Farmers in Punjab staging a protest against the Farm Bills Sikh24
ಸುದ್ದಿಗಳು

ಕೃಷಿ ಕಾಯಿದೆಗಳು ಕೃಷಿಯನ್ನು ಕಾರ್ಪೊರೇಟೀಕರಣ ಮಾಡಲಿದ್ದು, ರೈತರನ್ನು ಶೋಷಿಸಲಿವೆ: ಸುಪ್ರೀಂನಲ್ಲಿ ಕಿಸಾನ್ ಸಂಘದ ಮನವಿ

ಈಗ ಜಾರಿಗೊಳಿಸಲಾಗಿರುವ ಕೃಷಿ ಕಾಯಿದೆ ಅಸಾಂವಿಧಾನಿಕ ಮತ್ತು ರೈತ ವಿರೋಧಿಯಾಗಿವೆ. ಇವು ಕೃಷಿ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಕಲ್ಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯವಸ್ಥೆಯನ್ನು ಶಿಥಿಲಗೊಳಿಸಲಿವೆ.

Bar & Bench

ನೂತನವಾಗಿ ಜಾರಿಗೊಳಿಸಲಾಗಿರುವ ಮೂರು ಕೃಷಿ ಕಾಯಿದೆಗಳು ಕೃಷಿಯನ್ನು ಕಾರ್ಪೊರೇಟೀಕರಣಗೊಳಿಸಲಿದ್ದು, ಇದರಿಂದ ರೈತರು ಶೋಷಣೆಗೆ ಒಳಗಾಗಲಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಪ್ರವೇಶಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಮನವಿಯಲ್ಲಿ ಭಾರತೀಯ ಕಿಸಾನ್ ಸಂಘ‌ (ಬಿಕೆಯು) ಉಲ್ಲೇಖಿಸಿದೆ. ನೂತನ ಕೃಷಿ ಕಾಯಿದೆಗಳ ವಿರುದ್ಧ ಡಿಎಂಕೆಯ ಸಂಸತ್ ಸದಸ್ಯ ತಿರುಚ್ಚಿ ಶಿವ ಸಲ್ಲಿಸಿರುವ ಅರ್ಜಿಯಲ್ಲಿ ಮಧ್ಯಪ್ರವೇಶಕ್ಕೆ ಕಿಸಾನ್‌ ಸಂಘ ಅನುಮತಿ ಕೋರಿದೆ.

ಬೆಲೆ ಭರವಸೆ ಮತ್ತು ಕೃಷಿ ಸೇವೆಗೆ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಕಾಯಿದೆ-2020, ಕೃಷಿಕರ ಉತ್ಪನ್ನಗಳ ವ್ಯಾಪಾರ ಮತ್ತು ವಹಿವಾಟು (ನೆರವು ಮತ್ತು ಸರಾಗಗೊಳಿಸುವುದು) ಕಾಯಿದೆ ಮತ್ತು ಅಗತ್ಯ ಉತ್ಪನ್ನಗಳ ತಿದ್ದುಪಡಿ ಕಾಯಿದೆಗಳು ಕಾನೂನುಬಾಹಿರ, ನಿರಂಕುಶ ಮತ್ತು ಅಸಾಂವಿಧಾನಿಕ ಎಂದು ಬಿಕೆಯು ದೂರಿದೆ.

“ಹೊಸ ಕಾಯಿದೆಗಳು ಕೃಷಿ ಉತ್ಪನ್ನಗಳ ಮೇಲಿನ ಹತೋಟಿ ಮತ್ತು ವ್ಯಾಪಾರೀಕರಣಕ್ಕೆ ನಾಂದಿ ಹಾಡಲಿವೆ. ಇದಕ್ಕೆ ಅನುವು ಮಾಡಿಕೊಟ್ಟರೆ ನಮ್ಮ ದೇಶವನ್ನು ಇವು ಸರ್ವನಾಶ ಮಾಡಲಿವೆ. ಕಾರ್ಪೊರೇಟ್‌ಗಳು ಏಕಕಾಲಕ್ಕೆ ನಮ್ಮ ಕೃಷಿ ಉತ್ಪನ್ನಗಳನ್ನು ಅನಿಯಂತ್ರಿತವಾಗಿ ರಫ್ತು ಮಾಡುತ್ತಾರೆ” ಎಂದು ವಕೀಲ ಎ ಪಿ ಸಿಂಗ್‌ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ವಿವರಿಸಲಾಗಿದೆ.

