ಸುದ್ದಿಗಳು

ಶಾಲಾ, ಕಾಲೇಜುಗಳಿಗೂ ಕಾನೂನು ಅರಿವು ಕಾರ್ಯಕ್ರಮ ವಿಸ್ತರಣೆ: ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ

“ಗ್ರಾಮೀಣ ಭಾಗಗಳಿಗೂ ಕಾನೂನು ಸೇವೆಗಳು ಲಭ್ಯವಾಗುವಂತೆ ಮಾಡುವ ಸಲುವಾಗಿ ಸಂಚಾರಿ ಕಾನೂನು ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಿ ಜನರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದ ಸಿಜೆ.

Bar & Bench

“ಜನರಿಗೆ ಕಾನೂನು ಹಕ್ಕು ಹಾಗೂ ಜವಾಬ್ದಾರಿ ತಿಳಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೂ ಕಾನೂನು ಅರಿವು ಕಾರ್ಯಕ್ರಮ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ” ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ತಿಳಿಸಿದ್ದಾರೆ.

ರಾಜ್ಯ ಹೈಕೋರ್ಟ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಬೆಂಗಳೂರು ವಕೀಲರ ಸಂಘದ ಸಹಭಾಗಿತ್ವದಲ್ಲಿ ಈಚೆಗೆ ಹೈಕೊರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಕಾನೂನು ಸೇವಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

“ಗ್ರಾಮೀಣ ಭಾಗಗಳಿಗೂ ಕಾನೂನು ಸೇವೆಗಳು ಲಭ್ಯವಾಗುವಂತೆ ಮಾಡುವ ಸಲುವಾಗಿ ಸಂಚಾರಿ ಕಾನೂನು ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಿ ಜನರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದರು.

“ಪ್ರಸ್ತುತ ನ್ಯಾಯಾಲಯಗಳ ಮೇಲೆ ಇರುವ ಒತ್ತಡ ಕಡಿಮೆ ಮಾಡುವುದಕ್ಕಾಗಿ ಪರ್ಯಾಯ ಮಾರ್ಗಗಳಾದ ಮಧ್ಯಸ್ಥಿಕೆ ಕೇಂದ್ರಗಳಿಗೆ ಒತ್ತು ನೀಡಲಾಗುವುದು. ನಾಗರಿಕ ಸಮಾಜ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಸುಸ್ಥಿರ ಕಾನೂನು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಲಾಗುವುದು. ಆ ಮೂಲಕ ಕಾನೂನು ಎನ್ನುವುದು ಒಂದು ಸವಲತ್ತಲ್ಲ. ಬದಲಿಗೆ ಅದೊಂದು ಹಕ್ಕು ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗುವುದು” ಎಂದರು.

“ಕಾನೂನು ಕಾಲೇಜು ಮತ್ತು ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಸುಧಾರಣೆ ತರುವ ಸಲುವಾಗಿ ಪ್ರಾಯೋಗಿಕ ಕಾನೂನು ಕೌಶಲ್ಯ ಹೆಚ್ಚಳ ಮಾಡುವುದು ಮತ್ತು ನೈತಿಕ ಮೌಲ್ಯಗಳ ಒಳಗೊಳ್ಳುವಂತೆ ಪಠ್ಯಕ್ರಮ ಜಾರಿ ಮಾಡಲಾಗುವುದು. ನ್ಯಾಯದಾನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವುದು ಮತ್ತು ಮತ್ತಷ್ಟು ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕಾಗಿ ತಂತ್ರಜ್ಞಾನದ ನೆರವು ಪಡೆದುಕೊಳ್ಳಲಾಗುವುದು” ಎಂದರು.

ಪ್ರಸ್ತುತ ರಾಜ್ಯದಲ್ಲಿ 1,144 ಕಾನೂನು ಸೇವಾ ಪರಿಹಾರ ಕೇಂದ್ರಗಳಿದ್ದು, 2,782 ವಕೀಲರು, 4,848 ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ ವರ್ಷ 8,017 ಪರಿಹಾರ ಕೇಂದ್ರಗಳ ಮೂಲಕ ಇತ್ಯರ್ಥ ಪಡಿಸಲಾಗಿದೆ.

ಕಳೆದ ಜನವರಿಯಿಂದ ರಾಜ್ಯಾದ್ಯಂತ 27,506 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, 20 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿ ಪ್ರಾಧಿಕಾರದಿಂದ ಸೇವೆ ಪಡೆದಿದ್ದಾರೆ. ಕರ್ನಾಟಕವನ್ನು ಕಾನೂನು ಸೇವೆಗಳಲ್ಲಿ ದೇಶದಲ್ಲಿಯೇ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಹಿರಿಯ ನ್ಯಾಯಮೂರ್ತಿ ಪಿ ಎಸ್‌ ದಿನೇಶ್ ಕುಮಾರ್ ಅವರು ಎಲ್ಲರಿಗೂ ನ್ಯಾಯದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ನ್ಯಾಯ ಪಡೆಯುವ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಸಮಾಜದಲ್ಲಿನ ದುರ್ಬಲ ವರ್ಗಕ್ಕೆ ಕಾನೂನು ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.

ಹೈಕೋರ್ಟ್‌ ಕಾನೂನು ಸೇವಾ ಸಮಿತಿಯು ಅಧ್ಯಕ್ಷರಾದ ನ್ಯಾಯಮೂರ್ತಿ ಕೆ ಸೋಮಶೇಖರ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈ ಶಂಕರ್, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತಿತರರಿದ್ದರು.