Fact Check / Justice DY Chandrachud 
ಸುದ್ದಿಗಳು

ನ್ಯಾ. ಚಂದ್ರಚೂಡ್‌ ಅಮೆರಿಕದ ಗ್ರೀನ್‌ ಕಾರ್ಡ್‌ ಹೊಂದಿಲ್ಲ; ಭಾವಿ ಸಿಜೆಐ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲಾಗಿದೆ

ಸಿಜೆಐ ಯು ಯು ಲಲಿತ್‌ ಬಳಿಕ ಅತಿ ಹಿರಿಯ ನ್ಯಾಯಮೂರ್ತಿಯಾದ ಡಿ ವೈ ಚಂದ್ರಚೂಡ್‌ ಅವರು ನವೆಂಬರ್‌ 8ರಂದು ಸುಪ್ರೀಂ ಕೋರ್ಟ್‌ನ ನೂತನ ಸಿಜೆಐ ಆಗಿ ನೇಮಕವಾಗುವ ಸಾಧ್ಯತೆ ಇದೆ.

Bar & Bench

ಭಾರತದಲ್ಲಿ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಮೇಲೆ ಪದೇಪದೇ ಆನ್‌ಲೈನ್‌ ದಾಳಿಗಳು ನಡೆಯುತ್ತಿದ್ದು, ನ್ಯಾಯಾಧೀಶರನ್ನು ಅವರ ಆದೇಶ, ಅವರು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಆಧರಿಸಿ ವ್ಯಾಪಕವಾಗಿ ಟೀಕೆ ಮತ್ತು ಟ್ರೋಲ್‌ ಮಾಡುವುದು ಸಾಮಾನ್ಯವೆನ್ನುವಂತಾಗಿದೆ. ಇಂಥದ್ದೇ ಸಂಗತಿಯೊಂದು ಪ್ರಸ್ತುತ ಮುನ್ನಲೆಗೆ ಬಂದಿದ್ದು, ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿರುವ ಡಿ ವೈ ಚಂದ್ರಚೂಡ್‌ ಅವರ ವಿರುದ್ಧ ಆನ್‌ಲೈನ್‌ನಲ್ಲಿ ಸುಳ್ಳು ಸುದ್ದಿಯೊಂದು ವ್ಯಾಪಕವಾಗಿ ಹರಿದಾಡುತ್ತಿದೆ.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಅಮೆರಿಕಾದಲ್ಲಿ ನೆಲೆಸಿ, ಕೆಲಸ ಮಾಡಲು ಅರ್ಹತೆ ಕಲ್ಪಿಸುವ ಗ್ರೀನ್‌ ಕಾರ್ಡ್‌ ಅನ್ನು ಹೊಂದಿದ್ದಾರೆ ಎಂಬ ವಿಚಾರ ಟ್ವಿಟರ್‌ನಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಈ ಕುರಿತು ʼಬಾರ್‌ ಅಂಡ್‌ ಬೆಂಚ್‌ʼ ಸುದ್ದಿಯ ನೈಜತೆ ಪರಿಶೀಲಿಸಿದ್ದು, ನ್ಯಾ. ಚಂದ್ರಚೂಡ್‌ ಅವರು ಗ್ರೀನ್‌ ಕಾರ್ಡ್‌ ಹೊಂದಿದ್ದಾರೆ ಎಂಬುದು ಸುಳ್ಳು ಸುದ್ದಿಯಾಗಿದೆ.

ಜುಲೈ 27ರಂದು ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ಅವರಿಗೆ ನ್ಯಾ. ಚಂದ್ರಚೂಡ್‌ ಅವರ ನೇತೃತ್ವದ ಪೀಠವು ಜಾಮೀನು ಮಂಜೂರು ಮಾಡಿತ್ತು. ಈ ಕುರಿತು ಪತ್ರಕರ್ತ ರಾಘವ್‌ ಓಹ್ರಿ ಅವರು ಅಮೆರಿಕಾದ ಗ್ರೀನ್‌ ಕಾರ್ಡ್‌ ಹೊಂದಿರುವ ವ್ಯಕ್ತಿ, ಸಂಘರ್ಷಕ್ಕೆ ಸಿಲುಕಿರುವ ಪತಿ ಮತ್ತು ಭಾರತ ಸುದ್ದಿ ನಿರೂಪಕ ಹೇಗೆ ಜುಬೈರ್‌ ನೆರವಿಗೆ ಧಾವಿಸಿದ್ದಾರೆ ನೋಡಿ. ಜುಬೈರ್‌ಗೆ ಜಾಮೀನು ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆಧರಿಸಿರಿದ್ದ ಹಿಂದಿನ ಈ ಮೂರು ತೀರ್ಪುಗಳಲ್ಲಿ ಎರಡರಲ್ಲಿ ನ್ಯಾ. ಚಂದ್ರಚೂಡ್‌ ಅವರು ಸಹ- ಲೇಖಕರಾಗಿದ್ದಾರೆ. ಈಗ ನ್ಯಾ. ಚಂದ್ರಚೂಡ್‌ ಅವರ ನೇತೃತ್ವದ ಪೀಠವು ಜುಬೈರ್‌ ಬಿಡುಗಡೆಗೆ ಆದೇಶಿಸಿದೆ ಎಂದು ಟ್ವೀಟ್‌ ಮಾಡಿದ್ದರು.

