ಸುದ್ದಿಗಳು

ಸುಲಿಗೆ ಪ್ರಕರಣ: ನೋಟಿಸ್‌ ನೀಡಿದ 10 ದಿನಗಳಲ್ಲಿ ತನಿಖೆಗೆ ಹಾಜರಾಗಲು ಶ್ರೀನಾಥ್‌ ಜೋಶಿಗೆ ಹೈಕೋರ್ಟ್‌ ಸೂಚನೆ

ನಿವೃತ್ತ ಹೆಡ್‌ ಕಾನ್‌ಸ್ಟೆಬಲ್‌ ನಿಂಗಪ್ಪ ಸಾವಂತ್‌ ಅವರು ಪ್ರಕರಣದ ಸಂಬಂಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಆನಂತರದ ಕಾನೂನು ಪ್ರಕ್ರಿಯೆ ರದ್ದತಿ ಕೋರಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ನ್ಯಾಯಾಲಯವು ಕಾಯ್ದಿರಿಸಿದೆ.

Bar & Bench

ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ನೌಕಕರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ತನಿಖೆ ಹಾಜರಾಗುವಂತೆ ಸೂಚಿಸಿ ಹೊಸದಾಗಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಎಂ. ಜೋಶಿ ಅವರಿಗೆ ನೋಟಿಸ್‌ ಜಾರಿ ಮಾಡಲು ಲೋಕಾಯುಕ್ತ ಪೊಲೀಸರಿಗೆ ಅನುಮತಿಸಿರುವ ಕರ್ನಾಟಕ ಹೈಕೋರ್ಟ್‌, ನೋಟಿಸ್‌ ನೀಡಿದ ದಿನದಿಂದ 10 ದಿನಗಳ ಒಳಗೆ ತನಿಖೆಗೆ ಹಾಜರಾಗಬೇಕು ಎಂದು ಶ್ರೀನಾಥ್‌ ಜೋಶಿಗೆ ನಿರ್ದೇಶಿಸಿದೆ.

ತನಿಖೆಗೆ ಹಾಜರಾಗುವಂತೆ ಜೂನ್‌ 15ರಂದು ಜಾರಿ ಮಾಡಿರುವ ನೋಟಿಸ್‌ಗೆ ತಡೆ ನೀಡುವಂತೆ ಕೋರಿ ಶ್ರೀನಾಥ್‌ ಎಂ. ಜೋಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ.

ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದ ದಿನಾಂಕ ಮುಗಿದಿರುವುದರಿಂದ ಅರ್ಜಿಯೂ ಅನೂರ್ಜಿತವಾಗಿದೆ. ಹೀಗಾಗಿ, ಲೋಕಾಯುಕ್ತ ಪೊಲೀಸರು ಹೊಸದಾಗಿ ಜೋಶಿ ಅವರಿಗೆ ನೋಟಿಸ್‌ ಜಾರಿ ಮಾಡಬೇಕು. ನೋಟಿಸ್‌ ಜಾರಿಯಾದ ಹತ್ತು ದಿನಗಳ ಒಳಗೆ ಜೋಶಿ ತನಿಖೆಯಲ್ಲಿ ಭಾಗಿಯಾಗಬೇಕು. ನಿರೀಕ್ಷಣಾ ಜಾಮೀನು ಕೋರಿ ಜೋಶಿ ಅವರು ಸಕ್ಷಮ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದೂ ಸೇರಿ ಕಾನೂನಿನಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಕೆ ಮಾಡಬಹುದಾಗಿದೆ ಎಂದು ನ್ಯಾಯಾಲಯವು ಅರ್ಜಿ ಇತ್ಯರ್ಥಪಡಿಸಿತು.

