Delhi HC and Dhurandhar Hindi movie 
ಸುದ್ದಿಗಳು

'ಧುರಂಧರ್‌ʼ ಚಿತ್ರ ಬಿಡುಗಡೆಗೆ ತಡೆ ಕೋರಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ದಿ. ಮೇಜರ್‌ ಮೋಹಿತ್ ಶರ್ಮಾ ಕುಟುಂಬ

ತಮ್ಮ ಗೌಪ್ಯ ಕಾರ್ಯಾಚರಣೆಗಳ ಮೂಲಕವೇ ಖ್ಯಾತರಾಗಿದ್ದ, ಭಯೋತ್ಪಾದಕರೊಂದಿಗೆ ಸೆಣಸುತ್ತಲೇ ಹುತಾತ್ಮರಾದ ವಿಶೇಷ ಪಡೆಗಳ ಅಧಿಕಾರಿಯಾಗಿದ್ದ ದಿ. ಮೇಜರ್‌ ಶರ್ಮಾ ಅವರ ಬದುಕಿನಿಂದ 'ಧುರಂಧರ್‌ʼ ಚಿತ್ರ ನೇರವಾಗಿ ಪ್ರಭಾವಿತವಾಗಿದೆ ಎನ್ನಲಾಗಿದೆ.

Bar & Bench

ನಟ ರಣವೀರ್‌ ಸಿಂಗ್‌ ಅಭಿನಯದ ಹಿಂದಿ ಚಲನಚಿತ್ರ 'ಧುರಂಧರ್‌ʼ ಬಿಡುಗಡೆಗೆ ಶೀಘ್ರ ತಡೆ ನೀಡುವಂತೆ ಕೋರಿ ಆಶೋಕ ಚಕ್ರ ಶೌರ್ಯ ಪದಕಕ್ಕೆ ಭಾಜನರಾದ ದಿವಂಗತ ಮೇಜರ್‌ ಮೋಹಿತ್‌ ಶರ್ಮಾ ಅವರ ಪೋಷಕರು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಮ್ಮ ಗೌಪ್ಯ ಹಾಗೂ ನಿಗೂಢ ಕಾರ್ಯಾಚರಣೆಗಳ ಮೂಲಕವೇ ಖ್ಯಾತರಾಗಿದ್ದ, ಭಯೋತ್ಪಾದಕರೊಂದಿಗೆ ಸೆಣಸುತ್ತಲೇ ಹುತಾತ್ಮರಾದ ವಿಶೇಷ ಪಡೆಗಳ ಅಧಿಕಾರಿಯಾಗಿದ್ದ ದಿ. ಮೇಜರ್‌ ಮೋಹಿತ್‌ ಶರ್ಮಾ ಅವರ ಬದುಕಿನಿಂದ ನೇರವಾಗಿ ಪ್ರಭಾವಿತವಾಗಿ 'ಧುರಂಧರ್‌ʼ ಚಲನಚಿತ್ರವನ್ನು ರೂಪಿಸಿರುವಂತೆ ಕಂಡುಬರುತ್ತದೆ. ಇದಕ್ಕಾಗಿ ಚಿತ್ರ ತಂಡವು ಭಾರತೀಯ ಸೇನೆಯಿಂದಾಗಲಿ, ಮೋಹಿತ್‌ ಶರ್ಮಾ ಅವರ ಕುಟುಂಬದಿಂದಾಗಲಿ ಅನುಮತಿಯನ್ನು ಪಡೆದಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಚಿತ್ರದ ಟ್ರೇಲರ್‌ ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ ಮೇಜರ್‌ ಮೋಹಿತ್‌ ಶರ್ಮಾ ಅವರ ಜೀವನದ ಪ್ರಮುಖ ಘಟನೆಗಳು, ಮಿಲಿಟರಿ ಸೇವೆ, ಕಾಶ್ಮೀರದಲ್ಲಿ ಅವರು ನಡೆಸಿದ ಭಯೋತ್ಪಾದನಾ ವಿರೋಧಿ ಗುಪ್ತ ಕಾರ್ಯಾಚರಣೆಗಳ ವಿವರಗಳು ಗೋಚರಿಸುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮಾಧ್ಯಮ ವರದಿಗಳಲ್ಲಿ ಹಾಗೂ ಆನ್‌ಲೈನ್‌ ಚರ್ಚೆಗಳಲ್ಲಿ 'ಧುರಂಧರ್‌ʼ ಚಿತ್ರವನ್ನು ಮೇಜರ್‌ ಶರ್ಮಾ ಅವರೊಂದಿಎ ಹೋಲಿಸಿ ಚರ್ಚೆಗಳು ನಡೆಯುತ್ತಿವೆಯಾದರೂ ಚಿತ್ರ ನಿರ್ಮಾತೃಗಳ ಇದನ್ನು ಒಪ್ಪಿಕೊಳ್ಳುವುದಾಗಲಿ, ಅಲ್ಲಗಳೆಯುವುದಾಗಲಿ ಮಾಡಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಮುಂದುವರೆದು, ಹುತಾತ್ಮರಾಗುವಿಕೆಯು ವಾಣಿಜ್ಯೀಕರಣಗೊಳಿಸುವಂತಹ ಸಂಗತಿಯಲ್ಲ. ಸತ್ಯ, ಘನತೆಗಳನ್ನು ಕಾಪಾಡದೆ ಹಾಗೂ ಅನುಮತಿಯನ್ನು ಪಡೆಯದೆ ಅವರ (ಮೇಜರ್‌ ಶರ್ಮಾ) ಜೀವನವನ್ನು ಮರುಚಿತ್ರಿಸಲಾಗದು ಎಂದು ಅರ್ಜಿದಾರರು ವಿವರಿಸಿದ್ದಾರೆ.

