ಕ್ರಿಕೆಟಿಗ ಯುಜುವೇಂದ್ರ ಚಹಾಲ್ ಮತ್ತು ಅವರ ಪರಿತ್ಯಕ್ತ ಪತ್ನಿ ಧನಶ್ರೀ ವರ್ಮಾ ಅವರ ವಿಚ್ಛೇದನಕ್ಕೆ ಮುಂಬೈನ ಕೌಟುಂಬಿಕ ನ್ಯಾಯಾಲಯ ಗುರುವಾರ ಅನುಮತಿಸಿದೆ.
ಇದನ್ನು ಚಹಾಲ್ ಪರ ವಕೀಲ ನಿತಿನ್ ಗುಪ್ತಾ ಮತ್ತು ಧನಶ್ರೀ ಪರ ವಕೀಲೆ ಅದಿತಿ ಮೊಹೋನಿ ಅವರು ಬಾರ್ & ಬೆಂಚ್‌ಗೆ ದೃಢಪಡಿಸಿದರು.
ಚಹಾಲ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭಾಗವಹಿಸಲಿರುವ ಕಾರಣ, ವಿಚ್ಛೇದನ ಅರ್ಜಿಯನ್ನು ಇಂದೇ ನಿರ್ಧರಿಸುವಂತೆ ಬಾಂಬೆ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯಕ್ಕೆ ಆದೇಶಿಸಿತ್ತು. ಅದಾದ ಒಂದು ದಿನದ ನಂತರ ವಿಚ್ಛೇದನ ಕೋರಿದ್ದ ಅರ್ಜಿ ಪುರಸ್ಕರಿಸಲಾಗಿದೆ.
ವಿಚ್ಛೇದನ ನಿಯಮಗಳ ಪ್ರಕಾರ, ಧನಶ್ರೀ ಅವರಿಗೆ ಚಹಾಲ್ ಎರಡು ಕಂತುಗಳಲ್ಲಿ ₹4.75 ಕೋಟಿ ಜೀವನಾಂಶ ಪಾವತಿಸಬೇಕಾಗುತ್ತದೆ.
ವಿಚ್ಛೇದನ ಆದೇಶಕ್ಕಾಗಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B ಅಡಿಯಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ ನಂತರ ಪ್ರತಿ ದಂಪತಿಗೆ ನಿಗದಿಪಡಿಸುವ ಆರು ತಿಂಗಳ ಕೂಲಿಂಗ್-ಆಫ್ ಅವಧಿಯನ್ನು (ಮನಸ್ಸು ಬದಲಾಯಿಸಿ ತಮ್ಮ ತೀರ್ಮಾನವನ್ನು ಮರು ಪರಿಶೀಲಿಸುವ ಅವಕಾಶವಿರುವ ಕಾಲಾವಧಿ) ಮನ್ನಾ ಮಾಡುವಂತೆ ಚಹಾಲ್ ಮತ್ತು ವರ್ಮಾ ಸಲ್ಲಿಸಿದ್ದ ಮನವಿಯನ್ನು ಬುಧವಾರ ಹೈಕೋರ್ಟ್ ಪುರಸ್ಕರಿಸಿತ್ತು.
ಚಹಾಲ್ ಮತ್ತು ವರ್ಮಾ ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಮತ್ತು ಜೀವನಾಂಶ ಪಾವತಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಧ್ಯಸ್ಥಿಕೆಯ ಸಮಯದಲ್ಲಿ ಏರ್ಪಟ್ಟಿದ್ದ ಒಪ್ಪಿಗೆಯ ನಿಯಮ ಪಾಲಿಸಲಾಗಿದೆ ಎಂಬುದನ್ನು ಪರಿಗಣಿಸಿದ್ದ ಹೈಕೋರ್ಟ್ ಈ ಆದೇಶ ನೀಡಿತ್ತು.
ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ ತಂಡದ ಸ್ಪಿನ್ನರ್ ಆಗಿರುವ ಚಹಾಲ್, ಮಾರ್ಚ್ 22ರಿಂದ ಪ್ರಾರಂಭವಾಗುವ ಲೀಗ್‌ನಲ್ಲಿ ಆಡಲಿದ್ದಾರೆ.
