Karnataka High Court
Karnataka High Court 
ಸುದ್ದಿಗಳು

ಉದ್ಯಮಿಯ ₹75 ಲಕ್ಷ ಹಣ ದೋಚಲು ಸುಳ್ಳು ಪ್ರಕರಣ: ಲೋಕನಾಥ್ ಸಿಂಗ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

Bar & Bench

ಉದ್ಯಮಿಯೊಬ್ಬರಿಂದ ಜಪ್ತಿ ಮಾಡಿದ್ದ ₹75 ಲಕ್ಷ ಹಣವನ್ನು ದೋಚಲು ಬಿಡದಿ ಠಾಣೆಯ ಇನ್‌ಸ್ಪೆಕ್ಟರ್ ಶಂಕರ್ ನಾಯಕ್‌ ಅವರು ಪ್ರಯತ್ನಿಸಿ ಸುಳ್ಳು ಪ್ರಕರಣ ಸೃಷ್ಟಿಸಿದ್ದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಎನ್‌ ಎಸ್‌ ಲೋಕನಾಥ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ತಮ್ಮ ವಿರುದ್ಧ ಬ್ಯಾಟರಾಯನಪುರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಮತ್ತು ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆ ಕೋರಿ ಲೋಕನಾಥ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರನ್ನು ಜಾಮೀನು ಮೇಲೆ ಬಿಡುಗಡೆ ಮಾಡಬೇಕು. ಜಾಮೀನು ಭದ್ರತಾ ಖಾತರಿಯಾಗಿ ಎರಡು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಪಡೆಯಬೇಕು ಎಂದು ಪ್ರಕರಣದ ತನಿಖಾಧಿಕಾರಿಗೆ ಪೀಠ ನಿರ್ದೇಶಿಸಿದೆ.

ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಬ್ಯಾಟರಾಯನಪುರ ಠಾಣಾ ಪೊಲೀಸರಿಗೆ ಮತ್ತು ಪ್ರಕರಣದ ದೂರುದಾರರಾಗಿರುವ ಬ್ಯಾಟರಾಯನಪುರ ಉಪ ವಲಯದ ಎಸಿಪಿ ಭರತ್‌ ಎಸ್‌. ರೆಡ್ಡಿ ಅವರಿಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಲೋಕನಾಥ್‌ ಪರ ವಕೀಲರು, ಪ್ರಕರಣದ ಮೊದಲ ಆರೋಪಿ ಶಂಕರ್‌ ನಾಯಕ್‌ ಅವರು ಅರ್ಜಿದಾರನ ಮೂಲಕ 20 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದರು ಎಂಬ ಏಕೈಕ ಆಧಾರದ ಮೇಲೆ ಪ್ರಕರಣದಲ್ಲಿ ಅರ್ಜಿದಾರರನ್ನು (ಲೋಕನಾಥ್‌) ಸಿಲುಕಿಸಲಾಗಿದೆ. ಶಂಕರ್‌ ನಾಯಕ್‌ ಅವರ ವಿರುದ್ಧ ಬ್ಯಾಟರಾಯನಪುರ ಠಾಣಾ ಪೊಲೀಸರು ಅಧಿಕಾರ ವ್ಯಾಪ್ತಿ ಮೀರಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ 7ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಅದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಪೀಠಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಲೋಕನಾಥ್‌ಗೆ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಹಿನ್ನೆಲೆ: 2022ರ ಸೆಪ್ಟೆಂಬರ್‌ನಲ್ಲಿ ಉದ್ಯಮಿ ಹರೀಶ್‌ಗೆ ಸೇರಿದ್ದ ₹75 ಲಕ್ಷವನ್ನು ಅವರ ಚಾಲಕ ಸಂತೋಷ್ ಕಳವು ಮಾಡಿದ್ದ. ಈ ವಿಚಾರ ಮಧ್ಯವರ್ತಿ ಲೋಕನಾಥ್ ಸಿಂಗ್‌ಗೆ ತಿಳಿದು, ಅವರು ಹರೀಶ್ ಅವರನ್ನು ಬ್ಯಾಟರಾಯನ ಪುರ ಠಾಣಾ ಇನ್ಸ್‌ಪೆಕ್ಟರ್‌ ಶಂಕರ್ ನಾಯಕ್ ಬಳಿ ಕರೆದೊಯ್ದಿದ್ದರು. ಆರೋಪಿ ಪತ್ತೆ ಹಚ್ಚಲು 20 ಲಕ್ಷ ಲಂಚ ನೀಡುವಂತೆ ಇನ್‌ಸ್ಪೆಕ್ಟರ್ ಶಂಕರ್‌ ನಾಯಕ್‌ ಬೇಡಿಕೆ ಇಟ್ಟಿದ್ದರು. ನಂತರ, ಸುಳ್ಳು ಪ್ರಕರಣ ದಾಖಲಿಸಿ, ಆರೋಪಿ ಸಂತೋಷ್‌ನನ್ನು ಬಂಧಿಸಿ ₹75 ಲಕ್ಷ ವಶಕ್ಕೆ ಪಡೆಯಲಾಗಿತ್ತು. ಆದರೆ, ಈ ಹಣವನ್ನು ದೂರುದಾರ ಹರೀಶ್‌ಗೆ ನೀಡದೇ ಸ್ವಂತಕ್ಕೆ ಬಳಸಿಕೊಂಡಿದ್ದ ಆರೋಪ ಶಂಕರ್‌ ನಾಯಕ್‌ ಮೇಲಿತ್ತು. ಈ ಸಂಬಂಧ ಅವರ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ 2023ರ ನವೆಂಬರ್‌ 22ರಂದು ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣದಲ್ಲಿ ಎರಡನೇ ಆರೋಪಿ ಲೋಕನಾಥ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.