Rahul Gandhi and Supreme Court 
ಸುದ್ದಿಗಳು

ಫ್ಯಾಕ್ಟ್‌ಚೆಕ್‌: ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರ ಬಡ್ತಿಗೆ ಸುಪ್ರೀಂ ನೀಡಿಲ್ಲ ತಡೆ

ಈ ಹಿಂದೆ ತಡೆಯಾಜ್ಷೆ ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ತಾವುನೀಡಿದ್ದ ತಡೆಯಾಜ್ಞೆಯನ್ನು ಮಾಧ್ಯಮಗಳು ತಪ್ಪಾಗಿ ವರದಿಮಾಡಿವೆ ಎಂದು ʼಬಾರ್ ಅಂಡ್ ಬೆಂಚ್ʼಗೆ ತಿಳಿಸಿದರು.

Bar & Bench

ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದ ಗುಜರಾತ್ ನ್ಯಾಯಾಧೀಶರ ಬಡ್ತಿಯನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ ಎಂದು ಇತ್ತೀಚೆಗೆ ಮಾಧ್ಯಮಗಳು ಮಾಡಿದ್ದ ವರದಿ ಸತ್ಯಕ್ಕೆ ದೂರ ಎಂದು ನ್ಯಾಯಮೂರ್ತಿ ಎಂ ಆರ್‌ ಶಾ ಹೇಳಿದ್ದಾರೆ.  

ಮಾರ್ಚ್‌ನಲ್ಲಿ ಕ್ರಿಮಿನಲ್ ಮಾನನಷ್ಟದ ಆರೋಪದಲ್ಲಿ ರಾಹುಲ್‌ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿದ್ದ ಸೂರತ್  ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಹಸ್ಮುಖ್‌ಭಾಯ್ ವರ್ಮಾ ಅವರ ವರ್ಗಾವಣೆಗೆ ತಡೆಯಾಜ್ಞೆ ನೀಡಲಾಗಿದೆ ಎಂದು ತಪ್ಪಾಗಿ ಅರ್ಥೈಸಲಾದ ಆದೇಶವು ಮೇ 12ರಂದು ಸುಪ್ರೀಂ ಕೋರ್ಟ್ ನೀಡಿದ ವಿಶಾಲ ಆದೇಶದ ಭಾಗವಾಗಿದೆ.

ಈ ಆದೇಶದ ಮೂಲಕ, ಹಿರಿತನ ಮತ್ತು ಮೆರಿಟ್ ನಿಯಮದ ಆಧಾರದ ಮೇಲೆ ಹಿರಿತನಕ್ಕೆ ಆದ್ಯತೆ ನೀಡಿ 68 ನ್ಯಾಯಾಂಗ ಅಧಿಕಾರಿಗಳಿಗೆ ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ನೀಡುವ ಗುಜರಾತ್ ಹೈಕೋರ್ಟ್‌ನ ನಿರ್ಧಾರ, ನಂತರ ಅದು ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.

ಆದರೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಂ ಆರ್‌ ಶಾ ಈ ವಿಚಾರವನ್ನು ನಿರಾಕರಿಸಿದ್ದಾರೆ. ಭಾನುವಾರ ʼಬಾರ್‌ ಅಂಡ್‌ ಬೆಂಚ್‌ʼಗೆ ನೀಡಿದ ಸಂದರ್ಶನದಲ್ಲಿ ಅವರು ತಡೆಯಾಜ್ಞೆ ಕುರಿತಂತೆ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ರಾಹುಲ್‌ ಗಾಂಧಿ ಅವರನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಾಧೀಶರು ತಡೆಯಾಜ್ಞೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೇವಲ ಅರ್ಹತೆಯ ಆಧಾರದ ಮೇಲೆ ಬಡ್ತಿ ಪಡೆಯುವ ಪಟ್ಟಿಯಲ್ಲಿರುವವರಿಗೆ ಈ ತಡೆಯಾಜ್ಞೆ ಅನ್ವಯಿಸುವುದಿಲ್ಲ, ಏಕೆಂದರೆ ಅವರು ಅರ್ಹತೆಯ ಆಧಾರದ ಮೇಲೆ ಬಡ್ತಿ ನೀಡಿದರೆ ಬಡ್ತಿ ಪಡೆಯಲು ಅರ್ಹರೇ ಆಗಿರುತ್ತಾರೆ ಎಂದು ಅವರು ವಿವರಿಸಿದ್ದಾರೆ.

