Rahul Gandhi disqualification
Rahul Gandhi disqualification 
ಸುದ್ದಿಗಳು

ರಾಹುಲ್ ಗಾಂಧಿ ಅನರ್ಹತೆ: ಮುಂದಿನ ಕಾನೂನು ಸಾಧ್ಯತೆಗಳೇನು?

Bar & Bench

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿದ ನಂತರ ಶುಕ್ರವಾರ ಅವರನ್ನು ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಪ್ರತಿಪಕ್ಷದ ನಾಯಕರು ಈ ಕ್ರಮದ ವಿರುದ್ಧ ಧ್ವನಿ ಎತ್ತಿದ್ದು ಇತ್ತ ಕಾನೂನು ವಲಯದಲ್ಲಿ ಮುಂದೇನಾಗಲಿದೆ ಎಂಬುದು ಬಹುಮುಖ್ಯ ಪ್ರಶ್ನೆಯಾಗಿದೆ. ಅದರಲ್ಲಿಯೂ ಅನರ್ಹತೆಯನ್ನು ಬದಿಗೆ ಸರಿಸಬಹುದೇ? ಅನರ್ಹತೆಯನ್ನು ಬದಿಗೆ ಸರಿಸಿದ ಪ್ರಕರಣಗಳು ಇತ್ತೀಚೆಗೆ ನಡೆದಿವೆಯೇ? ಎನ್ನುವ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಈ ಕುರಿತು ಬೆಳಕು ಚೆಲ್ಲುವ ಯತ್ನ ಇಲ್ಲಿದೆ.

ಅನರ್ಹತೆಯನ್ನು ಬದಿಗೆ ಸರಿಸಲು ಸಾಧ್ಯವೇ?

ಸೂರತ್ ನ್ಯಾಯಾಲಯದ ಶಿಕ್ಷೆಗೆ ಉನ್ನತ ನ್ಯಾಯಾಲಯ ತಡೆ ನೀಡಿದರೆ ಮಾತ್ರ ರಾಹುಲ್‌ ಅವರ ಅನರ್ಹತೆ ರದ್ದಾಗಲಿದೆ. ಆದರೆ ಮೇಲ್ಮನವಿ ಸಲ್ಲಿಸಿದಾಗ ರಾಹುಲ್‌ ಪರವಾಗಿ ಮೇಲ್ಮನವಿ ತೀರ್ಪು ಹೊರಬರಬೇಕಿದೆ. ಅದು ಇಡಿಯಾಗಿ ದೋಷಿ ಎಂಬ ತೀರ್ಪನ್ನೇ ಬದಿಗೆ ಸರಿಸಬೇಕಿದೆ ವಿನಾ ಕೇವಲ ಅವರಿಗೆ ವಿಧಿಸಿದ ಶಿಕ್ಷೆಯನ್ನಲ್ಲ.

ಲೋಕ್ ಪ್ರಹರಿ ಮತ್ತು ಭಾರತ ಒಕ್ಕೂಟ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ನೀಡಿದ ತೀರ್ಪಿನ ಪ್ರಕಾರ, ಸಿಆರ್‌ಪಿಸಿ ಸೆಕ್ಷನ್ 389ರ ಅಡಿಯಲ್ಲಿ ಶಿಕ್ಷೆಯನ್ನು ತಡೆದಾಗ ಸೆಕ್ಷನ್ 8ರ ಅಡಿಯಲ್ಲಿನ ಅನರ್ಹತೆಯು ಕಾರ್ಯಗತಗೊಳ್ಳದು ಎಂದು ನ್ಯಾಯಾಲಯ ಹೇಳಿದೆ.

"ದೋಷಿ ಎನ್ನುವ ತೀರ್ಪಿಗೆ ಮೇಲ್ಮನವಿ ನ್ಯಾಯಾಲಯವು ತಡೆ ನಿಡಿದಾಗ ಅದು ಅಸಮರ್ಥನೀಯ ಅಥವಾ ಕ್ಷುಲ್ಲಕ ಕಾರಣದ ಆಧಾರದಲ್ಲಿ ಮಾಡಲಾದ ದೋಷ ನಿರ್ಣಯವು ಗಂಭೀರ ಪೂರ್ವಗ್ರಹಕ್ಕೆ ಕಾರಣವಾಗದಂತೆ ಖಚಿತಪಡಿಸುತ್ತದೆ" ಎಂದು ಅಂದಿನ ಸಿಜೆಐ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ ಎಮ್ ಖಾನ್ವಿಲ್ಕರ್ ಹಾಗೂ ಡಿ ವೈ ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ ತೀರ್ಪು ನೀಡಿತ್ತು.

ಅನರ್ಹತೆ ಬದಿಗೆ ಸರಿಸಿದ ಈಚಿನ ಉದಾಹರಣೆಗಳಿವೆಯೇ?

ತಮ್ಮ ರಾಜಕೀಯ ಎದುರಾಳಿಯ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಪಿ ಪಿ ಅವರಿಗೆ ಕೇರಳ ಹೈಕೋರ್ಟ್‌ ಈ ವರ್ಷದ ಜನವರಿಯಲ್ಲಿ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿತು. ಆ ಮೂಲಕ ಲೋಕಸಭಾ ಸೆಕ್ರೆಟರಿಯೇಟ್‌ ಮಾಡಿದ್ದ ಅನರ್ಹತೆಯನ್ನು ನ್ಯಾಯಾಲಯ ಪರಿಣಾಮಕಾರಿಯಾಗಿ ನಿಷ್ಕ್ರಿಯಗೊಳಿಸಿತು.

ದುಬಾರಿ ಮರುಚುನಾವಣೆ ತಪ್ಪಿಸಲು ಮತ್ತು ಚುನಾಯಿತ ಅಭ್ಯರ್ಥಿಯ ಅಧಿಕಾರಾವಧಿ ಕೇವಲ 15 ತಿಂಗಳಿವೆ ಎಂಬುದನ್ನು ಪರಿಗಣಿಸಿ ಇಂತಹ ತೀರ್ಪು ನೀಡಲಾಗಿದೆ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಆದೇಶದಲ್ಲಿ ತಿಳಿಸಿದ್ದರು. ಹೀಗಾಗಿ, ಇದು ಅಪರೂಪದ ಪ್ರಕರಣವಾಗಿದ್ದು  ಶಿಕ್ಷೆಯನ್ನು ಅಮಾನತುಗೊಳಿಸುವ ಅಸಾಧಾರಣ ಸನ್ನಿವೇಶವನ್ನು ಒಳಗೊಂಡಿರುತ್ತದೆ ಎಂದು ಹೈಕೋರ್ಟ್ ಹೇಳಿತ್ತು.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಲಕ್ಷದೀಪ ಆಡಳಿತವು ಮೇಲ್ಮನವಿ ಸಲ್ಲಿಸಿದ ನಂತರ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಇದರಿಂದ ಅನರ್ಹತೆ ರದ್ದತಿ ಆದೇಶಕ್ಕೆ ಬಲ ದೊರೆತಿತ್ತು.