ರಾಮನಗರ ಜಿಲ್ಲಾ ವಕೀಲರು ಮತ್ತು ಜಿಲ್ಲಾಡಳಿತಧ ನಡುವಿನ ಗುದ್ದಾಟ ಗಂಭೀರ ಸ್ವರೂಪ ಪಡೆದಿದ್ದು, ವಕೀಲರು ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿರುವ ವಕೀಲರು ಹೋರಾಟಕ್ಕೆ ಬಲ ಒದಗಿಸಿರುವುದು ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಮಧ್ಯೆ, ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿಭಟನಾನಿರತ ವಕೀಲರನ್ನು ತಡರಾತ್ರಿ ಭೇಟಿ ಮಾಡಿದ್ದಾರೆ.
ರಾಮನಗರ ಜಿಲ್ಲಾ ವಕೀಲರ ಸಂಘದ 40 ಮಂದಿ ವಿರುದ್ಧ ಐಜೂರು ಪೊಲೀಸ್ ಠಾಣೆ ಪಿಎಸ್ಐ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ, ಪಿಎಸ್ಐ ಸಯ್ಯದ್ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ಕಳೆದು ಒಂದು ವಾರದಿಂದ ಧರಣಿ ನಡೆಸುತ್ತಿರುವ ವಕೀಲರು ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಸಂಜೆಯಾದರೂ ತಮ್ಮ ಬೇಡಿಕೆಗೆ ಸ್ಪಂದಿಸದ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಕೀಲರು, ಕಚೇರಿಯ ಪ್ರವೇಶ ಮತ್ತು ನಿರ್ಗಮನ ದ್ವಾರಗಳಿಗೆ ದಿಗ್ಬಂದನ ಹಾಕಿದ್ದಾರೆ. ಅಲ್ಲದೇ, ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಪ್ರತಿಭಟನಾ ನಿರತ ವಕೀಲರು ಮಧ್ಯಾಹ್ನ ಭೇಟಿ ಮಾಡಿದ್ದ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರಿಗೆ ಬೇಡಿಕೆ ಈಡೇರಿಕೆಗೆ ಸಂಜೆ 5 ಗಂಟೆವರೆಗೆ ಗಡುವು ನೀಡಿದ್ದರು. ಮೇಲಧಿಕಾರಿಗಳ ಜೊತೆ ಚರ್ಚಿಸಿ ಗಡುವಿನೊಳಗೆ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದ ಇಬ್ಬರೂ ಗಡುವು ಮುಗಿದರೂ ಪ್ರತಿಭಟನಾ ನಿರತ ವಕೀಲರನ್ನು ಭೇಟಿ ಮಾಡಲಿಲ್ಲ.
ಜಿಲ್ಲಾಧಿಕಾರಿ ತಮ್ಮನ್ನು ಭೇಟಿ ಮಾಡಿ ನಿರ್ಧಾರ ತಿಳಿಸಲಿದ್ದಾರೆ ಎಂದು ವಕೀಲರು ಸಂಜೆ 6.30ರವರೆಗೆ ಕಾದರು. ಸ್ಥಳಕ್ಕೆ ಬಾರದ ಜಿಲ್ಲಾಧಿಕಾರಿ ವಕೀಲರ ನಿಯೋಗ ಬಂದು ತಮ್ಮನ್ನು ಭೇಟಿ ಮಾಡಬೇಕು ಎಂದು ಪೊಲೀಸರ ಬಳಿ ಹೇಳಿ ಕಳುಹಿಸಿದ್ದರು.
ಇದಕ್ಕೆ ಒಪ್ಪದ ವಕೀಲರು, ಎಲ್ಲರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ನಿರ್ಧಾರ ತಿಳಿಸಬೇಕು ಎಂದರು. ಅದಕ್ಕೆ ಜಿಲ್ಲಾಧಿಕಾರಿ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ರೊಚ್ಚಿಗೆದ್ದ ವಕೀಲರು, ಜಿಲ್ಲಾಧಿಕಾರಿ ಕಚೇರಿಗೆ ದಿಗ್ಭಂಧನ ಹಾಕಿದರು. ಪಿಎಸ್ಐ ಅಮಾನತು ಮಾಡುವವರೆಗೆ ಸ್ಥಳದಲ್ಲೇ ಅಹೋರಾತ್ರಿ ಧರಣಿ ನಡೆಸುವುದಾಗಿ ಕಚೇರಿ ಆವರಣದಲ್ಲಿ ಕುಳಿತರು.