ಓಹ್ರಿ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಗ್ರೀನ್‌ ಕಾರ್ಡ್‌ ಹೋಲ್ಡರ್‌, ಸುಪ್ರೀಂ ಕೋರ್ಟ್‌ನಲ್ಲಿನ ಪ್ರಕರಣದಲ್ಲಿ ಮತ್ತೊಬ್ಬ ದಾವೆದಾರರಾಗಿದ್ದಾರೆ. ಜುಬೈರ್‌ಗೆ ಜಾಮೀನು ನೀಡುವ ವಿಚಾರದಲ್ಲಿ ಆ ಪ್ರಕರಣವನ್ನೂ ಸುಪ್ರೀಂ ಕೋರ್ಟ್‌ ಆಧರಿಸಿತ್ತು. ಇಲ್ಲಿ ಓಹ್ರಿ ಉಲ್ಲೇಖಿಸಿದ ಗ್ರೀನ್ ಕಾರ್ಡ್ ಹೊಂದಿರುವವರು ನ್ಯಾ. ಚಂದ್ರಚೂಡ್ ಎಂಬ ಅನಿಸಿಕೆಯನ್ನು ಟ್ವೀಟ್ ಸೃಷ್ಟಿಸಿರಬಹುದು. ಇದಲ್ಲದೇ, ವಾಸ್ತವಿಕ ವಿಚಾರ ತಿರುಚಿ, ಅಪಪ್ರಚಾರ ಮಾಡುವ ಉದ್ದೇಶವೂ ಇರುವ ಸಾಧ್ಯತೆ ಇದೆ. ಹಾಗೆಂದು, ಇದೇ ಮೊದಲ ಬಾರಿಗೆ ಏನೂ ನ್ಯಾ. ಚಂದ್ರಚೂಡ್‌ ಅವರನ್ನು ಗುರಿಯಾಗಿಸಿ ಟೀಕೆ ಮಾಡಲಾಗಿಲ್ಲ.

ವ್ಯಭಿಚಾರವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್‌ 497 ರದ್ದುಪಡಿಸಿ ಸುಪ್ರೀಂ ಕೋರ್ಟ್‌ ಆದೇಶ ಮಾಡಿತ್ತು. ಈ ತೀರ್ಪು ನೀಡಿದ್ದ ಪೀಠದಲ್ಲಿದ್ದ ನ್ಯಾ. ಚಂದ್ರಚೂಡ್‌ ಅವರು ಪ್ರತ್ಯೇಕವಾಗಿ ಸಹಮತದ ತೀರ್ಪು ಬರೆದಿದ್ದರು. ಇದರಲ್ಲಿ ವಿವಾಹಿತ ಮಹಿಳೆಯ ಲೈಂಗಿಕ ಸ್ವಾತಂತ್ರ್ಯದ ಬಗ್ಗೆ ಚರ್ಚಿಸಿದ್ದರು.  ಇದಕ್ಕೆ ಪುರುಷರ ಹಕ್ಕಿಗೆ ಹೋರಾಡುತ್ತಿರುವ ಸಂಘಟನೆಗಳು ಹಾಗೂ ಮಹಿಳಾ ಪರವಾದ ಕಾನೂನುಗಳ ರದ್ದತಿಗೆ ಹೋರಾಡುತ್ತಿರುವರು ನ್ಯಾ. ಚಂದ್ರಚೂಡ್‌ ಅವರ ವಿರುದ್ಧ ವ್ಯಾಪಕ ಟೀಕೆ ಮಾಡಿದ್ದರು.

ಇತ್ತೀಚೆಗೆ, ನ್ಯಾ. ಚಂದ್ರಚೂಡ್‌ ಅವರನ್ನು ಗುರಿಯಾಗಿಸಿ ನೇರ ಮತ್ತು ಮುಕ್ತವಾಗಿ ʼಹಾರ್ವರ್ಡ್‌ ಲಿಬರಲ್‌ ಆರ್ಟ್ಸ್‌ ಇನ್‌ಫಿಲ್ಸ್ಟ್ರೇಟ್ಸ್‌ ಸುಪ್ರೀಂ ಕೋರ್ಟ್‌ ಆಫ್‌ ಇಂಡಿಯಾʼ (ಭಾರತದ ಸುಪ್ರೀಂ ಕೋರ್ಟ್‌ಗೆ ಹಾರ್ವರ್ಡ್‌ನ ಪ್ರಗತಿಪರರ ಒಳನುಸುಳುವಿಕೆ) ಎಂದು ಸೆಪ್ಟೆಂಬರ್‌ 29ರಂದು ಬರಹಗಾರ ರಾಜೀವ್‌ ಮಲ್ಹೋತ್ರಾ ಟ್ವೀಟ್‌ ಮಾಡಿದ್ದರು.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ದಾವೆದಾರರ ಸಂಘದ ಅಧ್ಯಕ್ಷ ಆರ್‌ ಕೆ ಪಠಾಣ್‌ ಅವರು ನ್ಯಾ. ಚಂದ್ರಚೂಡ್‌ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು, ರಾಷ್ಟ್ರಪತಿಗೆ ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಸುದ್ದಿ ತುಣುಕು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಸುಪ್ರೀಂ ಕೋರ್ಟ್‌ ಸಿಜೆಐ ಆಗಿ ನೇಮಕವಾಗುವುದಕ್ಕೂ ಮುನ್ನ ನಿರ್ದಿಷ್ಟ ನ್ಯಾಯಮೂರ್ತಿಗಳ ವಿರುದ್ಧ ಹಿಂದೆಯೂ ಕ್ಷುಲ್ಲಕ ಭ್ರಷ್ಟಾಚಾರದ ಆರೋಪ ಮಾಡಲಾಗಿದೆ. ಸಂಬಂಧಿತರು ಮತ್ತು ನ್ಯಾಯಾಲಯವು ಅಂಥ ಆರೋಪವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ, ಇದು ಹೊಸತೇನಲ್ಲ.