ಕೃಷಿ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನೇ ಹಾಳು ಮಾಡುವುದರಿಂದ ಅವುಗಳು ಅಸಾಂವಿಧಾನಿಕ ಮತ್ತು ರೈತ ವಿರೋಧಿ ಎಂದು ರೈತ ಸಮುದಾಯಗಳು ತಕರಾರು ಎತ್ತಿವೆ.

“ಸದ್ಯದ ರೀತಿಯಲ್ಲಿ ಸದರಿ ಕಾನೂನುಗಳನ್ನು ಜಾರಿಗೊಳಿಸಿದರೆ ಅನಿಯಂತ್ರಿತವಾದ ಪರ್ಯಾಯ ಮಾರುಕಟ್ಟೆ ವ್ಯವಸ್ಥೆ ಜಾರಿಗೊಳ್ಳಲಿದ್ದು, ರೈತ ಸಮುದಾಯಕ್ಕೆ ಭಾರಿ ಹೊಡೆತ ನೀಡಲಿದೆ. ಇದರಿಂದ ಭಾರತದ ರೈತರ ಶೋಷಣೆಗೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ. ಕೃಷಿಯ ಅಂತರ್ಗತ ದೌರ್ಬಲ್ಯವನ್ನು ಕೃಷಿಕರನ್ನು ವಾಣಿಜ್ಯೀಕರಣಕ್ಕೆ ಒಳಪಡಿಸುವ ಮೂಲಕ ಪರಿಹರಿಸಲಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.

ಡಿಎಂಕೆ ಸಂಸದರಾದ ತಿರುಚ್ಚಿ ಶಿವ ಸಲ್ಲಿಸಿರುವ ಪ್ರಧಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶ ಕೋರಿ ಮನವಿ ಸಲ್ಲಿಸಲಾಗಿದೆ. ಪ್ರಮುಖ ಮನವಿಯಲ್ಲಿ ನೂತನ ಕಾನೂನುಗಳು ಅಕ್ರಮ ಮತ್ತು ಸಂಪೂರ್ಣವಾಗಿ ಅಸಾಂವಿಧಾನಿಕವಾಗಿವೆ. ಹೊಸ ಕಾಯಿದೆಗಳು ಕೃಷಿಕ ಸಮುದಾಯದ ವಿರೋಧಿಯಾಗಿದ್ದು, ಕೋವಿಡ್‌ ಸಾಂಕ್ರಾಮಿಕತೆಯ ಹೊಡೆತಕ್ಕೆ ಸಿಲುಕಿ ನರಳುತ್ತಿರುವಾಗ ಬೃಹತ್‌ ಕಾರ್ಪೊರೇಟ್‌ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಏಕೈಕ ಉದ್ದೇಶ ಹೊಂದಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಎರಡು ಕಾಯಿದೆಗಳು ರಾಜ್ಯ ಪಟ್ಟಿಯಲ್ಲಿರುವಾಗ ಅವುಗಳಿಗೆ ಸಂಸತ್ತು ಅನುಮೋದನೆ ನೀಡಿರುವುದನ್ನು ಪ್ರಮುಖ ತಗಾದೆಯಾಗಿ ಅರ್ಜಿಯು ಎತ್ತಿದ್ದು, ಇದು ಒಕ್ಕೂಟ ವ್ಯವಸ್ಥೆಯ ತತ್ವಗಳು ಮತ್ತು ಸಂವಿಧಾನದ 246ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದೆ.

ಅಕ್ಟೋಬರ್‌ನಲ್ಲಿ ಮನವಿಗಳಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿದ್ದ ಪೀಠವು ನೋಟಿಸ್‌ ಜಾರಿಗೊಳಿಸಿದ್ದು, ಚಳಿಗಾಲದ ರಜಾ ಅವಧಿ ಮುಗಿದ ಬಳಿಕ ಅರ್ಜಿಯ ವಿಚಾರಣೆಗೆ ಸಮಯ ನಿಗದಿಪಡಿಸಲಾಗಿದೆ.