ರೈತರು ಕೃಷಿ ತ್ಯಾಜ್ಯ ಸುಡುವ ಚಟುವಟಿಕೆಗಳಲ್ಲಿ ತೊಡಗದಂತೆ ತಡೆಯಲು ಬಂಧನ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ [ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ಮಾಲಿನ್ಯ ನಿಯಂತ್ರಣ ಸಮಿತಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಸಂಬಂಧ ದಾಖಲಿಸಿಕೊಳ್ಳಲಾದ ಸ್ವಯಂಪ್ರೇರಿತ ಮೊಕದ್ದಮೆ].
ರೈತರು ದೇಶಕ್ಕೆ ಮಹತ್ವದ ವ್ಯಕ್ತಿಗಳಾದರೂ, ಅವರು ಕೃಷಿ ತ್ಯಾಜ್ಯ ಸುಡುವುದನ್ನು ಮನಸೋಇಚ್ಛೆಯಾಗಿ ಮುಂದುವರಿಸಲು ಅವಕಾಶ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಹೇಳಿದರು. ಇಂತಹ ಮಾಲಿನ್ಯಕಾರಕ ಚಟುವಟಿಕೆ ತಡೆಯಲು ಕಠಿಣ ಕ್ರಮ ಜರುಗಿಸಬಹುದು ಎಂದು ಅವರು ಸಲಹೆ ನೀಡಿದರು.
"ರೈತರಿಗೆ ದಂಡ ವಿಧಿಸಲು ಅಧಿಕಾರಿಗಳು ಯಾಕೆ ಯೋಚಿಸಬಾರದು. ಕೆಲವರು ಜೈಲಿಗೆ ಹೋದರೆ ಸೂಕ್ತ ಸಂದೇಶ ರವಾನೆಯಾಗುತ್ತದೆ. ಪರಿಸರ ರಕ್ಷಿಸುವ ನಿಜವಾದ ಉದ್ದೇಶ ನಿಮಗಿದ್ದರೆ, ಹಿಂಜರಿಯುವುದು ಏಕೆ? ಕೃಷಿ ತ್ಯಾಜ್ಯವನ್ನು ಜೈವಿಕ ಇಂಧನವಾಗಿಯೂ ಬಳಸಬಹುದು ಎಂದು ಪತ್ರಿಕೆಗಳಲ್ಲಿ ಓದಿದ್ದೆ. ಐದು ವರ್ಷಗಳ ಯೋಜನೆಯಾಗಬಾರದು. ರೈತರು ವಿಶೇಷ ಸಮುದಾಯ. ಅವರಿಂದಾಗಿಯೇ ನಾವು ಆಹಾರ ತಿನ್ನುತ್ತಿದ್ದೇವೆ. ಆದರೆ ಇದರರ್ಥ ನಾವು ಪರಿಸರ ರಕ್ಷಿಸಬಾರದು ಎಂದಲ್ಲ" ಎಂದು ಸಿಜೆಐ ವಿವರಿಸಿದರು.
ಗೋಧಿ ಮತ್ತು ಭತ್ತದಂತಹ ಧಾನ್ಯಗಳನ್ನು ಕೊಯ್ಲು ಮಾಡಿದ ನಂತರ ಹೊಲಗಳಲ್ಲಿ ಉಳಿಯುವ ಒಣಹುಲ್ಲಿನ ಕಡ್ಡಿಗಳನ್ನು (ಕೂಳೆ) ದಹಿಸುವುದು ಕೃಷಿ ತ್ಯಾಜ್ಯವನ್ನು ಸುಲಭವಾಗಿ ಮತ್ತು ಅಗ್ಗವಾಗಿ ವಿಲೇವಾರಿ ಮಾಡುವ ವಿಧಾನವಾದರೂ ಅದು ಗಾಳಿಯ ಗುಣಮಟ್ಟದ ತೀವ್ರ ಕುಸಿತಕ್ಕೆ ಕಾರಣವಾಗುತ್ತದೆ.
