ಸುದ್ದಿಗಳು

ಸುಪ್ರೀಂಕೋರ್ಟ್ ರಚಿಸಿದ ಕೃಷಿ ಕಾನೂನು ಸಮಿತಿಯಿಂದ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ

Bar & Bench

ವಿವಾದಾತ್ಮಕ ಕೃಷಿ ಕಾನೂನುಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ರಚಿಸಿದ್ದ ಮೂವರು ಸದಸ್ಯರ ಸಮಿತಿ ತನ್ನ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮೂರು ತಿಂಗಳ ಕಾಲ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಿದ ನಂತರ ಶೇತ್‌ಕರಿ ಸಂಘಟನೆಯ ಅಧ್ಯಕ್ಷ ಅನಿಲ್‌ ಧನವಂತ್‌, ಕೃಷಿ ಅರ್ಥಶಾಸ್ತ್ರಜ್ಞ ಪ್ರಮೋದ್ ಕುಮಾರ್ ಜೋಶಿ ಮತ್ತು ಕೃಷಿಕ ಅಶೋಕ್ ಗುಲಾಟಿ ನೇತೃತ್ವದ ಮೂವರು ಸದಸ್ಯರ ಸಮಿತಿ ವರದಿ ಸಲ್ಲಿಸಿದೆ ಎನ್ನಲಾಗಿದೆ.

ವಿವಾದಾತ್ಮಕ ಕೃಷಿ ಕಾನೂನುಗಳ ಜಾರಿಗೆ ಈ ಹಿಂದೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ ತಡೆ ನೀಡಿತ್ತು. ಕಾಯಿದೆಗಳ ವಿರುದ್ಧ ರೈತರು ಅದರಲ್ಲಿಯೂ ಪಂಜಾಬ್‌ ಮತ್ತು ಹರಿಯಾಣದಿಂದ ಬಂದ ಕೃಷಿಕರು ಕಳೆದ ನವೆಂಬರ್‌ನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

2020ರ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯಿದೆ, 2020ರ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಕಾಯಿದೆ, 2020ರ ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆಗಳನ್ನು ಸುಪ್ರೀಂಕೋರ್ಟ್‌ ಮುಂದಿನ ಆದೇಶದವರೆಗೆ ತಡೆ ಹಿಡಿದಿತ್ತು.

ಸಮಿತಿಯ ಸದಸ್ಯರ ಅಭಿಪ್ರಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮನ್ ಅವರು ಸಮಿತಿಯ ಸದಸ್ಯತ್ವದಿಂದ ಈ ಹಿಂದೆ ಸರಿದಿದ್ದರು.