“ಆ ಆದೇಶಕ್ಕೂ ಆ ವ್ಯಕ್ತಿಗೂ ಸಂಬಂಧವಿಲ್ಲ. ಸಮಸ್ಯೆಯು ಅರ್ಹತೆ  ಮತ್ತು ಹಿರಿತನ ಅಥವಾ ಹಿರಿತನ ಮತ್ತು ಅರ್ಹತೆಗೆ ಸಂಬಂಧಿಸಿದೆ. ಪೀಠವು ಎಲ್ಲಾ 68 ನ್ಯಾಯಾಧೀಶರ ಬಡ್ತಿಗೆ ತಡೆ ನೀಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿನ ವರದಿಗಳು ಹೇಳುತ್ತಿವೆ, ಆದರೆ ಆ ವ್ಯಕ್ತಿಗಳು ಆದೇಶವನ್ನು ಓದಿಲ್ಲ. ಮೆರಿಟ್ ಪಟ್ಟಿಯಿಂದ ಹೊರಗುಳಿದ ವ್ಯಕ್ತಿಗಳ (ಅರ್ಥಾತ್ ಹಿರಿತನದ ಆಧಾರದ ಮೇಲೆ ಮಾತ್ರವೇ ಬಡ್ತಿ ಪಡೆದವರು) ಬಡ್ತಿಯನ್ನು ಮಾತ್ರ ತಡೆಹಿಡಿಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

"ಆ ನ್ಯಾಯಾಧೀಶರಿಗೆ (ರಾಹುಲ್ ಗಾಂಧಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದ ನ್ಯಾಯಾಧೀಶರು) ಬಡ್ತಿ ಸಿಗಲಿಲ್ಲ ಎಂಬ ಸುದ್ದಿ ಓದಿದೆ. ಅದು ನಿಜವಲ್ಲ. ಅರ್ಹತೆಯ ಮೇರೆಗೆ ಅವರು ಬಡ್ತಿ ಪಡೆಯಲಿದ್ದಾರೆ. ಅರ್ಹತೆಯ ದೃಷ್ಟಿಯಿಂದ ಅವರು 68 ನ್ಯಾಯಾಧೀಶರಲ್ಲಿ ಮೊದಲಿಗರಾಗುತ್ತಾರೆ” ಎಂದು ನ್ಯಾ. ಶಾ ಹೇಳಿದರು.

ಸೇವಾ ಹಿರಿತನ ಮತ್ತು ಮೆರಿಟ್‌ ಆಧಾರದ ಮೇಲೆ ನೇಮಕಾತಿ ಮಾಡಿದ ಗುಜರಾತ್ ಸರ್ಕಾರ ಮತ್ತು ಗುಜರಾತ್ ಹೈಕೋರ್ಟ್‌ನ ಕ್ರಮ ಪ್ರಶ್ನಿಸಿ ಜಿಲ್ಲಾ ನ್ಯಾಯಾಧೀಶರ ಹುದ್ದೆ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ತಡೆಯಾಜ್ಞೆ ನೀಡಿತ್ತು.

ಮೆರಿಟ್‌ ಮತ್ತು ಸೇವಾ ಹಿರಿತನದ ಆಧಾರದ ಮೇಲೆಯೇ ನೇಮಕಾತಿ ನಡೆಯಬೇಕು. ಆದರೆ ಹಿರಿತನಕ್ಕಿಂತಲೂ ಮೆರಿಟ್‌ ಆಧಾರದಲ್ಲಿ ಬಡ್ತಿನೀಡಲಾಗಿದೆ ಎಂದು ಅರ್ಜಿದಾರರು ದೂರಿದ್ದರು. ನ್ಯಾಯಾಧೀಶ ವರ್ಮಾ ಅವರು ತಡೆಯಾಜ್ಞೆಯ ವ್ಯಾಪ್ತಿಗೆ ಬರುತ್ತಾರೆಯೇ ಅಥವಾ ಅರ್ಹತೆಯ ಆಧಾರದ ಮೇಲೆ ಬಡ್ತಿ ಪಡೆಯುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಬಾರ್ & ಬೆಂಚ್ ಮೇ 12ರಂದು ವರದಿ ಮಾಡಿತ್ತು.

ಮೆರಿಟ್ ಮತ್ತು ಹಿರಿತನದ ಮಾನದಂಡವನ್ನು ಪಾಲಿಸಿದರೂ ಅವರು ಅರ್ಹರಾಗಿರುವುದರಿಂದ ನ್ಯಾಯಾಧೀಶ ವರ್ಮಾ ಅವರು ತಡೆಯಾಜ್ಞೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾ. ಶಾ ಸ್ಪಷ್ಟಪಡಿಸಿದ್ದಾರೆ.