ಶ್ರೀನಾಥ್‌ ಜೋಶಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ತನಿಖೆಗೆ ಹಾಜರಾಗುವಂತೆ ಶ್ರೀನಾಥ್‌ ಜೋಶಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಇದನ್ನು ಪ್ರಶ್ನಿಸಲಾಗಿದೆ. ನಿಂಗಪ್ಪ ಸಾವಂತ್‌ ಪ್ರಕರಣದಲ್ಲಿ ಎಫ್‌ಐಆರ್‌ ವಜಾ ಆದರೆ ನಮ್ಮ ನೋಟಿಸ್‌ ಉಳಿಯುವುದಿಲ್ಲ” ಎಂದರು.

ಆಗ ಪೀಠವು ಹೊಸದಾಗಿ ನೋಟಿಸ್‌ ನೀಡಿದರೆ ಅವರು ತನಿಖೆ ಹಾಜರಾಗಲಿದ್ದಾರೆ ಎಂದು ಮೌಖಿಕವಾಗಿ ಹೇಳಿತು.

ನಿಂಗಪ್ಪ ಅರ್ಜಿಯ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ನಿವೃತ್ತ ಹೆಡ್‌ ಕಾನ್‌ಸ್ಟೆಬಲ್‌ ನಿಂಗಪ್ಪ ಸಾವಂತ್‌ ಅವರು ಪ್ರಕರಣದ ಸಂಬಂಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಆನಂತರದ ಕಾನೂನು ಪ್ರಕ್ರಿಯೆ ರದ್ದತಿ ಕೋರಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ನ್ಯಾಯಾಲಯವು ಮಂಗಳವಾರ ಕಾಯ್ದಿರಿಸಿದೆ.

ನಿಂಗಪ್ಪರನ್ನು ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್‌ ದಳವಾಯಿ ಅವರು “ನಿಂಗಪ್ಪ ಸಾವಂತ್‌ ಅವರು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ದೂರಿನಲ್ಲಿ ಯಾವುದೇ ಅಧಿಕಾರಿಗಳು ಭಾಗಿಯಾಗಿಲ್ಲ. ಹೀಗಾಗಿ, ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 7A ಅನ್ವಯಿಸುವುದಿಲ್ಲ. ಸುಲಿಗೆ ಆರೋಪವು ಐಪಿಸಿ ಅಪರಾಧವಾಗಿದ್ದು, ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ ಅನ್ವಯಿಸಲಾಗದು. ಇಂಥ ಆರೋಪಿತ ಪ್ರಕರಣಗಳನ್ನು ವ್ಯಾಪ್ತಿ ಹೊಂದಿದ ಪೊಲೀಸರು ತನಿಖೆ ನಡೆಸಬೇಕೆ ವಿನಾ ಲೋಕಾಯುಕ್ತ ಪೊಲೀಸರಲ್ಲ” ಎಂದರು.

ಲೋಕಾಯುಕ್ತ ಪೊಲೀಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ವಾಟ್ಸಾಪ್‌ ಸಂದೇಶಗಳನ್ನು ಎಫ್‌ಐಆರ್‌ ಭಾಗವಾಗಿಸಲಾಗಿದೆ. ಯಾವುದೇ ವ್ಯಕ್ತಿ ತನಗೆ ಹಣ ನೀಡಿ ಎಂದು ಕೇಳುವುದಿಲ್ಲ. ತಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಇಲ್ಲಿ ನಿಂಗಪ್ಪ ಮಾಡಿರುವ ಕೃತ್ಯ ಅದೇ” ಎಂದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ನಿಂಗಪ್ಪ ಸಾವಂತ್‌ ಅವರು ಲೋಕಾಯುಕ್ತ ಮತ್ತು ಬಿಬಿಎಂಪಿ ಮತ್ತು ಅಬಕಾರಿ ಅಧಿಕಾರಿಗಳ ಬಳಿ ದಳ್ಳಾಳಿಯ ಕೆಲಸ ಮಾಡಿರುವುದು ತನಿಖೆಯಿಂದ ಹೊರಬರಬೇಕಿದೆ” ಎಂದಿತು. ಅಂತಿಮವಾಗಿ ವಿಸ್ತೃತ ವಾದ-ಪ್ರತಿವಾದ ಆಲಿಸಿ, ಆದೇಶ ಕಾಯ್ದಿರಿಸಿತು.