ಧರಣಿಗೂ ಮುಂಚೆ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ ವಕೀಲರು ಸಭೆ ನಡೆಸಿದರು. ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಬಂದ ವಕೀಲರು, ಮಾರ್ಗದುದ್ದಕ್ಕೂ ಪಿಎಸ್ಐ ಅಮಾನತು ಮಾಡಬೇಕು ಎಂದು ಘೋಷಣೆ ಕೂಗಿದರು. ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿದರು. ಬೆಂಗಳೂರು- ಮೈಸೂರು ರಸ್ತೆಯ ಐಜೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು, ರಾಮನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ ಎಂ ಶ್ರೀವತ್ಸ, ಕಾರ್ಯದರ್ಶಿ ತಿಮ್ಮೇಗೌಡ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿರುವ ವಕೀಲರರು ಧರಣಿಯಲ್ಲಿದ್ದರು.
ಪಿಎಸ್ಐ ವಿರುದ್ಧ ತನಿಖೆ ಅಥವಾ ವಿಚಾರಣೆ ನಡೆಸದೆ ಕ್ರಮ ಜರುಗಿಸಲು ಸಾಧ್ಯವಿಲ್ಲ. ಸದ್ಯ ಅವರ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ಮೂರು ದಿನದೊಳಗೆ ವರದಿ ಬರಲಿದೆ. ತಪ್ಪು ಮಾಡಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ.
ವಕೀಲರ ಸಂಘದ ಬೇಡಿಕೆಯಂತೆ ವಕೀಲರ ಪರ ಮತ್ತು ವಿರುದ್ಧ ದಾಖಲಾಗಿರುವ ಎರಡೂ ಪ್ರಕರಣಗಳ ತನಿಖಾಧಿಕಾರಿಯನ್ನು ಬದಲಾಯಿಸಲಾಗಿದೆ. ಪಿಎಸ್ಐ ವಿರುದ್ಧ ಚನ್ನಪಟ್ಟಣ ಡಿವೈಎಸ್ಪಿ ತನಿಖೆ ನಡೆಸುತ್ತಿದ್ದಾರೆ. ವರದಿ ಆಧರಿಸಿ ಮುಂದಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಇತ್ತ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಅವರು “ಮತ ಬ್ಯಾಂಕ್ ರಾಜಕಾರಣಕ್ಕಾಗಿ ವಕೀಲರ ಒಗಟ್ಟು ಒಡೆಯುವ ಕುತಂತ್ರ ನಡೆಯುತ್ತಿದೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ, ನ್ಯಾಯಾಲಯದ ಆವರಣಕ್ಕೆ ರಾಜಕಾರಣಿಗಳು ಮತ್ತು ಪೊಲೀಸರು ಬರಲು ಅವಕಾಶ ನೀಡುವುದಿಲ್ಲ. ವಕೀಲರು ಕಾನೂನು ಕೈಗೆತ್ತಿಕೊಳ್ಳಲಿ ಎಂದು ನಮ್ಮನ್ನು ಕಾಯಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಜಿಲ್ಲಾ ನ್ಯಾಯಾಧೀಶರ ಅಮಾನತಿಗೆ ಆಗ್ರಹ: ರಾಮನಗರ ಜಿಲ್ಲಾ ವಕೀಲರ ಮೇಲಿನ ಪೊಲೀಸ್ ದೌರ್ಜನ್ಯ ಸಹಿಸಲಾಗದು. ವಕೀಲರ ವಿಷಯದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿಂಗಪ್ಪ ಪರಶುರಾಮ್ ಕೋಪರ್ಡೆ ಅವರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಅಕ್ರಮ ಪ್ರವೇಶದ ವಿರುದ್ಧ ಅವರು ಕ್ರಮ ಕೈಗೊಳ್ಳಬೇಕಿತ್ತು. ಪೊಲೀಸ್ ವರಿಷ್ಠಾಧಿಕಾರಿಯನ್ನು ಕರೆದು ಕಟ್ಟುನಿಟ್ಟಿನ ಸೂಚನೆ ನೀಡಬೇಕಿತ್ತು. ಆದರೆ, ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ಗೊತ್ತಿಲ್ಲ. ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ಹೈಕೋರ್ಟ್ ಕೂಡಲೇ ಅಮಾನತು ಮಾಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.
ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಹ ಅಮಾನತು ಮಾಡಬೇಕು. ವಕೀಲರ ಬೇಡಿಕೆಯನ್ನು ವಿಳಂಬ ಮಾಡದೆ ಡಿಜಿಪಿ ಈಡೇರಿಸಬೇಕು. ಇಲ್ಲಿನ ಸ್ಥಿತಿ ಕುರಿತು ಮುಖ್ಯ ನ್ಯಾಯಮೂರ್ತಿ ಜೊತೆ ಮಾತನಾಡಲಾಗುವುದು ಎಂದು ವಕೀಲರ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಆದೀಶ್ ಅಗರವಾಲ್ ಹೇಳಿದರು.