BBMP Chief Commissioner Tushar Giri Nath and Karnataka HC 
ಸುದ್ದಿಗಳು

ಅಕ್ರಮ ಮಳಿಗೆ ತೆರವು ಮಾಡಿಸಲು ವಿಫಲ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ಗೆ ನ್ಯಾಯಾಂಗ ನಿಂದನೆ ನೋಟಿಸ್‌

ಬೆಂಗಳೂರಿನ ವಕೀಲ ಆರ್‌ ಆರ್ ಹಿರೇಮಠ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

Bar & Bench

ಜಯನಗರ ಶಾಪಿಂಗ್ ಸಮುಚ್ಚಯದ ನೆಲಮಾಳಿಗೆಯ ಪಾರ್ಕಿಂಗ್‌ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮಳಿಗೆಗಳನ್ನು ತೆರವುಗೊಳಿಸುವಂತೆ ಸೂಚಿಸಿ ಮೂರು ವರ್ಷಗಳ ಹಿಂದೆ ನ್ಯಾಯಾಲಯ ಹೊರಡಿಸಿದ್ದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ವಕೀಲ ಆರ್‌ ಆರ್ ಹಿರೇಮಠ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಶಾಪಿಂಗ್‌ ಸಮುಚ್ಚಯದ ಬ್ಲಾಕ್‌-1 ಮರು ನಿರ್ಮಾಣದ ವೇಳೆ ಪಾರ್ಕಿಂಗ್‌ಗೆ ಮೀಸಲಿದ್ದ ಮೇಲಿನ ನೆಲಮಹಡಿಯಲ್ಲಿ ಮಳಿಗೆಗಳ ಕಾರ್ಯ ನಿರ್ವಹಣೆಗೆ ಬಿಬಿಎಂಪಿ ಅನುಮತಿಸಿತ್ತು. ಅದನ್ನು ಪ್ರಶ್ನಿಸಿ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದ ಬಿಬಿಎಂಪಿ, ಸಮುಚ್ಚಯದ ಬ್ಲಾಕ್- 1 ಮರು ನಿರ್ಮಾಣದ ಹಿನ್ನೆಲೆಯಲ್ಲಿ ಮೇಲಿನ ಮಾಳಿಗೆಯಲ್ಲಿ ಪಾರ್ಕಿಂಗ್ ಸ್ಥಳಕ್ಕಾಗಿ ಮೀಸಲಿದ್ದ ಜಾಗದಲ್ಲಿ ಹಳೆಯ ಪರವಾನಗಿದಾರರ ಮಳಿಗೆಗಳ ಕಾರ್ಯ ನಿರ್ವಹಣೆಗೆ ತಾತ್ಕಾಲಿಕ ಅನುಮತಿ ಕಲ್ಪಿಸಲಾಗಿದೆ. ಒಮ್ಮೆ ಬ್ಲಾಕ್-2, 3 ಮತ್ತು 4 ಅನ್ನು ನಿರ್ಮಿಸಿದ ನಂತರ ಪುನಾ ಮೇಲಿನ ಮಹಡಿ ಜಾಗವನ್ನು ಪಾರ್ಕಿಂಗ್‌ಗೆ ಬಳಸಲಾಗುವುದು ಎಂದು ಹೈಕೋರ್ಟ್‌ಗೆ ಭರವಸೆ ನೀಡಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಬಿಬಿಎಂಪಿ ಅಫಿಡವಿಟ್‌ ದಾಖಲಿಸಿಕೊಂಡಿದ್ದ ಹೈಕೋರ್ಟ್, ಶಾಪಿಂಗ್‌ ಸಮುಚ್ಚಯ ಬ್ಲಾಕ್‌ಗಳ ಮರು ನಿರ್ಮಾಣದ ನಂತರ ಮೇಲಿನ ಮಹಡಿಯಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ತೆರವುಗೊಳಿಸಬೇಕು ಎಂದು 2020ರಲ್ಲಿ ಸೂಚಿಸಿತ್ತು. ಆ ಆದೇಶ ಹೊರಬಿದ್ದು ಮೂರು ವರ್ಷ ಕಳೆದರೂ ಇತರೆ ಬ್ಲಾಕ್‌ಗಳನ್ನು ನಿರ್ಮಾಣ ಮಾಡುವಲ್ಲಿ ಮತ್ತು ಮೇಲಿನ ಮಹಡಿಯ ಪಾರ್ಕಿಂಗ್‌ ಸ್ಥಳದಲ್ಲಿ ನಿರ್ಮಿಸಿರುವ ಅಕ್ರಮ ಮಳಿಗೆಗಳನ್ನು ತೆರವುಗೊಳಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಆ ಮೂಲಕ ನ್ಯಾಯಾಂಗ ನಿಂದನೆ ಎಸಗಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿದಾರರ ಪರ ವಕೀಲ ಜಿ ಆರ್‌ ಮೋಹನ್‌ ವಾದಿಸಿದರು.