POCSO ACT 
ಸುದ್ದಿಗಳು

ಪೋಕ್ಸೊ ಕಾಯಿದೆಯಡಿ ಅಪರಾಧ ವರದಿ ಮಾಡಲು ವಿಫಲವಾಗುವುದು ಜಾಮೀನು ನೀಡಬಹುದಾದ ಕೃತ್ಯ: ಹಿಮಾಚಲ ಪ್ರದೇಶ ಹೈಕೋರ್ಟ್

ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಮತ್ತು ಕೇರಳ ಹೈಕೋರ್ಟ್‌ಗಳು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದವು.

Bar & Bench

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012ರ (ಪೋಕ್ಸೊ ಕಾಯಿದೆ) ಅಡಿ ಅಪರಾಧ ವರದಿ ಮಾಡದಿರುವುದು ಜಾಮೀನು ನೀಡಬಹುದಾದ ಕೃತ್ಯವಾಗುತ್ತದೆ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸುಶೀಲ್ ಕುಮಾರ್ ಮತ್ತು ಹಿಮಾಚಲ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಜಾಮೀನು ನೀಡಬಹುದಾದ ಅಪರಾಧವೆಂದರೆ ಆರೋಪಿಯು ಹಕ್ಕಿನ ವಿಷಯವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹನಾಗಿರುವುದಾಗಿದ್ದು ಜಾಮೀನು ರಹಿತ ಅಪರಾಧಗಳಲ್ಲಿ ಆರೋಪಿಯು ಜಾಮೀನಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗಲಿದ್ದು ಸಂದರ್ಭ ಮತ್ತು ಸನ್ನಿವೇಶದ ಆಧಾರದಲ್ಲಿ ಜಾಮೀನು ನೀಡುವುದು ಅಥವಾ ತಿರಸ್ಕರಿಸುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.

ಮಕ್ಕಳ ಲೈಂಗಿಕ ದೌರ್ಜನ್ಯದ ಅಪರಾಧಗಳನ್ನು ವರದಿ ಮಾಡದಿರುವುದನ್ನು ಪೋಕ್ಸೊ ಕಾಯಿದೆಯ ಸೆಕ್ಷನ್ 21ರ ಅಡಿ ಅಪರಾಧವಾಗಲಿದ್ದು ಇದಕ್ಕೆ ಆರು ತಿಂಗಳಿನಿಂದ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಬಹುದಾಗಿದೆ.ಡಿ

ಈ ಅಪರಾಧದಡಿ ತಪ್ಪಿತಸ್ಥ ವ್ಯಕ್ತಿಯು ಸಾಮಾನ್ಯವಾಗಿ ಕಾಯಿದೆಯಡಿ ಆರು ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾನೆ. ಆದರೂ ಕಂಪನಿ ಅಥವಾ ಸಂಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ವ್ಯಕ್ತಿಗೆ ಅದೇ ಅಪರಾಧಕ್ಕಾಗಿ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಪ್ರಕಾರ ಈ ಅಪರಾಧಕ್ಕೆ ಜಾಮೀನು ನೀಡಬಹುದಾಗಿದ್ದು ಪೊಲೀಸರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ನ್ಯಾಯಮೂರ್ತಿ ರಾಕೇಶ್ ಕೈಂತ್ಲಾ ಈಗ ಸ್ಪಷ್ಟಪಡಿಸಿದ್ದಾರೆ.

ಪೋಕ್ಸೊ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪೋಕ್ಸೊ ಕಾಯಿದೆಯ ಸೆಕ್ಷನ್ 21 ಆರು ತಿಂಗಳು ಅಥವಾ ಒಂದು ವರ್ಷದವರೆಗೆ ಶಿಕ್ಷೆ ವಿಧಿಸುತ್ತದೆ ಎಂಬುದನ್ನು ಗಮನಿಸಿದ ನ್ಯಾಯಾಲಯ, ಅದು ಜಾಮೀನು ನೀಡಬಹುದಾದ ಅಪರಾಧವಾಗುತ್ತದೆ ಎಂದು ಹೇಳಿದೆ.

ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಮತ್ತು ಕೇರಳ ಹೈಕೋರ್ಟ್‌ಗಳು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದವು.