಯತಾ ನವೀಕರಣಕ್ಕೆ ಆಡಳಿತ ಮಂಡಳಿಗಳು ಪ್ರತಿ ವರ್ಷ ಅರ್ಜಿ ಸಲ್ಲಿಸಬೇಕು. ತೆರಿಗೆ ಪಾವತಿ, ನಿವೇಶನ ಪತ್ರ, ಖಾತಾ ಪತ್ರ ಹಾಗೂ ಕಂದಾಯ ರಸೀದಿ ಸಲ್ಲಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಕರ್ನಾಟಕ ಶಿಕ್ಷಣ ಕಾಯಿದೆ-1983ರ ಸೆಕ್ಷನ್ 36ರಡಿ ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ) ನಿಯಮಗಳು-1999ರ ನಿಯಮ 3ರನ್ವಯ ಶಾಲಾ ಶಿಕ್ಷಣ ಇಲಾಖೆ 2024ರ ಜುಲೈ 24ರಂದು ಸುತ್ತೋಲೆ ಹೊರಡಿಸಿದೆ.

ಆದರೆ, ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್ 36ರ ಪ್ರಕಾರ ಕಾಲ ಕಾಲಕ್ಕೆ ನವೀಕರಣ ಅಗತ್ಯವಿಲ್ಲ. ಅದೇ ರೀತಿ ಶಿಕ್ಷಣ ನಿಯಮಗಳು 1999ರಂತೆ ಮಾನ್ಯತಾ ನವೀಕರಣ ಅವಧಿ 10 ವರ್ಷ ಇದೆ. ಹೀಗಿದ್ದಾಗ, ಇವರೆಡಕ್ಕೂ ವಿರುದ್ಧವಾಗಿ ಸುತ್ತೋಲೆ ಹೊರಡಿಸಲಾಗಿದೆ. ತೆರಿಗೆ ಪಾವತಿ, ಖಾತಾ ಪತ್ರ, ಕಂದಾಯ ರಸೀದಿ ಇತ್ಯಾದಿ ಭೂ ಕಂದಾಯ ಕಾಯಿದೆ ವ್ಯಾಪ್ತಿಗೆ ಒಳಪಡುತ್ತದೆ. ಅವುಗಳ ಉಲ್ಲಂಘನೆ ಆದಲ್ಲಿ, ಸಂಬಂಧಪಟ್ಟ ಕಾಯಿದೆ ಅನ್ವಯ ಸಂಬಧಿಸಿದ ಪ್ರಾಧಿಕಾರಗಳು ಕ್ರಮ ಕೈಗೊಳ್ಳುತ್ತವೆ. ಆ ಷರತ್ತುಗಳನ್ನು ಶಿಕ್ಷಣ ಕಾಯಿದೆ ಅಡಿ ವಿಧಿಸುವುದು ಸರಿಯಲ್ಲ. ಆದ್ದರಿಂದ, 2024ರ ಜುಲೈ 24ರಂದು ಹೊರಡಿಸಿರುವ ಸುತ್ತೋಲೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.