ರೈತರು ವಿಶೇಷ ವ್ಯಕ್ತಿಗಳು. ಅವರಿಂದಾಗಿ ನಾವು ಆಹಾರ ತಿನ್ನುತ್ತಿದ್ದೇವೆ. ಆದರೆ, ಇದರರ್ಥ ನಾವು ಪರಿಸರ ರಕ್ಷಿಸಬಾರದು ಎಂದಲ್ಲ.ಸುಪ್ರೀಂ ಕೋರ್ಟ್
ಪಂಜಾಬ್, ಹರಿಯಾಣ ಮತ್ತು ದೆಹಲಿಯಂತಹ ಪ್ರದೇಶಗಳಲ್ಲಿ ವಾಯು ಮಾಲಿನ್ಯಕ್ಕೆ ಇಂತಹ ಚಟುವಟಿಕೆಗಳು ಗಣನೀಯ ಕೊಡುಗೆ ನೀಡುತ್ತವೆ ಎಂದು ಸುಪ್ರೀಂ ಕೋರ್ಟ್ಈ ಹಿಂದೆ ಗಂಭೀರ ಕಳವಳ ವ್ಯಕ್ತಪಡಿಸಿತ್ತು.
ಅಕ್ಟೋಬರ್ 2024 ರಲ್ಲಿ, ಕೃಷಿ ತ್ಯಾಜ್ಯ ಸುಡುವುದರ ವಿರುದ್ಧ ಸರಿಯಾದ ಕಾನೂನು ಕ್ರಮ ಕೈಗೊಳ್ಳದಿರುವ ಬಗ್ಗೆ ತೀವ್ರ ಅಸಮ್ಮತಿ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿ ಮಾಡಿತ್ತು.
ಕೇಂದ್ರ ಸರ್ಕಾರವು ಕೃಷಿ ತ್ಯಾಜ್ಯ ಸುಡುವುದನ್ನು ತಡೆಯಲು ದಂಡ ವಿಧಿಸುವಂತಹ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದಿದ್ದ ಅದು ಕೃಷಿ ತ್ಯಾಜ್ಯ ಸುಡುವುದರ ವಿರುದ್ಧದ ದಂಡವನ್ನು ಹೆಚ್ಚಿಸಲು ಕಾನೂನನ್ನು ತಿದ್ದುಪಡಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅಂದಿನಿಂದ, ದಂಡದ ಮೊತ್ತ ಹೆಚ್ಚಿಸಲಾಗಿತ್ತು.
ಇಂದಿನ ವಿಚಾರಣೆ ವೇಳೆ ಪಂಜಾಬ್ ಸರ್ಕಾರದ ಪರವಾಗಿ ಹಿರಿಯ ವಕೀಲ ರಾಹುಲ್ ಮೆಹ್ತಾ, ಪ್ರಕರಣದ ಅಮಿಕಸ್ ಕ್ಯೂರಿ ಅಪರಾಜಿತಾ ಸಿಂಗ್ ವಾದ ಮಂಡಿಸಿದರು.
ಕೆಲವರು ಜೈಲಿಗೆ ಹೋದರೆ ಸೂಕ್ತ ಸಂದೇಶ ರವಾನೆಯಾಗುತ್ತದೆ. ಸದಾಕಾಲ ಅಲ್ಲ, ಬದಲಾಗಿ ಸಂದೇಶ ರವಾನಿಸುವುದಕ್ಕಾಗಿ ಜೈಲಿಗೆ ಕಳಿಸಬೇಕಿದೆ.ಸುಪ್ರೀಂ ಕೋರ್ಟ್
ರಾಷ್ಟ್ರ ರಾಜಧಾನಿ ಪ್ರದೇಶದ (ಎನ್‌ಸಿಆರ್) ಸುತ್ತಲಿನ ರಾಜ್ಯಗಳು ತಮ್ಮ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ಸಮಿತಿಗಳಿಗೆ ನೇಮಕಾತಿ ಪೂರ್ಣಗೊಳಿಸಲು ನಿರ್ದೇಶನ ಪಾಲಿಸುವಲ್ಲಿ ವಿಫಲವಾದ ಬಗ್ಗೆ ಈ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್ ಹೂಡಿದ್ದ ಸ್ವಯಂಪ್ರೇರಿತ ಮೊಕದ್ದಮೆಯ ವಿಚಾರಣೆ ವೇಳೆ ಕೃಷಿ ತ್ಯಾಜ್ಯದ ವಿಚಾರ ಪ್ರಸ್ತಾಪವಾಯಿತು.
ಕೆಲ ಸ್ಥಿತಿಗತಿ ವರದಿಗಳನ್ನು ಸಲ್ಲಿಸಿದ ನಂತರ ಮುಂದಿನ ವಾರ ಪ್ರಕರಣ ಕೈಗೆತ್ತಿಕೊಳ್ಳುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ನ್ಯಾಯಾಲಯವನ್ನು ಕೋರಿದರು. ನಂತರ ಪ್ರಕರಣವನ್ನು ಮುಂದೂಡಲಾಯಿತು .