Justice Indrajit Mahanty 
ಸುದ್ದಿಗಳು

ಯಾವುದಾದರೂ ಸಂಗತಿ ಜನಪ್ರಿಯವಲ್ಲ ಎಂದರೆ ಅದನ್ನು ಹಿಂಪಡೆಯಿರಿ; ಅದುವೇ ನೈಜ ಮುತ್ಸದ್ದಿತನ: ತ್ರಿಪುರ ಸಿಜೆ

ಅಧಿಕಾರದಲ್ಲಿರುವವರು ಹೊಗಳಿಕೆ ಮತ್ತು ಟೀಕೆಗಳೆರಡನ್ನೂ ಸ್ವಿಕರಿಸಲು ಸಿದ್ದವಾಗಿರಬೇಕು. ಸಾರ್ವಜನಿಕ ಅಧಿಕಾರದರಲ್ಲಿರುವುದರ ಪರಿಣಾಮವೇ ಅದು.

Bar & Bench

ನೂತನ ಕೃಷಿ ಕಾಯಿದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ತ್ರಿಪುರ ಹೈಕೋರ್ಟ್‌ನಲ್ಲಿ ಇಂದು ಕೆಲವೊಂದು ಆಸಕ್ತಿಕರ ಅಂಶಗಳು ದಾಖಲಾದವು.

ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ತ್ರಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್‌ ಮಹಾಂತಿ ನೇತೃತ್ವದ ನ್ಯಾ. ಎಸ್‌ ತಲಪಾತ್ರ ಅವರನ್ನೊಳಗೊಂಡ ಪೀಠವು ಪ್ರಧಾನಿ ನರೇಂದ್ರ ಮೋದಿಯವರು ಮೂರು ನೂತನ ಕೃಷಿ ಕಾಯಿದೆಗಳನ್ನು ಹಿಂಪಡೆಯುವುದನ್ನು ಪ್ರಕಟಿಸಿದ್ದರ ಬಗ್ಗೆ ತನ್ನ ಅಭಿಪ್ರಾಯವನ್ನು ವಿಚಾರಣೆಯ ಸಂದರ್ಭದಲ್ಲಿ ದಾಖಲಿಸಿತು.

ಮೋದಿಯವರು ಗುರುನಾನಕ್‌ ಜಯಂತಿಯ ಸಂದರ್ಭದಲ್ಲಿ ಶುಭಾಶಯ ಕೋರಿ ದೇಶವನ್ನುದ್ದೇಶಿಸಿ ಮಾತನಾಡುತ್ತಾ ಕೃಷಿ ಕಾಯಿದೆಗಳನ್ನು ಹಿಂಪಡೆದಿರುವ ಬಗ್ಗೆ ಪ್ರಕಟಿಸಿದ ಕೆಲ ಹೊತ್ತಿನ ನಂತರ ನ್ಯಾಯಾಲಯದ ಕಲಾಪ ಆರಂಭವಾಗಿತ್ತು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಮಹಾಂತಿ ಅವರು, “ನಾನು ಪ್ರಧಾನಿ ಮೋದಿಯವರನ್ನು ಹೊಗಳುತ್ತಿಲ್ಲ. ಆದರೆ, ಇದು ನಿಜವಾದ ಮುತ್ಸದ್ದಿತನ. ಯಾವುದಾದರೂ ಒಂದು ಸಂಗತಿ ಜನಪ್ರಿಯವಲ್ಲ ಎಂದರೆ ಅದನ್ನು ಹಿಂಪಡೆಯಬೇಕು. ಯಾವುದೇ ಪ್ರಧಾನಿ ಈವರೆಗೆ ಕ್ಷಮೆ ಕೋರಿದ್ದನ್ನು ನೀವು ಕೇಳಿದ್ದೀರಾ?” ಎಂದರು.

ಮುಂದುವರೆದು ಅವರು, “ನೀವು ಅಧಿಕಾರದಲ್ಲಿದ್ದಾಗ ಎರಡನ್ನೂ ಸ್ವೀಕರಿಸಲು (ಹೊಗಳಿಕೆ, ಟೀಕೆ) ಸಿದ್ಧರಿರಬೇಕು. ಅದುವೇ ಸಾರ್ವಜನಿಕ ಅಧಿಕಾರದಲ್ಲಿರುವುದರ ಪರಿಣಾಮ. ನಾವು ವಿಮರ್ಶೆ, ಟೀಕೆಗಳೆರಡಕ್ಕೂ ಮುಕ್ತವಾಗಿರಬೇಕು. ನಾವು ವಿಮರ್ಶೆಯನ್ನು ಸ್ವೀಕರಿಸುವುದಿಲ್ಲ ಎನ್ನಲಾಗದು, ಏಕೆಂದರೆ ನಾವು ಸಾರ್ವಜನಿಕ ಅಧಿಕಾರದಲ್ಲಿರುತ್ತೇವೆ,” ಎಂದು ಅಭಿಪ್ರಾಯಪಟ್ಟರು.

ದೇಶಾದ್ಯಂತ ಕೃಷಿ ವಲಯದಲ್ಲಿ ತಲ್ಲಣಕ್ಕೆ ಕಾರಣವಾಗಿದ್ದ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಲು ಸೂಕ್ತ ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಮಾಸಾಂತ್ಯದಲ್ಲಿ ಆರಂಭವಾಗಲಿರುವ ಸಂಸತ್‌ ಅಧಿವೇಶನಲ್ಲಿ ಚಾಲನೆ ನೀಡಲಾಗುವುದು ಎಂದು ಪ್ರಧಾನಿ ಮೋದಿಯವರು ಶುಕ್ರವಾರ ಬೆಳಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ವೇಳೆ ಘೋಷಿಸಿದ್ದರು.