Farmer protest yahoo news
ಸುದ್ದಿಗಳು

ರೈತರಿಗೆ ಪ್ರತಿಭಟಿಸುವ ಹಕ್ಕಿದೆ ಆದರೆ ರಸ್ತೆ ನಿರ್ಬಂಧ ಕೂಡದು: ಪರಿಹಾರ ಕಂಡುಕೊಳ್ಳಲು ಸರ್ಕಾರಗಳಿಗೆ ಸುಪ್ರೀಂ ಸೂಚನೆ

ಪ್ರತಿಭಟನಾ ನಿರತ ರೈತರ ರಸ್ತೆ ತಡೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ನೋಯ್ಡಾ ನಿವಾಸಿಯೊಬ್ಬರು ಪರಿಹಾರ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಆಲಿಸಿತು.

Bar & Bench

ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ದೆಹಲಿಯ ರಸ್ತೆಗಳನ್ನು ನಿರ್ಬಂಧಿಸಿದ ರೈತರ ವಿರುದ್ಧ ಸುಪ್ರೀಂಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ. ರೈತರಿಗೆ ಪ್ರತಿಭಟನೆ ಮಾಡುವ ಹಕ್ಕು ಇದ್ದರೂ, ಅವರು ರಸ್ತೆಗಳನ್ನು ಅನಿರ್ದಿಷ್ಟ ಕಾಲ ನಿರ್ಬಂಧಿಸುವಂತಿಲ್ಲ ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ. ಹಾಗಾಗಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಪ್ರತಿಭಟನಾ ನಿರತ ರೈತರ ರಸ್ತೆ ತಡೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ನೋಯ್ಡಾ ನಿವಾಸಿಯೊಬ್ಬರು ಪರಿಹಾರ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಆಲಿಸಿತು. ʼಸಾರ್ವಜನಿಕ ರಸ್ತೆಗಳನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿದ್ದರೂ, ಅವುಗಳನ್ನು ಪಾಲಿಸಿಲ್ಲ. ತಾವು ವೈದ್ಯಕೀಯ ಸಮಸ್ಯೆಗಳಿರುವ ಏಕ ಪೋಷಕ ತಾಯಿಯಾಗಿದ್ದು, ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸುವುದು ದುಃಸ್ವಪ್ನವಾಗಿದೆʼ ಎಂದು ಅರ್ಜಿದಾರರಾದ ಮೋನಿಕಾ ಅಗರ್‌ವಾಲ್‌ ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಸರ್ಕಾರ ಸುಗಮ ಸಂಚಾರಕ್ಕಾಗಿ ಸ್ಥಳ ತೆರವುಗೊಳಿಸಲು ರೈತರನ್ನು ವಿನಂತಿಸಲಾಗುತ್ತಿದೆ. ಸುಪ್ರೀಂಕೋರ್ಟ್‌ನ ಹಿಂದಿನ ತೀರ್ಪುಗಳ ಪ್ರಕಾರ ಕಾನೂನು ಬಾಹಿರವಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗದು ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದೆ. ಸಮಸ್ಯೆ ಪರಿಶೀಲಿಸಲು ಮತ್ತು ಪರಿಹಾರದೊಂದಿಗೆ ವರದಿ ಸಲ್ಲಿಸಲು ನ್ಯಾಯಾಲಯ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸಮಯ ನೀಡಿದೆ.