Karnataka High Court
Karnataka High Court 
ಸುದ್ದಿಗಳು

ಕಕ್ಷಿದಾರರಿಗೆ ನಕಲಿ ಆದೇಶ ರವಾನೆ: ವಕೀಲರೊಬ್ಬರ ಪತ್ನಿ, ಪುತ್ರನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

Bar & Bench

ವಕೀಲರೊಬ್ಬರು ತಮ್ಮ ಕಕ್ಷಿದಾರರಿಗೆ ಕರ್ನಾಟಕ ಹೈಕೋರ್ಟ್‌ನ ನಕಲಿ ಆದೇಶ ಪ್ರತಿ ಕಳುಹಿಸಿ, ವಂಚಿಸಿದ ಆರೋಪ ಪ್ರಕರಣದಲ್ಲಿ ವಕೀಲರ ಪತ್ನಿ ಹಾಗೂ ಅವರ ಪುತ್ರನಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ವಕೀಲರ ಪತ್ನಿ ಉಮಾದೇವಿ ಮುರುಗೇಶ್ ಮತ್ತು ಪುತ್ರ ಬಸವರಾಜು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್ ಅವರ ನೇತೃತ್ವದ ಏಕಸದಸ್ಯ ಪೀಠವು ಷರತ್ತಿಗೆ ಒಳಪಟ್ಟು ಮಾನ್ಯ ಮಾಡಿದೆ.

“ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಒಂದು ವೇಳೆ ಎರಡನೇ ಆರೋಪಿ ಪತ್ನಿ ಹಾಗೂ 3ನೇ ಆರೋಪಿ ಪುತ್ರ ಅವರನ್ನು ಬಂಧಿಸಿದರೆ ಅವರನ್ನು ತಲಾ ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ಪಡೆದು ಬಿಡುಗಡೆ ಮಾಡಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

‘‘ಪ್ರಕರಣದ ಮೊದಲ ಆರೋಪಿಯಾಗಿರುವ ವಕೀಲರ ವಿರುದ್ಧ ನ್ಯಾಯಾಲಯದ ಆದೇಶ ನಕಲು ಮಾಡಿ, ದೂರುದಾರರಿಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ ಆರೋಪವಿದೆ. ಪ್ರಕರಣ ನಡೆಸಲು ವಕೀಲರಿಗೆ ನೀಡಲಾಗಿದ್ದ ಹಣದ ಪೈಕಿ ಸ್ವಲ್ಪ ಹಣವನ್ನು ಅರ್ಜಿದಾರರು ಪಡೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರೂ, ಅದನ್ನು ಸಾಬೀತುಪಡಿಸುವ ಯಾವೊಂದು ದಾಖಲೆಯನ್ನೂ ಪ್ರಾಸಿಕ್ಯೂಷನ್ ನ್ಯಾಯಾಲಯದ ಮುಂದೆ ಇಟ್ಟಿಲ್ಲ’’ ಎಂದು ಪೀಠ ಹೇಳಿದೆ.

“ಪ್ರಸಕ್ತ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ನೇರ ಆರೋಪವಿಲ್ಲ. ಆರೋಪಿಗಳ ವಿರುದ್ಧ ನಕಲು ಮತ್ತು ವಂಚನೆಯ ಪ್ರಮುಖ ಆರೋಪಗಳನ್ನು ಮಾಡಲಾಗಿದೆ. ಹೀಗಾಗಿ, ಇದರಲ್ಲಿ ಅರ್ಜಿದಾರರ ಪಾತ್ರ ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಕಕ್ಷಿದಾರೆಯು ಕರ್ನಾಟಕ ಹೈಕೋರ್ಟ್‌ನಲ್ಲಿ ಎರಡು ದಾವೆ ಹೂಡಿದ್ದು, ಅದಕ್ಕಾಗಿ ಮೊದಲ ಆರೋಪಿಯಾಗಿರುವ ವಕೀಲ ಮುರುಗೇಶ್‌ ಶೆಟ್ಟರ್‌ ಅವರಿಗೆ ಡಿ ಡಿ, ನಗದು ಮತ್ತು ಚೆಕ್ ಮೂಲಕ 10 ಲಕ್ಷ ರೂಪಾಯಿ ನೀಡಿದ್ದೇನೆ. ಆದರೆ, ಹೈಕೋರ್ಟ್ ಸೀಲ್ ಮತ್ತು ರಿಜಿಸ್ಟ್ರಾರ್ ಸಹಿ ಹೊಂದಿರುವ ಆದೇಶದ ಪ್ರತಿಯನ್ನು ವಾಟ್ಸಪ್ ಮೂಲಕ ಆರೋಪಿ ಶೆಟ್ಟರ್‌ ಅವರು ಕಳುಹಿಸಿಕೊಟ್ಟಿದ್ದರು. ಆದರೆ, ಹೈಕೋರ್ಟ್ ವೆಬ್‌ಸೈಟಿನಲ್ಲಿ ಆದೇಶದ ಪ್ರತಿ ಪರಿಶೀಲಿಸಿದಾಗ ಅದು ಲಭ್ಯವಾಗಿರಲಿಲ್ಲ. ಆ ಬಗ್ಗೆ ಶೆಟ್ಟರ್‌ ಅವರನ್ನು ವಿಚಾರಿಸಿದಾಗ ಕೋವಿಡ್ ಕಾರಣಕ್ಕೆ ಕೆಲ ಆದೇಶಗಳು ಅಪ್‌ಲೋಡ್ ಆಗಿಲ್ಲ ಎಂದು ಹೇಳಿದ್ದರು. ಆನಂತರ, ಸಂಶಯ ವ್ಯಕ್ತಪಡಿಸಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಮತ್ತು ಹಣವನ್ನೂ ನೀಡಿರಲಿಲ್ಲ. ಅರ್ಜಿದಾರರು ಹಣ ಪಡೆದಿದ್ದು, ಅವರ ವಿರುದ್ಧವೂ ದೂರುದಾರೆಯು ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಧೀನ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.