ಆದಾಯ ತೆರಿಗೆ ಕಾಯಿದೆಯಡಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸುವಾಗ ಪಿಎಂ ಕೇರ್ಸ್ ನಿಧಿ ಸಲ್ಲಿಸಿದ್ದ ದಾಖಲೆಗಳ ಮಾಹಿತಿ ಮತ್ತು ಪ್ರತಿಗಳನ್ನು ಒದಗಿಸುವಂತೆ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದ್ದ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶಕ್ಕೆ ದೆಹಲಿ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ಅಲ್ಲದೆ ಆದಾಯ ತೆರಿಗೆ ಇಲಾಖೆಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ)/ಆದಾಯ ತೆರಿಗೆ ಉಪ ಆಯುಕ್ತರು (ಮುಖ್ಯ ಕಚೇರಿ) (ವಿನಾಯಿತಿ) ಅವರ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ನೋಟಿಸ್ ನೀಡಿದ್ದಾರೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಜಿ ಅಡಿಯಲ್ಲಿ ಪಿಎಂ ಕೇರ್ಸ್ ನಿಧಿಗೆ ಅನುಮೋದನೆ ನೀಡಲಾಗಿದೆ. ಇದು ತೆರಿಗೆದಾರರಿಗೆ ದೇಣಿಗೆಯಾಗಿ ನೀಡಿದ ವಿವಿಧ ಕೊಡುಗೆಗಳಿಂದ ತೆರಿಗೆ ಕಡಿತಗಳನ್ನು ಪಡೆಯಲು ಅನುಮತಿಸುತ್ತದೆ.
ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಿತ್ತಲ್ ಅವರು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿಯಲ್ಲಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಸಿಐಸಿ ನೀಡಿದ ಆದೇಶವನ್ನು ಆದಾಯ ತೆರಿಗೆ ಇಲಾಖೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.