ರೈತರ ಪ್ರತಿಭಟನೆ, ದೆಹಲಿ-ಹರಿಯಾಣ ಗಡಿ, ಗಾಜಿಪುರ
ರೈತರ ಪ್ರತಿಭಟನೆ, ದೆಹಲಿ-ಹರಿಯಾಣ ಗಡಿ, ಗಾಜಿಪುರ 
ಸುದ್ದಿಗಳು

ರೈತರ ಪ್ರತಿಭಟನೆ: ಕೇಂದ್ರ, ಪಂಜಾಬ್, ಹರಿಯಾಣ, ದೆಹಲಿ ಸರ್ಕಾರಗಳಿಗೆ ಪಂಜಾಬ್ ಹೈಕೋರ್ಟ್ ನೋಟಿಸ್

Bar & Bench

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನಾ ಮೆರವಣಿಗೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ಕೇಂದ್ರ, ಪಂಜಾಬ್, ಹರಿಯಾಣ ಹಾಗೂ ದೆಹಲಿ ಸರ್ಕಾರಗಳಿಗೆ ನೋಟಿಸ್ ನೀಡಿದೆ.

ಕೇಂದ್ರ, ರಾಜ್ಯ ಸರ್ಕಾರಗಳು ಸೇರಿದಂತೆ ಪಕ್ಷಕಾರರು ಪ್ರಕರಣದ ಸ್ಥಿತಿಗತಿ ವರದಿ ಸಲ್ಲಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗುರ್ಮೀತ್ ಸಿಂಗ್ ಸಂಧಾವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ ಅವರಿದ್ದ ಪೀಠ ಸೂಚಿಸಿದೆ.

ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ಸಲಹೆ ನೀಡಿದ ಪೀಠ ರೈತರು ಪ್ರತಿಭಟನೆ ನಡೆಸಲು ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸುವಂತೆ ಸೂಚಿಸಿತು. ಪ್ರಕರಣದಲ್ಲಿ ದೆಹಲಿ ಸರ್ಕಾರವನ್ನು ಪಕ್ಷಕಾರನನ್ನಾಗಿ ಸೇರಿಸುವುದು ಅಗತ್ಯ ಎಂದು ಕೂಡ ನ್ಯಾಯಾಲಯ ತಿಳಿಸಿತು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜಿ.ಎಸ್.ಸಂಧಾವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾಯಿದೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ರೈತರು ದೆಹಲಿಯತ್ತ ಹೆಜ್ಜೆ ಇರಿಸಿದ್ದಾರೆ.

ಪ್ರತಿಭಟನಾ ನಿರತ ರೈತರು ದೆಹಲಿಗೆ ತೆರಳುವುದನ್ನು ನಿರ್ಬಂಧಿಸಲು ಹರಿಯಾಣದ ವಿವಿಧ ಭಾಗಗಳಲ್ಲಿ, ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

ಪ್ರತಿಭಟನೆಗೆ ಸಂಬಂಧಿಸಿದಂತೆ ಇತ್ತ ಹೈಕೋರ್ಟ್‌ನಲ್ಲಿ ಸೋಮವಾರ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಒಂದು ಅರ್ಜಿ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರೆ. ಮತ್ತೊಂದು ಅರ್ಜಿ ಗಡಿ ಬಂದ್‌, ಅಂತರ್ಜಾಲ ಸ್ಥಗಿತ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿತ್ತು.

ಗಡಿ ಬಂದ್‌, ಅಂತರ್ಜಾಲ ಸ್ಥಗಿತ ಪ್ರಶ್ನಿಸಿದ್ದ ಪಂಚಕುಲದ ನಿವಾಸಿ ಮತ್ತು ಹೈಕೋರ್ಟ್‌ ವಕೀಲ ಉದಯ್ ಪ್ರತಾಪ್ ಸಿಂಗ್ ಅವರು ಹರಿಯಾಣ ಮತ್ತು ಪಂಜಾಬ್ ನಡುವಿನ ಗಡಿಯನ್ನು ಅದರಲ್ಲಿಯೂ ಅಂಬಾಲಾ ಬಳಿಯ ಶಂಭು ಪ್ರದೇಶದಲ್ಲಿ ಮುಚ್ಚುವುದು ಕಾನೂನುಬಾಹಿರ ಎಂದಿದ್ದರು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾಯಿದೆ ಜಾರಿ ಸೇರಿದಂತೆ ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 13ರಂದು ವಿವಿಧ ರೈತ ಸಂಘಗಳು ಆಯೋಜಿಸಿದ್ದ 'ದೆಹಲಿ ಚಲೋ' ಮೆರವಣಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಅವರ ಪ್ರಜಾಪ್ರಭುತ್ವದತ್ತ ಹಕ್ಕಿನ ಅಭಿವ್ಯಕ್ತಿ ಎಂದಿದ್ದರು.

ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸ್ಸಾರ್‌, ಫತೇಹಾಬಾದ್ ಮತ್ತು ಸಿರ್ಸಾದಂತಹ ಹಲವಾರು ಜಿಲ್ಲೆಗಳಲ್ಲಿ ಮೊಬೈಲ್ ಅಂತರ್ಜಾಲ ಸೇವೆಗಳು ಮತ್ತು ವಿಪುಲ ಎಸ್ಎಂಎಸ್ ಸ್ಥಗಿತಗೊಳಿಸಿರುವ ಹರಿಯಾಣ ಅಧಿಕಾರಿಗಳ ಕ್ರಮ ಕಳವಳಕಾರಿ ಎಂಬುದಾಗಿ ತಿಳಿಸಿದ್ದ ಅವರು ಇಂತಹ ಕ್ರಮಗಳು ನಾಗರಿಕರ ಮಾಹಿತಿ ಮತ್ತು ಸಂವಹನದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ, ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ಅರವಿಂದ್ ಸೇಠ್ ಅವರು ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರಿಯಾಣದಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದಕ್ಕಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.