ಸಂವಿಧಾನದ 21ನೇ ವಿಧಿಯಡಿ ಖಾತರಪಡಿಸಲಾದ ಹುತಾತ್ಮರಾದವರ ವ್ಯಕ್ತಿತ್ವದ ಹಕ್ಕುಗಳನ್ನು ಚಿತ್ರವು ಉಲ್ಲಂಘಿಸಿದ್ದು, ಅಂತಹ ಅನುಮತಿಯಿಲ್ಲದ ಚಿತ್ರಣವು ಅವರ ಖಾಸಗಿತನ ಹಾಗೂ ಘನತೆಗೆ ಧಕ್ಕೆ ತರುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ಇದಲ್ಲದೆ, ಚಿತ್ರವು ದೇಶದ ಭದ್ರತೆಗೆ ಧಕ್ಕೆ ಉಂಟುಮಾಡುತ್ತದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

ಚಿತ್ರದ ಬಿಡುಗಡೆಗೂ ಮುನ್ನ ಮೇಜರ್‌ ಮೋಹಿತ್‌ ಶರ್ಮಾ ಅವರ ಕುಟುಂಬದವರಿಗೆ ಖಾಸಗಿಯಾಗಿ ಚಿತ್ರ ಪ್ರದರ್ಶನವನ್ನು ಏರ್ಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ನಿಜ ಜೀವನದಲ್ಲಿ ಹುತಾತ್ಮರಾದವರ ಕುರಿತು ಚಿತ್ರವನ್ನು ನಿರ್ಮಿಸುವುದಕ್ಕೂ ಮುನ್ನ ಹುತಾತ್ಮರಾದವರ ಕಾನೂನುಬದ್ಧ ಉತ್ತರಾಧಿಕಾರಿಗಳಿಂದ ಹಾಗೂ ಸೇನೆಯಿಂದ ಅನುಮತಿಯನ್ನು ಪಡೆಯಬೇಕು ಎನ್ನುವುದು ಅರ್ಜಿದಾರರ ಕೋರಿಕೆಯಾಗಿದೆ.

ಅರ್ಜಿಯು ಮುಂದಿನ ವಾರ ವಿಚಾರಣೆಗೆ ಪಟ್ಟಿಯಾಗುವ ನಿರೀಕ್ಷೆ ಇದೆ.