<div class="paragraphs"><p>Karnataka High Court</p></div>

Karnataka High Court

 
ಸುದ್ದಿಗಳು

[ಆದೇಶ ಪಾಲಿಸಲು ವಿಫಲ] ಐಎಎಸ್‌ ಅಧಿಕಾರಿ ಹಾಗೂ ವಕೀಲರ ವಿರುದ್ಧ ಹೈಕೋರ್ಟ್‌ ಕೆಂಡಾಮಂಡಲ

Siddesh M S

ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾದರೆ ಖುದ್ದು ಪೀಠದ ಮುಂದೆ ಹಾಜರಾಗಬೇಕು ಎಂಬ ನಿರ್ದೇಶನ ಪಾಲಿಸದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಹಾಗೂ ಸಮಯಕ್ಕನುಗುಣವಾಗಿ ನ್ಯಾಯಾಲಯಕ್ಕೆ ಸ್ಥಿತಿಗತಿ ವರದಿ ಸಲ್ಲಿಸಲು ಸೂಕ್ತ ಕ್ರಮಕೈಗೊಳ್ಳಲು ವಿಫಲವಾದ ರಾಜ್ಯ ಸರ್ಕಾರದ ವಕೀಲ ಎಸ್‌ ರಾಜಶೇಖರ್‌ ಅವರನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿತು. ತುಷಾರ್‌ ಗಿರಿನಾಥ್‌ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜಾರಿ ಮಾಡುವ ಮತ್ತು ರಾಜಶೇಖರ್‌ ಅವರನ್ನು ವಕೀಲರ ಪಟ್ಟಿಯಿಂದ ಕೈಬಿಡಲು ರಾಜ್ಯ‌ ಸರ್ಕಾರಕ್ಕೆ ಪತ್ರ ಬರೆಯುವ ಕಠಿಣ ಎಚ್ಚರಿಕೆಯನ್ನು ನ್ಯಾಯಾಲಯ ನೀಡಿತು.

ಹಾವೇರಿ ಜಿಲ್ಲೆಯ ನೆಲವಾಗಿಲು ಗ್ರಾಮಸ್ಥರಿಗೆ ಕೊಡಿಯಾಲದಲ್ಲಿ ಪುನರ್ವಸತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 1993ರಲ್ಲಿ ಆದೇಶ ಹೊರಡಿಸಿದ್ದರೂ ಇದುವರೆಗೂ ಯಾವುದೇ ಕ್ರಮವಾಗದಿರುವುದರ ಕುರಿತು ರೇಣುಕಾ ಹಾಗೂ ಮತ್ತಿರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಕಳೆದ ವಿಚಾರಣೆಯ ಸಂದರ್ಭದಲ್ಲಿ ನೆಲವಾಗಿಲು ಗ್ರಾಮಸ್ಥರಿಗೆ ಕೊಡಿಯಾಲದಲ್ಲಿ ಪುನರ್ವಸತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಪೀಠವು ನಿರ್ದೇಶಿಸಿತ್ತು.

ವಿಚಾರಣೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಎಸ್‌ ರಾಜಶೇಖರ್‌ ಅವರು “ನಿನ್ನೆ ಸಂಜೆ ಸ್ಥಿತಿಗತಿ ವರದಿಯನ್ನು ಅಧಿಕಾರಿಗಳು ನಮಗೆ ನೀಡಿದ್ದು, ನಾಡಿದ್ದು ಪೀಠಕ್ಕೆ ಸಲ್ಲಿಸಲಾಗುವುದು. ಕೊರೊನಾ ಸೋಂಕಿಗೆ ತುತ್ತಾಗಿ ಕ್ವಾರಂಟೈನ್‌ನಲ್ಲಿರುವುದರಿಂದ ವರದಿ ಸಲ್ಲಿಸಲಾಗಿಲ್ಲ. ಮನೆಯಿಂದ ವರ್ಚುವಲ್‌ ವಿಚಾರಣೆಯಲ್ಲಿ ಭಾಗಿಯಾಗುತ್ತಿದ್ದೇನೆ” ಇದು ಪ್ರಾಯೋಗಿಕ ಸಮಸ್ಯೆ ಎಂದರು.

ಇದಕ್ಕೆ ಪೀಠವು “ಸ್ಥಿತಿಗತಿ ವರದಿ ಸಲ್ಲಿಸಿಲ್ಲ ಎಂದರೆ ಏನು ಮಾಡಬೇಕು ಎಂದು ಆದೇಶಿಸಲಾಗಿದೆ? ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್ಲಿ?” ಎಂದಿತು. ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಕೆಂಡಾಮಂಡಲವಾದರು.

