Karnataka High Court
Karnataka High Court 
ಸುದ್ದಿಗಳು

[ಕುಡಗೋಲಿನಿಂದ ಸೋದರ ಸಂಬಂಧಿಗಳ ಮೇಲೆ ದಾಳಿ] ಆಸ್ತಿ ಸಂರಕ್ಷಿಸಲು ವೈಯಕ್ತಿಕ ರಕ್ಷಣೆ ಹಕ್ಕು ಚಲಾವಣೆ: ಹೈಕೋರ್ಟ್‌

Bar & Bench

ಜಮೀನು ವ್ಯಾಜ್ಯ ಸಂಬಂಧ ನಡೆದ ಗಲಾಟೆಯಲ್ಲಿ ಆತ್ಮ ರಕ್ಷಣೆಗಾಗಿ ಸೋದರ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಆರೋಪದಿಂದ ಮೂವರನ್ನು ಈಚೆಗೆ ಖುಲಾಸೆಗೊಳಿಸಿರುವ ಕರ್ನಾಟಕ ಹೈಕೋರ್ಟ್, “ಆಸ್ತಿ ಸಂರಕ್ಷಿಸಲು ವೈಯಕ್ತಿಕ ರಕ್ಷಣೆ ಹಕ್ಕು ಚಲಾವಣೆ ಮಾಡಲಾಗಿದೆ” ಎಂದಿದೆ.

ರಾಮನಗರದ ನಾಗೇಶ್ ಹಾಗೂ ಇತರೆ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಆತ್ಮ ರಕ್ಷಣೆಯಿಂದ ಪ್ರತಿದಾಳಿ ನಡೆಸಿರುವುದು ಸಾಕ್ಷ್ಯಧಾರಗಳ ಸಮೇತ ಸಾಬೀತಾದರೆ, ಅದನ್ನು ಪರಿಗಣಿಸಲು ನ್ಯಾಯಾಲಯಕ್ಕೆ ಮುಕ್ತ ಅವಕಾಶವಿರುತ್ತದೆ. ಆಸ್ತಿ ಸಂರಕ್ಷಿಸಲು ವೈಯಕ್ತಿಕ ರಕ್ಷಣೆ ಹಕ್ಕು ಚಲಾವಣೆ ಮಾಡಲಾಗಿದೆ. ಪ್ರಕರಣದಲ್ಲಿ ಅರ್ಜಿದಾರರ ವೈಯಕ್ತಿಕ ರಕ್ಷಣೆ ಹಕ್ಕನ್ನು ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯ ವಿಫಲವಾಗಿವೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಆರೋಪಿಗಳು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿಲ್ಲ ಎಂಬುದಾಗಿ ವಿಚಾರಣಾಧೀನ ನ್ಯಾಯಾಲಯ ತಿಳಿಸಿದೆ. ಆ ಅಪರಾಧ ಕೃತ್ಯದಿಂದ ಆರೋಪಿಗಳನ್ನು ಖುಲಾಸೆ ಸಹ ಮಾಡಿದೆ. ಅತಿಕ್ರಮ ಪ್ರವೇಶ ಮಾಡಿಲ್ಲ ಎಂದಾದರೆ ಗಲಾಟೆಗೆ ಉದ್ಭವಿಸಲು ಕಾರಣ ಇಲ್ಲದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟಿದೆ.

“ಜಮೀನು ವ್ಯಾಜ್ಯದ ವಿಚಾರಣೆ ನಡೆಸಿದ್ದ ಸಿವಿಲ್ ನ್ಯಾಯಾಲಯವು ಆರೋಪಿಗಳೇ ವಿವಾದಿತ ಜಮೀನಿನ ಮಾಲೀಕರಾಗಿದ್ದಾರೆ ಎಂಬುದಾಗಿ ತೀರ್ಪು ನೀಡಿದೆ. ಗಾಯಗೊಂಡಿದ್ದ ಸಹೋದರ ಸಂಬಂಧಿಕರು ಆರೋಪಿಗಳ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಜಮೀನು ಬಳಿಗೆ ಆರೋಪಿಗಳು ತೆರಳಿದಾಗ ಗಲಾಟೆ ನಡೆದಿದೆ. ಆರೋಪಿಗಳು ಮಾರಾಕಾಸ್ತ್ರ ಹೊಂದಿದ್ದನ್ನು ಯಾವ ಸಾಕ್ಷಿಯೂ ದೃಢಪಡಿಸಿಲ್ಲ. ನಿಶಸ್ತ್ರರಾಗಿದ್ದ ಆರೋಪಿಗಳು ಆತ್ಮರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಿಂದ ಸೋದರ ಸಂಬಂಧಿಕರು ಗಾಯಗೊಂಡಿದ್ದಾರೆ. ಆದ್ದರಿಂದ ಅವರು ನಿರಪರಾಧಿಗಳಾಗಿದ್ದಾರೆ” ಎಂದು ಹೈಕೋರ್ಟ್‌ ಹೇಳಿದೆ.

ಪ್ರಕರಣದ ಹಿನ್ನೆಲೆ: ಆರೋಪಿಗಳಾದ ರಾಮನಗರದ ನಾಗೇಶ್, ರಾಮಕೃಷ್ಣ ಮತ್ತು ಜಯರಾಮ್ ಮತ್ತು ಅವರ ಸಹೋದರ ಸಂಬಂಧಿಕರ ನಡುವೆ ಜಮೀನೊಂದರ ಸಂಬಂಧ ಸಿವಿಲ್ ವ್ಯಾಜ್ಯವಿತ್ತು. ಅದೇ ವಿಚಾರವಾಗಿ 2008ರ ಆಗಸ್ಟ್‌ನಲ್ಲಿ ನಡೆದ ಗಲಾಟೆಯಲ್ಲಿ ಆರೋಪಿಗಳು, ತಮ್ಮ ಸೋದರ ಸಂಬಂಧಿಕರ ಮೇಲೆ ಮುಚ್ಚಿನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದರು ಎಂಬ ಆರೋಪವಿತ್ತು.

ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 447 (ಅತಿಕ್ರಮ ಪ್ರವೇಶ), 326-324 (ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ), 506 (ಜೀವ ಬೆದರಿಕೆ) ಆರೋಪ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಆರೋಪಿಗಳಿಗೆ ಶಿಕ್ಷೆ ವಿಧಿಸಿ 2010ರ ಜುಲೈ 22ರಂದು ರಾಮನಗರ ಪ್ರಧಾನ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯ ಆದೇಶಿಸಿತ್ತು. ಅದನ್ನು 2013ರ ಜೂನ್‌ 28ರಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಾಯಂಗೊಳಿಸಿತ್ತು. ವಿಚಾರಣಾಧೀನ ನ್ಯಾಯಾಲಯಗಳ ತೀರ್ಪು ರದ್ದು ಕೋರಿ ಆರೋಪಿಗಳು ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.