Karnataka High Court
Karnataka High Court 
ಸುದ್ದಿಗಳು

ಹುಸಿ ಹೇಬಿಯಸ್‌ ಕಾರ್ಪಸ್‌ ಅರ್ಜಿ, ದಂಡ ವಿಧಿಸಿದ ಹೈಕೋರ್ಟ್‌

Bar & Bench

ಭಯೋತ್ಪಾದನಾ ಕೃತ್ಯದ ಸಂಚಿಗೆ ಸಂಬಂಧಿಸಿದಂತೆ ತಮ್ಮ ಪುತ್ರನನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದ ಮಾಹಿತಿ ಇದ್ದರೂ ಮಗನನ್ನು ಪತ್ತೆ ಹಚ್ಚಿ ಹಾಜರು ಪಡಿಸಲು ಕೋರಿ ಹೇಬಿಯಸ್‌ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ರೂ.10 ಸಾವಿರ ದಂಡ ವಿಧಿಸಿದೆ.

ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಪ್ರಸಕ್ತ ಮಂಗಳೂರಿನಲ್ಲಿ ನೆಲೆಸಿರುವ ಮುನೀರ್‌ ಅಹ್ಮದ್‌ ಎಂಬುವರು ತಮ್ಮ ಮಗನನ್ನು ಹಾಜರು ಪಡಿಸಲು ಪೊಲೀಸರಿಗೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆಯನ್ನು ನ್ಯಾ. ಬಿ ವೀರಪ್ಪ ಅವರ ನೇತೃತ್ವದ ಪೀಠವು ನಡೆಸಿತು.

ಮಂಗಳೂರಿನ ನಿವಾಸದಲ್ಲಿದ್ದ ತಮ್ಮ ಪುತ್ರ ಮಾಝ್‌ ಅಪರಿಚಿತರಿಂದ ಪಾರ್ಸಲ್ ಪಡೆಯಲೆಂದು ಮನೆಯಿಂದ ತೆರಳಿದವನು ಹಿಂದಿರುಗಿಲ್ಲ ಎಂದು ತಿಳಿಸಿ ಮುನೀರ್ ಅಹ್ಮದ್ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಸೆ.17 ರಂದು ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ನಂತರ ಸೆ.19ರಂದು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿ, ತಮ್ಮ ಮಗನನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸರ್ಕಾರ ಮತ್ತು ಪೊಲೀಸರಿಗೆ ಆದೇಶಿಸಲು ಕೋರಿದ್ದರು.

ಪ್ರಕರಣವು ಇಂದು ವಿಚಾರಣೆಗೆ ಬಂದಾಗ ಸರ್ಕಾರದ ಪರ ಹಾಜರಾದ ವಕೀಲ ಪಿ.ತೇಜೇಸ್ ಮೆಮೊ ಸಲ್ಲಿಸಿ, ತೀರ್ಥಹಳ್ಳಿ ಠಾಣಾ ಪೊಲೀಸರು ಅರ್ಜಿದಾರನ ಪುತ್ರನನ್ನು ಕರೆದೊಯ್ದು ವಿಚಾರಣೆ ನಡೆಸಿದ್ದರು. ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಸೆ.20ರ ಮಧ್ಯರಾತ್ರಿ ಬಂಧಿಸಿದ್ದರು. ಬೆಳಗ್ಗೆ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ ಎಂದು ತಿಳಿಸಿ ಎಫ್‌ಐಆರ್ ಅನ್ನು ಕೋರ್ಟ್‌ಗೆ ಸಲ್ಲಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ತೀರ್ಥಹಳ್ಳಿ ಠಾಣಾ ಪೊಲೀಸರು ವಿಚಾರಣೆಗಾಗಿ ತಮ್ಮ ಪುತ್ರನ್ನು ಕರೆದೊಯ್ದಿರುವ ವಿಚಾರ ಅರ್ಜಿದಾರರಿಗೆ ತಿಳಿದಿದೆ. ಹೀಗಿದ್ದರೂ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಮಾಜ್‌ನನ್ನು ಬಂಧಿಸಿರುವ ವಿಚಾರವನ್ನು ಪೊಲೀಸರು ಅರ್ಜಿದಾರರಿಗೆ ತಿಳಿಸಿದ್ದಾರೆ. ಅರ್ಜಿ ವಿಚಾರಣೆಗೆ ಬಂದಾಗ ಆ ಮಾಹಿತಿಯನ್ನು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿಲ್ಲ. ಸತ್ಯಾಂಶ ಗೊತ್ತಿದ್ದೂ ಅರ್ಜಿ ಹಿಂಪಡೆಯಲು ಮುಂದಾಗಿಲ್ಲ ಎಂದು ಕೆಂಡಾಮಂಡಲವಾಯಿತು. ಇದು ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆಯಾಗಿದ್ದು ದಂಡ ವಿಧಿಸಲು ಯೋಗ್ಯ ಪ್ರಕರಣವಾಗಿದೆ ಎಂದಿತು.

ಮೊದಲಿಗೆ ರೂ.1 ಲಕ್ಷ ದಂಡ ವಿಧಿಸಿದ ಪೀಠವು, ನಂತರ ಅರ್ಜಿದಾರರ ಪ್ರಾರ್ಥನೆಯ ಮೇರೆಗೆ ದಂಡದ ಮೊತ್ತವನ್ನು ರೂ.10 ಸಾವಿರಕ್ಕೆ ಇಳಿಸಿತು. ಹೈಕೋರ್ಟ್ ವಕೀಲರ ಗುಮಾಸ್ತರ ಸಂಘಕ್ಕೆ ದಂಡ ಪಾವತಿಸಲು ಸೂಚಿಸಿ ಅರ್ಜಿ ವಜಾಗೊಳಿಸಿತು.