ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯಿದೆ- 2013 (ಪಿಒಎಸ್‌ಎಚ್- ಪೋಶ್ ಕಾಯಿದೆ) ಅಡಿಯಲ್ಲಿ ಸುಳ್ಳು ದೂರು ದಾಖಲಿಸಿದರೆ ಪರಿಹಾರ ಒದಗಿಸುವ ವಿಚಾರದಲ್ಲಿ ಗಂಭೀರ ಅಪಾಯ ಎದುರಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್. ಕೋಟಿಶ್ವರ್ ಸಿಂಗ್ ಎಚ್ಚರಿಕೆ ನೀಡಿದರು.
ಕಾಯಿದೆಯಡಿ ದೂರು ಸಲ್ಲಿಸಲು ದೆಹಲಿ ಹೈಕೋರ್ಟ್ ರೂಪಿಸಿರುವ ನೂತನ ಡಿಜಿಟಲ್ ವೇದಿಕೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾ. ಸಿಂಗ್ ಅವರ ಭಾಷಣದ ಪ್ರಮುಖಾಂಶಗಳು
ವರದಕ್ಷಿಣೆ ನಿಷೇಧ ಕಾಯಿದೆ ಮತ್ತು ಕೌಟುಂಬಿಕ ಹಿಂಸಾಚಾರ ತಡೆ ಕಾಯಿದೆ ಮಹಿಳೆಯರ ರಕ್ಷಣೆಗೆ ಇದ್ದರೂ ಅದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಪೋಶ್ ಸೆಕ್ಷನ್‌ಗಳು ಕೂಡ ಅದೇ ರೀತಿ ದುರುಪಯೋಗವಾಗುವ ಸಾಧ್ಯತೆ ಇದೆ.
ಕಾಯಿದೆಯಡಿ ಸುಳ್ಳು ಆರೋಪ ಮಾಡುವುದು ಅಪಾಯಕಾರಿ ಮಾತ್ರವಲ್ಲದೆ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಂತೆ.
ಉದ್ಯೋಗ ಸ್ಥಳಗಳ ಸಾಂಸ್ಥಿಕ ಸಂಸ್ಕೃತಿಯಲ್ಲಿ ಬದಲಾವಣೆ ಆಗಬೇಕಿದೆ.
ಸಂತ್ರಸ್ತರಿಗೆ ಸಹಕಾರ, ಸಹಾನುಭೂತಿ ಅಗತ್ಯವಿದೆ.
ಆಂತರಿಕ ದೂರು ಸಮಿತಿಯಲ್ಲಿರುವ ಸದಸ್ಯರು ವ್ಯವಸ್ಥೆಯ ಪರಿಣಾಮಕಾರಿತ್ವದಲ್ಲಿ ನಿಜವಾಗಿ ನಂಬಿಕೆ ಇಟ್ಟಾಗ ಮಾತ್ರ ಅದು ವಿಶ್ವಾಸ ಮೂಡಿಸುತ್ತದೆ.
ಆಂತರಿಕ ದೂರು ಸಮಿತಿ ಸಂಪೂರ್ಣ ವಿಚಾರಣೆ ನಡೆಸಬಾರದು. ಸಂಧಾನಕ್ಕೆ ಒಲವು ತೋರಬೇಕು. ವಿಚಾರಣೆಯೇ ನಡೆದುಬಿಟ್ಟರೆ ಅದು ಎರಡೂ ಕಡೆಯವರಿಗೆ ನೋವು ತರುತ್ತದೆ. ಇದು ಒಳ್ಳೆಯದಲ್ಲ.
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್, ಅಮಿತ್ ಬನ್ಸಾಲ್ , ನೀನಾ ಬನ್ಸಾಲ್ ಕೃಷ್ಣ, ತಾರಾ ವಿತಾಸ್ತ ಗಂಜು ಮತ್ತು ಶಾಲಿಂದರ್ ಕೌರ್ , ದೆಹಲಿ ಹೈಕೋರ್ಟ್ ವಕೀಲರ ಸಂಘದ (ಡಿಎಚ್‌ಸಿಬಿಎ) ಅಧ್ಯಕ್ಷ ಎನ್ ಹರಿಹರನ್ ಮತ್ತು ದೆಹಲಿ ವಕೀಲರ ಪರಿಷತ್ ಕಾರ್ಯದರ್ಶಿ ರಾಜೇಶ್ ಮಿಶ್ರಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.