Karnataka HC and Justice Sachin Shankar Magadum
Karnataka HC and Justice Sachin Shankar Magadum 
ಸುದ್ದಿಗಳು

ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಮತ್ತೆ ಪ್ರಾಯೋಗಿಕ ಪರೀಕ್ಷೆ ನಡೆಸಲು ಆರ್‌ಜಿಯುಎಚ್‌ಎಸ್‌ಗೆ ಹೈಕೋರ್ಟ್‌ ನಿರ್ದೇಶನ

Bar & Bench

ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನಿಯಮದಂತೆ ಪ್ರಾಯೋಗಿಕ ಪರೀಕ್ಷೆ ನಡೆಸದ ಹಿನ್ನೆಲೆಯಲ್ಲಿ ಸುಮಾರು 70 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ಹೊಸದಾಗಿ ನಡೆಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಆರ್‌ಜಿಯುಎಚ್‌ಎಸ್‌) ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶನ ನೀಡಿದೆ.

ಶಿವಮೊಗ್ಗದ ಅನಿರುದ್ಧ ಮತ್ತು ಬೇರೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ 11 ಅರ್ಜಿಗಳನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಈಗ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಎಂದು ಕರೆಯಲಾಗುತ್ತಿರುವ ಎಂಸಿಐ ನಿಯಮದಂತೆ ಪ್ರಾಯೋಗಿಕ ಮತ್ತು ಥಿಯರಿ ಪರೀಕ್ಷೆಗೆ ನಾಲ್ವರು ಪರೀಕ್ಷಾ ಮೇಲ್ವಿಚಾರಕರು ಇರಬೇಕು. ಪ್ರತಿಯೊಬ್ಬ ಪರೀಕ್ಷಕರು ಸ್ವತಂತ್ರವಾಗಿ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡಬೇಕು. ಆದರೆ, ನ್ಯಾಯಾಲಯ ಈ ಬಗ್ಗೆ ಹಲವು ಬಾರಿ ಆದೇಶ ನೀಡಿದ್ದರೂ ಸಹ ಆರ್‌ಜಿಯುಎಚ್‌ಎಸ್ ಮತ್ತದೇ ದೋಷಗಳನ್ನು ಮಾಡುತ್ತಿರುವುದು ದುರದೃಷ್ಟಕರ” ಎಂದು ಪೀಠ ಹೇಳಿದೆ.

ಅಲ್ಲದೇ, ಎಂಸಿಐನ ಪದವಿ ವೈದ್ಯಕೀಯ ಶಿಕ್ಷಣ 1977 ನಿಯಮ 13ರ ಪ್ರಕಾರ ಪ್ರಾಯೋಗಿಕ/ಕ್ಲಿನಿಕಲ್ ಪರೀಕ್ಷೆಗಳನ್ನು ಹೊಸದಾಗಿ ನಡೆಸಬೇಕು ಎಂದು ನಿರ್ದೇಶನ ನೀಡಿರುವ ನ್ಯಾಯಾಲಯವು ಪೂರಕ ಪರೀಕ್ಷೆಗೂ ಮುನ್ನ ಹೊಸದಾಗಿ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಬೇಕು ಎಂದು ಆದೇಶಿಸಿದೆ.

ಜೊತೆಗೆ ಪ್ರತಿಯೊಬ್ಬ ಪರೀಕ್ಷಕರು ಕೂಡ ಸ್ವತಂತ್ರವಾಗಿ ಅಂಕ ನೀಡಬೇಕಾಗಿಲ್ಲ ಎಂಬ ವಿಶ್ವವಿದ್ಯಾಲಯದ ವಾದವನ್ನು ತಿರಸ್ಕರಿಸಿದೆ.

“ವೈದ್ಯಕೀಯ ಶಿಕ್ಷಣದ ಥಿಯರಿ ಮತ್ತು ಪ್ರಾಯೋಗಿಕ ಪರೀಕ್ಷೆಗಳಲ್ಲಿ ನಾಲ್ವರು ಪರೀಕ್ಷಕರು ಇರಬೇಕು ಎನ್ನುವುದರ ಹಿಂದೆ ಅವರು ಏಕಪಕ್ಷೀಯವಾಗಿ ಮೌಲ್ಯಮಾಪನ ಮಾಡಬಾರದು ಎಂಬ ಉದ್ದೇಶ ಇದೆ. ಜೊತೆಗೆ ಪರೀಕ್ಷಾ ಮೌಲ್ಯಮಾಪನದಲ್ಲಿ ಖಚಿತತೆ, ನ್ಯಾಯ ಮತ್ತು ವಿಶ್ವಾಸಾರ್ಹತೆ ಇರಲಿ ಎಂಬುದು ಇದರ ಹಿಂದಿನ ಆಶಯ. ಮೌಲ್ಯಮಾಪನದಲ್ಲಿ ಪಕ್ಷಪಾತ ಆಗದಿರಲಿ ಎಂಬ ಕಾರಣಕ್ಕೆ ನಾಲ್ವರು ಪರೀಕ್ಷಕರನ್ನು ನಿಯೋಜಿಸಲು ಎಂಸಿಐ ನಿಯಮಗಳಿಗೆ ತಿದ್ದುಪಡಿ ತಂದಿದೆ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು 2023ರ ಫೆಬ್ರವರಿಯಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಪದವಿ ವೈದ್ಯಕೀಯ ಶಿಕ್ಷಣ ಕಾಯಿದೆ 1997 ನಿಯಮ 13(2)ರಡಿ ನಾಲ್ವರು ಪರೀಕ್ಷಕರು ಪ್ರಾಯೋಗಿಕ ಪರೀಕ್ಷೆ ನಡೆಸಿ ಪ್ರತ್ಯೇಕವಾಗಿ ಅಂಕಗಳನ್ನು  ನೀಡಬೇಕು. ಆದರೆ, ವಿಶ್ವವಿದ್ಯಾಲಯ ನಿಯಮಗಳನ್ನು ಪಾಲನೆ ಮಾಡದೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿದೆ ಎಂದು ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅರ್ಜಿದಾರರನ್ನು ವಕೀಲರಾದ ಪ್ರತೀಕ್‌ ಚಂದ್ರಮೌಳಿ, ಕೆ ಎಸ್‌ ವಿದ್ಯಾಶ್ರೀ, ಮೊಹಮ್ಮದ್‌ ತಾಹೀರ್, ಅಭಿಷೇಕ್‌ ಮಾಲೀಪಾಟೀಲ್‌, ಎನ್‌ ಕೆ ರಮೇಶ್‌, ಎ ಎಲ್‌ ಪರಶುರಾಮ್‌ ಪ್ರತಿನಿಧಿಸಿದ್ದರು. ಹಿರಿಯ ವಕೀಲ ಆದಿತ್ಯ ಸೋಂಧಿ ವಾದಿಸಿದ್ದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪರವಾಗಿ ವಕೀಲ ಸಚಿನ್‌ ಬಿ ಎಸ್‌, ಇತರೆ ಪ್ರತಿವಾದಿಗಳ ಪರವಾಗಿ ವಕೀಲರಾದ ಎನ್‌ ಖೆಟ್ಟಿ, ಸುಮನಾ ಬಾಳಿಗಾ, ಪಿ ಎಸ್‌ ಮಾಲೀಪಾಟೀಲ್‌ ವಾದಿಸಿದ್ದರು.

Aniiruddh V U and others Vs RGUHS and others.pdf
Preview