“ಪ್ರಧಾನ ಕಾರ್ಯದರ್ಶಿ ಅವರೇ ನಿಮಗೆ ನ್ಯಾಯಾಲಯದ ಆದೇಶ ಅರ್ಥವಾಗುತ್ತದೋ? ಇಲ್ಲವೋ? ನ್ಯಾಯಾಲಯದ ಆದೇಶ ಏನು? ನೀವು ನಿಮ್ಮ ಕಚೇರಿಯಲ್ಲಿ ಕುಳಿತಿದ್ದೀರಿ. ಭೌತಿಕವಾಗಿ ನೀವೇಕೆ ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ನ್ಯಾಯಾಲಯದ ಆದೇಶ ಅನುಪಾಲನೆಯ ರೀತಿ ಇದೇನಾ? ನಿಮ್ಮ ಕಚೇರಿಯಲ್ಲಿ ಕುಳಿತು ನ್ಯಾಯಾಲಯದ ಮುಂದೆ ಹಾಜರಾಗಿರುವುದಾಗಿ ಹೇಳಲು ಅನುಮತಿ ನೀಡಿದವರು ಯಾರು? ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಲು ನಿಮಗೆ ಅನುಮತಿ ನೀಡಿದವರು ಯಾರು? ಹೀಗೆಂದು ನೀವೆ ಹೇಗೆ ಪರಿಭಾವಿಸಿಕೊಳ್ಳುತ್ತೀರಿ? ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬಹುದು. ನೀವು ಹೀಗೆ ನಡೆದುಕೊಳ್ಳಲಾಗದು. ಭವಿಷ್ಯದಲ್ಲಿ ಎಚ್ಚರಿಕೆಯಿಂದ ಇರಿ. ನ್ಯಾಯಾಲಯವನ್ನು ಹಗುರವಾಗು ಪರಿಗಣಿಸಬೇಡಿ. ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗುವುದಾದರೆ ಬೆಳಿಗ್ಗೆಯೇ ನೀವು ನ್ಯಾಯಾಲಯದ ಅನುಮತಿ ಪಡೆಯಬೇಕಿತ್ತು. ನ್ಯಾಯಾಲಯದ ಮುಂದೆ ಬರುವಾಗ ಈ ರೀತಿಯ ವಸ್ತ್ರ ಧರಿಸಬಹುದೇ? (ಅಧಿಕಾರಿ ಕೋಟು ಧರಿಸದಿದ್ದಕ್ಕೆ)” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ತುಷಾರ್‌ ಗಿರಿನಾಥ್‌ ಅವರು “ಸ್ಥಿತಿಗತಿ ವರದಿಯನ್ನು ವಕೀಲರಿಗೆ ನೀಡಲಾಗಿದೆ. ಅನಾರೋಗ್ಯದಿಂದ ಅವರು ಸಲ್ಲಿಸಿಲ್ಲ. ಕೋವಿಡ್‌ನಿಂದಾಗಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದೇನೆ” ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರಾರೂ ಪೀಠವು ಅದನ್ನು ಕೇಳಿಸಿಕೊಳ್ಳಲು ಸಿದ್ಧವಿರಲಿಲ್ಲ.

ಬಳಿಕ ವಕೀಲ ರಾಜಶೇಖರ್‌ ಅವರನ್ನು ಗುರಿಯಾಗಿಸಿಕೊಂಡ ನ್ಯಾ. ಅವಸ್ಥಿ ಅವರು “ಈ ಪ್ರಕರಣದ ವಿಚಾರಣೆ ನಡೆಸಲು ರಾಜ್ಯ ಸರ್ಕಾರದ ವಕೀಲರ ಪಟ್ಟಿಯಲ್ಲಿ ನೀವೊಬ್ಬರೇ ಇದ್ದೀರಾ? ನೀವು ಹಾಜರಾಗಲಿಲ್ಲ ಎಂದು ನಾವು ವಿಚಾರಣೆ ನಡೆಸದೇ ನಿಲ್ಲಿಸುತ್ತೀವಾ? ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಬೇಕೆ? ನಿಮ್ಮಿಂದಾಗಿ ಅಧಿಕಾರಿ (ತುಷಾರ್‌ ಗಿರಿನಾಥ್‌) ಮುಜುಗರ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ನಿಮ್ಮ ವಿಚಾರದಲ್ಲಿ ಇಂಥ ಘಟನೆ ಮೊದಲ ಬಾರಿಗೆ ನಡೆಯುತ್ತಿಲ್ಲ. ಇದು ಪದೇಪದೇ ಘಟಿಸುತ್ತಲೇ ಇದೆ. ಹಲವು ತಿಂಗಳಿಂದ ನಾವು ಇದನ್ನು ನೋಡಿದ್ದೇವೆ. ಆರಂಭದಿಂದಲೂ ನಾನು ನಿಮಗೆ ಎಚ್ಚರಿಕೆ ನೀಡುತ್ತಲೇ ಇದ್ದೇನೆ. ನನ್ನ ಪೀಠದಲ್ಲಿ ಇದು ನಡೆಯಲು ಅವಕಾಶ ನೀಡುವುದಿಲ್ಲ. ನನ್ನ ಪೀಠದ ಮುಂದೆ ವಿಚಾರಣೆಗೆ ಹಾಜರಾಗದಂತೆ ಹಿಂದೆ ಒಮ್ಮೆ ನಾನು ಸೂಚಿಸಿದ್ದೇನೆ. ಇದನ್ನು ನಾನು ಸಹಿಸುವುದಿಲ್ಲ ಮಿಸ್ಟರ್‌ ರಾಜಶೇಖರ್‌. ನಿಮಗೆ ಇದು ಕೊನೆಯ ಅವಕಾಶ. ವಕೀಲ ಪಟ್ಟಿಯಿಂದ ನಿಮ್ಮನ್ನು ತೆಗೆಯುವಂತೆ ನಾನು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವೆ. ಹೀಗೆ ಮಾಡಲು ಅವಕಾಶ ಮಾಡಿಕೊಡಬೇಡಿ. ನೀವು ಸುಧಾರಿಸಿಕೊಳ್ಳಿ, ಇಲ್ಲವಾದಲ್ಲಿ ನನ್ನ ಪೀಠದ ಮುಂದೆ ಹಾಜರಾಗಬೇಡಿ” ಎಂದು ಏರುಧ್ವನಿಯಲ್ಲಿ ಕಟುವಾಗಿ ನುಡಿದರು.

ಅಂತಿಮವಾಗಿ ಪೀಠವು “ಸರ್ಕಾರದ ವಕೀಲರು ಸ್ಥಿತಿಗತಿ ವರದಿ ಸಿದ್ಧವಾಗಿದೆ. ದಿನದಂತ್ಯಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.