ಚಹಾಲ್ ಮತ್ತು ಧನಶ್ರೀ ಡಿಸೆಂಬರ್ 2020ರಲ್ಲಿ ವಿವಾಹವಾಗಿದ್ದರು. ಜೂನ್ 2022ರಲ್ಲಿ ಬೇರ್ಪಟ್ಟಿದ್ದರು. ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ವಿಚ್ಛೇದನ ಕೋರಿ ಫೆಬ್ರವರಿ 5 ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ಜಂಟಿ ಅರ್ಜಿ ಸಲ್ಲಿಸಿದ್ದರು. ಅವರು ಕೂಲಿಂಗ್-ಆಫ್ ಅವಧಿಯನ್ನು ಸಹ ಮನ್ನಾ ಮಾಡಬೇಕೆಂದು ಕೋರಿದ್ದರು.
ಸೆಕ್ಷನ್ 13B(2) ರ ಅಡಿಯಲ್ಲಿ, ಕೌಟುಂಬಿಕ ನ್ಯಾಯಾಲಯವು ಪರಸ್ಪರ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ ಆರು ತಿಂಗಳ ನಂತರವೇ ವಿಚ್ಛೇದನ ಪರಿಗಣಿಸಬಹುದು. ಇತ್ಯರ್ಥ ಮತ್ತು ಪುನರ್‌ಮಿಲನದ ಸಾಧ್ಯತೆಗಳನ್ನು ಅನ್ವೇಷಿಸಲು ಕೂಲಿಂಗ್-ಆಫ್ ಅವಧಿ ನೀಡಲಾಗಿದೆ.
ಆದರೆ ಪಕ್ಷಕಾರರ ನಡುವಿನ ವಿವಾದ ಇತ್ಯರ್ಥಕ್ಕೆ ಯಾವುದೇ ಅವಕಾಶವಿಲ್ಲದಿದ್ದರೆ ಈ ಅವಧಿಯನ್ನು ಮನ್ನಾ ಮಾಡಬಹುದು ಎಂದು ಸುಪ್ರೀಂ ಕೋರ್ಟ್ 2017ರಲ್ಲಿ ತೀರ್ಪು ನೀಡಿತ್ತು.
ಫೆಬ್ರವರಿ 20 ರಂದು ಕೌಟುಂಬಿಕ ನ್ಯಾಯಾಲಯ ಶಾಸನಬದ್ಧ ಕೂಲಿಂಗ್-ಆಫ್ ಅವಧಿಯನ್ನು ಮನ್ನಾ ಮಾಡುವ ವಿನಂತಿಯನ್ನು ನಿರಾಕರಿಸಿತ್ತು. ಧನಶ್ರೀಗೆ ಚಹಾಲ್ ₹4.75 ಕೋಟಿ ಪಾವತಿಸಬೇಕಾದ ಒಪ್ಪಿಗೆಯ ನಿಯಮಗಳನ್ನು ಭಾಗಶಃ ಪಾಲಿಸಿದ್ದರು ಎಂಬ ಕಾರಣಕ್ಕೆ ಇದು ಮನವಿ ನಿರಾಕರಿಸಿತ್ತು. ಅವರು ₹2.37 ಕೋಟಿ ಪಾವತಿಸಿದ್ದಾರೆ ಎಂದು ಕೌಟುಂಬಿಕ ನ್ಯಾಯಾಲಯ ಹೇಳಿತ್ತು. ಹೀಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಕೌಟುಂಬಿಕ ನ್ಯಾಯಾಲಯ ಫೆಬ್ರವರಿ 20ರಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಒಪ್ಪಲಿಲ್ಲ. ವಿಚ್ಛೇದನದ ತೀರ್ಪಿನ ನಂತರ ಎರಡನೇ ಕಂತಿನ ಶಾಶ್ವತ ಜೀವನಾಂಶವನ್ನು ಪಾವತಿಸಲು ಅವಕಾಶ ನೀಡಿರುವುದರಿಂದ ಒಪ್ಪಿಗೆಯ ನಿಯಮಗಳನ್ನು ಪಾಲಿಸಲಾಗಿದೆ ಎಂದು ಹೈಕೋರ್ಟ್ ನುಡಿದಿತ್ತು.
ಆದ್ದರಿಂದ, ಕೂಲಿಂಗ್-ಆಫ್ ಅವಧಿಯನ್ನು ಮನ್ನಾ ಮಾಡುವಂತೆ ಚಹಾಲ್ ಮತ್ತು ಧನಶ್ರೀ ಸಲ್ಲಿಸಿದ್ದ ಮನವಿ ಪುರಸ್ಕರಿಸಲು ಯಾವುದೇ ಅಡ್ಡಿಯಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಅದರಂತೆ ಗುರುವಾರ (ಇಂದು) ಪ್ರಕರಣ ಕುರಿತು ತೀರ್ಪು ನೀಡುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಅದು ಆದೇಶಿಸಿತ್ತು.