ನ್ಯಾಯಾಂಗದಲ್ಲಿ ಸಾರ್ವಜನಿಕರ ನಂಬಿಕೆ ಕ್ಷೀಣಿಸುತ್ತಿದ್ದು ವಿಶ್ವಾಸ ಉಳಿಸಿಕೊಳ್ಳಲು ಗುಣಮಟ್ಟದ ನ್ಯಾಯಾಧೀಶರ ನೇಮಕ ಮಾಡಬೇಕಾಗುತ್ತದೆ ಎಂದು ಜಮ್ಮು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬದರ್ ದುರೆಜ್ ಅಹ್ಮದ್ ಇತ್ತೀಚೆಗೆ ಹೇಳಿದ್ದಾರೆ.
ಭಾರತದಲ್ಲಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳಿರುವ ನ್ಯಾಯಾಲಯಗಳಲ್ಲಿ ನ್ಯಾಯ ದೊರೆಯುವಿಕೆ ದೊಡ್ಡ ಸಮಸ್ಯೆಯಾಗಿದೆ ಎಂದ ನ್ಯಾಯಮೂರ್ತಿ ಅಹ್ಮದ್ ಹೆಚ್ಚಿನ ಸಂಖ್ಯೆಯ ಮತ್ತು ಉತ್ತಮ ಗುಣಮಟ್ಟದ ನ್ಯಾಯಾಧೀಶರ ನೇಮಕವಷ್ಟೇ ಇದಕ್ಕಿರುವ ಏಕೈಕ ಮಾರ್ಗ ಎಂದು ಅವರು ಹೇಳಿದರು.
“ಗುಣಮಟ್ಟ ಎಂದರೆ ಅತೀವಾ ಮೇಧಾವಿ ಆಗಿರಬೇಕು ಅಥವಾ ಹಿಂದಿನ ಎಲ್ಲಾ ತೀರ್ಪು ಆದೇಶಗಳನ್ನು ನೆನಪ್ಪಿಟ್ಟುಕೊಂಡಿರಬೇಕು ಎಂದರ್ಥವಲ್ಲ. ಆದರೆ ಆ ಬದಿ ಅಥವಾ ಈ ಬದಿಯ ವಕೀಲರು ಏನು ಹೇಳುತ್ತಾರೆ ಮತ್ತು ನ್ಯಾಯ ಕೋರಿ ನ್ಯಾಯಾಲಯಕ್ಕೆ ದಾವೆದಾರರು ಬಂದಾಗ ಅವರ ಸ್ಥಿತಿ ಏನು ಎಂಬುದನ್ನು ಅರ್ಥಮಾಡಿಕೊಳ್ಳುವುದಾಗಿದೆ” ಎಂದರು.
ಶುಕ್ರವಾರ ನಿವೃತ್ತರಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಕನ್ನಡಿಗ ಎಸ್ ರವೀಂದ್ರ ಭಟ್ ಅವರ ಗೌರವಾರ್ಥ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಅವರ ಕುಟುಂಬಸ್ಥರು, ಸ್ನೇಹಿತರು, ಹಾಲಿ ಹಾಗೂ ನಿವೃತ್ತ ವಕೀಲ ಗುಮಾಸ್ತರು ಹಮ್ಮಿಕೊಂಡಿದ್ದ 'ನ್ಯಾಯ ಕುರಿತ ಸಂವಾದʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ, ಯು ಯು ಲಲಿತ್ ಎಸ್ ಮುರಳೀಧರ್, ಆರ್ ಬಸಂತ್, ಹಿರಿಯ ವಕೀಲ ರಾಜು ರಾಮಚಂದ್ರನ್ ಹಾಗೂ ವಕೀಲೆ ಮಾಳವಿಕಾ ಪ್ರಸಾದ್ ಅವರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ನ್ಯಾ. ಬದರ್ ಮಾತನಾಡಿದರು.
ಅರ್ಜಿದಾರರಿಗೆ ಪರಿಹಾರ ನೀಡುವ ವಿಷಯದ ಕುರಿತು ಮಾತನಾಡಿದ ಅವರು "ಆಪ್ಕೆ ಬಾಪ್ ಕಿ ಜಾಗೀರ್ ಥೋಡಿ ಹೈ ಜೋ ರಿಲೀಫ್ ನಹೀ ದೇನಾ (ಪರಿಹಾರ ನೀಡುವುದಕ್ಕೆ ಅದು ನಿಮ್ಮ ಪಿತ್ರಾರ್ಜಿತ ಆಸ್ತಿ ಅಲ್ಲ). ಒಬ್ಬ ವ್ಯಕ್ತಿ ಪರಿಹಾರಕ್ಕೆ ಅರ್ಹನಾಗಿದ್ದರೆ ಅದನ್ನು ನೀವು ಅವನಿಗೆ ನೀಡಲೇಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ನ್ಯಾಯ ದೊರಕಿಸಿಕೊಡುವಿಕೆಯ ಹಾದಿಯಲ್ಲಿ ಸುಧಾರಣೆ ತರಲು ಮತ್ತು ನ್ಯಾಯಾಂಗದಲ್ಲಿ ಜನರ ನಂಬಿಕೆ ಜೀವಂತವಾಗಿಸಲು ಇರುವ ಏಕೈಕ ಮಾರ್ಗ ಇದಾಗಿದೆ ಎಂದು ಅವರು ತಿಳಿಸಿದರು.