Karnataka HC 
ಸುದ್ದಿಗಳು

ನಕಲಿ ವೈದ್ಯರಿಂದ ಗ್ರಾಮೀಣ ಮುಗ್ಧ ಜನರ ಜೀವಕ್ಕೆ ಅಪಾಯ ಎಂದ ಹೈಕೋರ್ಟ್‌, ಕ್ರಮಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ

“ವೈದ್ಯಕೀಯ ಕ್ಷೇತ್ರದಲ್ಲಿ ಅರ್ಹತೆ ಇಲ್ಲದ ವ್ಯಕ್ತಿಗಳು ನಡೆಸುತ್ತಿರುವ ಕ್ಲಿನಿಕ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಆದೇಶದ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿಗೆ ರವಾನಿಸಬೇಕು” ಎಂದ ಪೀಠ.

Bar & Bench

“ನಕಲಿ ವೈದ್ಯರಿಂದ ಹಳ್ಳಿಗಳ ಮುಗ್ಧ ಜನರ ಜೀವ ಅಪಾಯದಲ್ಲಿದೆ” ಎಂದು ತೀವ್ರ ಆತಂಕ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, “ರಾಜ್ಯದಾದ್ಯಂತ ಇರುವ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಕೂಡಲೇ ಮುಂದಾಗಬೇಕು” ಎಂದು ರಾಜ್ಯ ಸರ್ಕಾರಕ್ಕೆ ಈಚೆಗೆ ಖಡಕ್‌ ತಾಕೀತು ಮಾಡಿದೆ.

ಖಾಸಗಿ ವೈದ್ಯಕೀಯ ವೃತ್ತಿ ನಡೆಸಲು ಕೋರಿರುವ ಅರ್ಜಿಯನ್ನು ಪರಿಗಣಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಕೆ ಆರ್‌ ಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿಯ ಎ ಎ ಮುರಳೀಧರ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿತು.

“ವೈದ್ಯಕೀಯ ಕ್ಷೇತ್ರದಲ್ಲಿ ಅರ್ಹತೆ ಇಲ್ಲದ ವ್ಯಕ್ತಿಗಳು ನಡೆಸುತ್ತಿರುವ ಕ್ಲಿನಿಕ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ದಿಸೆಯಲ್ಲಿ ಅನುವಾಗುವಂತೆ ಈ ಆದೇಶದ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿಗೆ ರವಾನಿಸಬೇಕು” ಎಂದು ಪೀಠ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ. ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆಯೂ ಪೀಠ ನಿರ್ದೇಶಿಸಿದೆ.

“ಅರ್ಜಿದಾರರು ಕೇವಲ ಎಸ್‌ಎಸ್‌ಎಲ್‌ಸಿವರೆಗೆ ಓದಿದ್ದಾರೆ. ಭಾರತೀಯ ಪರ್ಯಾಯ ಔಷಧ ಮಂಡಳಿ ನೀಡಿದೆ ಎಂಬ ಪ್ರಮಾಣ ಪತ್ರ ಹೊಂದಿದ್ದಾರೆ. ಆಯುರ್ವೇದ, ಅಲೋಪತಿ ಅಥವಾ ಯುನಾನಿ ಸೇರಿದಂತೆ ಯಾವುದೇ ವಿಭಾಗದಲ್ಲಿ ಸೂಕ್ತ ಶೈಕ್ಷಣಿಕ ಅರ್ಹತೆ ಹೊಂದಿಲ್ಲ. ಆದರೂ ವೈದ್ಯ ಪದ್ಧತಿ ಅನುಸರಿಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ತಮ್ಮನ್ನು ತಾವು ವೈದ್ಯರೆಂದು ಬಿಂಬಿಸಿಕೊಳ್ಳುವ ಸ್ವಘೋಷಿತ ನಕಲಿ ವೈದ್ಯರು, ದೂರದ ಪ್ರದೇಶಗಳಲ್ಲಿ ಚಿಕಿತ್ಸಾಲಯಗಳನ್ನು ತೆರೆದು ಜನರನ್ನು ವಂಚಿಸುತ್ತಿರುವುದು ವೇದ್ಯವಾಗುತ್ತದೆ” ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.