Justice M Nagaprasanna and Karnataka HC 
ಸುದ್ದಿಗಳು

ಸುಳ್ಳು ಗಾಂಜಾ ಸೇವನೆ ಪ್ರಕರಣ: ಇಬ್ಬರು ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ನಿರ್ದೇಶನ

ವಿದ್ಯಾರ್ಥಿಗಳನ್ನು ದುರುದ್ದೇಶಪೂರ್ವಕವಾಗಿ ಪ್ರಾಸಿಕ್ಯೂಷನ್‌ಗೆ ಗುರಿಪಡಿಸಲಾಗಿದೆ. ಆದ್ದರಿಂದ, ಅಂದಿನ ಠಾಣಾಧಿಕಾರಿ ಹಾಗೂ ರಾಜಕುಮಾರ್‌ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು. ಕ್ರಮದ ವರದಿಯನ್ನು 3 ತಿಂಗಳಲ್ಲಿ ಸಲ್ಲಿಸಬೇಕು ಎಂದ ನ್ಯಾಯಾಲಯ.

Bar & Bench

ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್ಎಲ್) ವರದಿಯಲ್ಲಿ ಗಾಂಜಾ ಸೇವನೆಯಾಗಿಲ್ಲ ಎಂದು ಸ್ಪಷ್ಟವಾಗಿದ್ದರೂ ಅದಕ್ಕೆ ವಿರುದ್ಧವಾಗಿ ಗಾಂಜಾ ಸೇವನೆ ದೃಢಪಟ್ಟಿದೆ ಎಂದು ಆರೋಪ ಪಟ್ಟಿ ಸಲ್ಲಿಸುವ ಮೂಲಕ ಯುವಕರಿಬ್ಬರನ್ನು ಕಾನೂನು ಸಂಕಷ್ಟಕ್ಕೆ ದೂಡಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಗಾಂಜಾ ಸೇವನೆ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಹನುಮಂತ ಮತ್ತು ಮಂಜುನಾಥ್‌ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ. ಅಲ್ಲದೇ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಎರಡನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಬಾಕಿಯಿದ್ದ ವಿಚಾರಣಾ ಪ್ರಕ್ರಿಯೆಯನ್ನೂ ರದ್ದುಪಡಿಸಿದೆ.

“ಅರ್ಜಿದಾರರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ರಕ್ತದಲ್ಲಿ ಗಾಂಜಾ ಅಂಶಗಳು ಪತ್ತೆಯಾಗಿಲ್ಲ ಎಂದು ಪ್ರಯೋಗಾಲಯದ ವರದಿ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ, ಅರ್ಜಿದಾರರು ಗಾಂಜಾ ಸೇವಿಸಿರುವುದು ಎಫ್‌ಎಸ್‌ಎಲ್‌ ವರದಿಯಿಂದ ದೃಢಪಟ್ಟಿದೆ ಎಂದು ಪ್ರಕರಣದ ತನಿಖಾಧಿಕಾರಿಯಾಗಿದ್ದ 2019ರಲ್ಲಿ ಪ್ರೊಬೆಷನರಿ ಸೇವೆಯಲ್ಲಿದ್ದ ವರ್ತೂರು ಠಾಣೆ ಸಬ್‌ ಇನ್‌ಸ್ಪಪೆಕ್ಟರ್‌ ರಾಜಕುಮಾರ್‌ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆ ವರದಿಯನ್ನು ಅಂದಿನ ಇನ್‌ಸ್ಪೆಕ್ಟರ್‌ (ಮಾದಕ ವಸ್ತು ಶೋಧನೆ/ ಜಪ್ತಿ ಮಾಡುವ ಅಧಿಕಾರ ಹೊಂದಿರುವ ಅಧಿಕಾರಿ) ಒಪ್ಪಿದ್ದಾರೆ. ಇದು ಕಾನೂನುಬಾಹಿರ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

“ಅರ್ಜಿದಾರರಿಂದ 15 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ವಶ ಪಡಿಸಿಕೊಂಡಿರುವ ಗಾಂಜಾ ಎಲ್ಲಿದೆ, ಏನಾಯಿತು ಎಂಬುದು ನಿಗೂಢವಾಗಿದೆ. ಒಮ್ಮೆ ಮಾದಕ ವಸ್ತುವನ್ನು ವಶಪಡಿಸಿಕೊಂಡರೆ, ಅದರ ಪಂಚನಾಮೆ, ದಾಸ್ತಾನು ಮಾಡಬೇಕು. ಅದರ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು. ಪ್ರಕರಣದಲ್ಲಿ 15 ಗ್ರಾಂ ಪಂಚನಾಮೆ ಮಾಡಲಾಗಿದೆ ಎಂಬುದು ನಂಬುವಂತಹದ್ದಲ್ಲ. ಅರ್ಜಿದಾರರು ಗಾಂಜಾ ಸೇವನೆ ಮಾಡಿದ್ದರು ಎನ್ನುವುದೂ ಸಹ ಸಮರ್ಥನೀಯವಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.

“ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ 10 ಸಾಕ್ಷಿಗಳಿದ್ದಾರೆ ಎಂದು ಹೇಳಿದ್ದರೂ ಒಬ್ಬರನ್ನೂ ಪಟ್ಟಿಮಾಡಿ ವಿಚಾರಣೆಗೊಳಪಡಿಸಿಲ್ಲ. ತನಿಖಾಧಿಕಾರಿ ಯಾವ ರೀತಿ ತನಿಖೆ ನಡೆಸಿದ್ದಾರೆ ಮತ್ತು ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಪ್ರಕರಣ ದಾಖಲಾದಾಗ ಅರ್ಜಿದಾರರು ವಿದ್ಯಾರ್ಥಿಗಳಾಗಿದ್ದು, ರಾಜ‌ಕುಮಾರ್ ಕಾರ್ಯವೈಖರಿಯಿಂದ ಅರ್ಜಿದಾರರು ಇಂದಿಗೂ ತೊಂದರೆ ಅನುಭವಿಸುತ್ತಿದ್ದಾರೆ. ಕ್ರಿಮಿನಲ್ ಪ್ರಕರಣ ಬಾಕಿ ಇರುವ ಕಾರಣ ವಿದೇಶದಲ್ಲಿ ಉದ್ಯೋಗವಕಾಶ ಕಳೆದುಕೊಂಡಿದ್ದಾರೆ. ಅರ್ಜಿದಾರರನ್ನು ದುರುದ್ದೇಶಪೂರ್ವಕವಾಗಿ ಅಭಿಯೋಜನೆಗೆ ಗುರಿಪಡಿಸಲಾಗಿದೆ. ಆದ್ದರಿಂದ, ಅಂದಿನ ಠಾಣಾಧಿಕಾರಿ ಹಾಗೂ ರಾಜಕುಮಾರ್‌ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಹಾಗೂ ಕೈಗೊಂಡ ಕ್ರಮಗಳ ಕುರಿತು ಮೂರು ತಿಂಗಳಲ್ಲಿ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

“ಮಾದಕ ವಸ್ತುಗಳನ್ನು ಹೊಂದಿದ್ದವರು ಸಿಕ್ಕಿಬಿದ್ದಲ್ಲಿ ಅವರನ್ನು ಕೂಡಲೇ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು (ಎನ್‌ಡಿಪಿಎಸ್‌) ಕಾಯಿದೆಯ ಸೆಕ್ಷನ್‌ 42ರಲ್ಲಿ ವ್ಯಾಖ್ಯಾನಿಸಲಾಗಿರುವ ಅಧಿಕಾರಿಗಳಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಬಕಾರಿ, ಮಾದಕ ದ್ರವ್ಯ ನಿಯಂತ್ರಣ ದಳ, ಸುಂಕ, ಕಂದಾಯ ವಿಚಕ್ಷಣಾ ದಳ, ಕೇಂದ್ರ ಸರ್ಕಾರದ ಅಧೀನ ಸಂಸದೀಯ ಪಡೆಯ ಮತ್ತು ಸಶಸ್ತ್ರ ಪಡೆಯ, ಪೊಲೀಸರು, ಇನ್ನಿತರ ಇಲಾಖೆಗಳ ಗೆಜೆಟೆಡ್‌ ಅಧಿಕಾರಿಗಳು ಅಥವಾ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಬೇಕು. ಈ ನಿಯಮವನ್ನು ಸೆಕ್ಷನ್‌ 50 ಪ್ರತಿಪಾದಿಸುತ್ತದೆ. ಅಧಿಕಾರಿಗಳು ಈ ನಿಯಮ ಪಾಲಿಸದ ಹಲವು ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತಿವೆ. ಆದ್ದರಿಂದ, ಎನ್‌ಡಿಪಿಎಸ್‌ ಸೆಕ್ಷನ್‌ 50 ಮತ್ತು 52 ನಿಯಮ ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಥವಾ ಗೃಹ ಇಲಾಖೆ ಸುತ್ತೋಲೆ ಹೊರಡಿಸಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ 2019ರ ಆಗಸ್ಟ್ 31ರಂದು ಅರ್ಜಿದಾರರನ್ನು ವರ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರೊಬೆಷನರಿ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದ ರಾಜಕುಮಾರ್‌ ಬಂಧಿಸಿದ್ದರು. ಅರ್ಜಿದಾರರು ಗಾಂಜಾ ಸೇವಿಸಿಲ್ಲ ಎನ್ನುವುದು ಎಫ್‌ಎಸ್‌ಎಲ್ ವರದಿಯಲ್ಲಿ ಸ್ಪಷ್ಟವಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು, ಅರ್ಜಿದಾರರ ವಿರುದ್ಧ ಗಾಂಜಾ ಸೇವನೆ ಆರೋಪದ ಮೇಲೆ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್‌ 27 ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

ಅರ್ಜಿದಾರರ ಪರವಾಗಿ ವಕೀಲ ವಿ ಶಶಿಕಿರಣ್‌, ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ವಾದಿಸಿದ್ದರು.

Hanumantha & other Vs State of Karnataka.pdf
Preview