Karnataka High Court 
ಸುದ್ದಿಗಳು

ಸ್ಮಶಾನ ಭೂಮಿ ಕುರಿತು ಸುಳ್ಳು ಮಾಹಿತಿ: ಅಧಿಕಾರಿಗಳ ಖುದ್ದು ಹಾಜರಿಗೆ ಸೂಚಿಸಿದ ಹೈಕೋರ್ಟ್

ತಪ್ಪು ಮಾಹಿತಿ ನೀಡುವ ಮೂಲಕ ನ್ಯಾಯಾಲಯಕ್ಕೆ ವಂಚನೆ ಮಾಡಲಾಗಿದೆ. ತಪ್ಪು ಮಾಹಿತಿ ನೀಡಿದವರಲ್ಲಿ ನಾಲ್ವರು ಜಿಲ್ಲಾಧಿಕಾರಿಗಳನ್ನು ಮನೆಗೆ ಕಳುಹಿಸಿದರೆ ವ್ಯವಸ್ಥೆ ಸರಿಯಾಗಲಿದೆ ಎಂದು ಎಚ್ಚರಿಸಿದ ಪೀಠ.

Bar & Bench

ರಾಜ್ಯದ ಎಲ್ಲ ಗ್ರಾಮಗಳಿಗೆ ಸ್ಮಶಾನ ಭೂಮಿ ಕಲ್ಪಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಾ.17 ರಂದು ಖುದ್ದು ಹಾಜರಾಗುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾ. ಟಿ ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿಯನ್ನು ನೀಡಿರುವುದನ್ನು ಗಮನಿಸಿದ ಪೀಠವು ಅಧಿಕಾರಿಗಳ ಬಗ್ಗೆ ಕೆಂಡಾಮಂಡಲವಾಯಿತು. ತಪ್ಪು ಮಾಹಿತಿ ನೀಡುವ ಮೂಲಕ ಕೋರ್ಟ್‌ಗೆ ವಂಚನೆ ಮಾಡಲಾಗಿದೆ. ತಪ್ಪು ಮಾಹಿತಿ ನೀಡಿದವರಲ್ಲಿ ನಾಲ್ವರು ಜಿಲ್ಲಾಧಿಕಾರಿಗಳನ್ನು ಮನೆಗೆ ಕಳುಹಿಸಿದರೆ ವ್ಯವಸ್ಥೆ ಸರಿಯಾಗಲಿದೆ ಎಂದು ಪೀಠವು ಎಚ್ಚರಿಕೆ ನೀಡಿತು.

ನ್ಯಾಯಾಲಯದ ಆದೇಶಕ್ಕೆ ಅಧಿಕಾರಿಗಳು ಯಾವುದೇ ರೀತಿಯಲ್ಲಿಯೂ ಬೆಲೆ ಕೊಡುತ್ತಿಲ್ಲ. ಹಾಗಾಗಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಡಿಸಿ ಮುಂದಿನ ಕ್ರಮ ಜರುಗಿಸುವುದು ಬಿಟ್ಟರೆ ಬೇರೆ ದಾರಿ ಕೋರ್ಟ್ ಮುಂದೆ ಇಲ್ಲ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

2023ರ ಜನವರಿ10ರಂದು ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವರದಿ ಸಲ್ಲಿಸಿ, ರಾಜ್ಯದಲ್ಲಿ ಒಟ್ಟು 29,616 ಗ್ರಾಮಗಳಿವೆ. ಈ ಪೈಕಿ 1,394 ಗ್ರಾಮಗಳು ಜನವಸತಿ ಇಲ್ಲದ ಗ್ರಾಮಗಳಾಗಿವೆ. ಹೀಗಾಗಿ, 28,222 ಗ್ರಾಮಗಳಲ್ಲಿ ಸ್ಮಶಾನ ಜಾಗದ ಅಗತ್ಯವಿದ್ದು, ಈ ಪೈಕಿ 27,903 ಗ್ರಾಮಗಳಿಗೆ ಸ್ಮಶಾನ ಭೂಮಿ ಕಲ್ಪಿಸಲಾಗಿದೆ. ಅಂದರೆ ಶೇ. 98.87ರಷ್ಟು ಸ್ಮಶಾನ ಭೂಮಿ ಕಲ್ಪಿಸಿದಂತಾಗಿದೆ. ಇನ್ನೂ 319 ಗ್ರಾಮಗಳಿಗೆ ಸ್ಮಶಾನ ಭೂಮಿ ಕಲ್ಪಿಸಬೇಕಿದೆ. 56 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದರು.  

ಆದರೆ, ಹೈಕೋರ್ಟ್ ಸೂಚನೆ ಮೇರೆಗೆ ಈ ಮಾಹಿತಿಯ ವಾಸ್ತವಾಂಶ ಪರಿಶೀಲಿಸಿದ್ದ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವು, ಸರ್ಕಾರ ತಪ್ಪು ಮಾಹಿತಿ ನೀಡಿದೆ. ಇನ್ನೂ 2041 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕೊಟ್ಟಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ವಿಚಾರಣೆ ವೇಳೆ ತಂದಿತು. ಈ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು , ಜಿಲ್ಲಾಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಒಪ್ಪಿಕೊಂಡರು. ಇದರಿಂದ ಅಸಮಾಧಾನ ಗೊಂಡ ನ್ಯಾಯಪೀಠವು ಮುಂದಿನ ವಿಚಾರಣೆ ವೇಳೆ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳು ಖುದ್ದು ಹಾಜರಿರಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತು.