ಬೇಸಿಗೆಯ ಧಗೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 18ರಿಂದ ಮೇ 31ರವರೆಗೆ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ವಕೀಲರು ಕಪ್ಪು ಕೋಟ್ ಧರಿಸದೇ ಕಲಾಪದಲ್ಲಿ ಭಾಗಿಯಾಗಲು ವಿನಾಯಿತಿ ನೀಡುವ ನಿರ್ಧಾರವನ್ನು ಪೂರ್ಣ ನ್ಯಾಯಾಲಯದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಏಪ್ರಿಲ್ 5ರಂದು ನೀಡಿರುವ ಮನವಿ ಆಧರಿಸಿ ಏಪ್ರಿಲ್ 16ರಂದು ನಡೆದಿರುವ ಪೂರ್ಣ ನ್ಯಾಯಾಲಯದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ದೈನಂದನಿಂದ ಸೂಚಿತ ಡ್ರೆಸ್‌ಗೆ ಬದಲಾಗಿ ವಕೀಲರು ಶ್ವೇತವರ್ಣದ ಶರ್ಟ್/ ಶ್ವೇತವರ್ಣದ ಸಲ್ವಾರ್ ಕಮೀಜ್ ಅಥವಾ ಗಂಭೀರ ವರ್ಣದ ಸೀರೆ ಜೊತೆಗೆ ಸಾದಾ ಶ್ವೇತ ವರ್ಣದ ಕುತ್ತಿಗೆ ಬ್ಯಾಂಡ್ ಧರಿಸಿ ಕಲಾಪದಲ್ಲಿ ಭಾಗಿಯಾಗಬಹುದು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ ಎಸ್ ಭರತ್ ಕುಮಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.