Farmer protest IANS
ಸುದ್ದಿಗಳು

[ರೈತರ ಪ್ರತಿಭಟನೆ] ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಲು ರೈತರ ದೆಹಲಿ ಪ್ರವೇಶದ ಬಗ್ಗೆ ನಿರ್ಧರಿಸುವುದಿಲ್ಲ ಎಂದ ಸುಪ್ರೀಂ

ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರು ಇಂದು ಲಭ್ಯವಿಲ್ಲದೇ ಇರುವುದರಿಂದ ಪ್ರಕರಣದ ವಿಚಾರಣೆ ನಡೆಸುವುದಿಲ್ಲ ಎಂದು ಸಿಜೆಐ ಎಸ್‌ ಎ ಬೊಬ್ಡೆ ನೇತೃತ್ವದ ಪೀಠವು ವಿಚಾರಣೆ ಮುಂದೂಡಿತು.

Bar & Bench

ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಟ್ರ್ಯಾಕ್ಟರ್‌ ರ‍್ಯಾಲಿಗೆ ರೈತರಿಗೆ ಪ್ರವೇಶ ಕಲ್ಪಿಸಬೇಕೆ ಅಥವಾ ಬೇಡವೇ ಎಂಬ ವಿಚಾರವನ್ನು ತಾನು ನಿರ್ಧರಿಸುವುದಿಲ್ಲ ಎಂದು ಸೋಮವಾರ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.

ರೈತರು ದೆಹಲಿಗೆ ಪ್ರವೇಶಿಸಬೇಕೆ ಅಥವಾ ಬೇಡವೇ ಎಂಬ ವಿಚಾರದಲ್ಲಿ ತಾನು ಪ್ರಥಮ ಪ್ರಾಧಿಕಾರವಾಗಿ ಕರ್ತವ್ಯನಿರ್ವಹಿಸಲಾಗದು ಎಂದಿರುವ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿದ್ದ ಪೀಠವು ಅದು ದೆಹಲಿ ಪೊಲೀಸರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದಿದೆ.

“ಈ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶಿಸಿದರೆ ಅದನ್ನು ತಪ್ಪಾಗಿ ಭಾವಿಸುವ ಸಾಧ್ಯತೆ ದಟ್ಟವಾಗಿದೆ. ಯಾರು ನಗರಕ್ಕೆ ಬರುತ್ತಾರೆ, ಯಾರಿಗೆ ನಗರಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತಾರೆ ಎಂಬ ವಿಚಾರದ ಮೇಲೆ ನಾವು ಗಮನ ಇಡುವುದಿಲ್ಲ. ನಿಮ್ಮೆಲ್ಲಾ ಅಧಿಕಾರವನ್ನು ಪ್ರಯೋಗಿಸಿ ರೈತರು ನಗರಕ್ಕೆ ಪ್ರವೇಶಿಸಬಹುದೇ ಎಂಬುದನ್ನು ಪರಿಶೀಲಿಸಿ. ನಗರಕ್ಕೆ ಯಾರಿಗೆ ಪ್ರವೇಶ ಕಲ್ಪಿಸಬಹುದು ಮತ್ತು ಯಾರಿಗೆ ಪ್ರವೇಶಕ್ಕೆ ಅನುಮತಿಸಬಾರದು ಎಂಬ ವಿಚಾರ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದು, ಅದು ಪೊಲೀಸರಿಗೆ ಸೇರಿದ ವಿಚಾರವಾಗಿದೆ. ಈ ವಿಚಾರದಲ್ಲಿ ನಾವು ಪ್ರಥಮ ಪ್ರಾಧಿಕಾರವಾಗಿ ಕೆಲಸ ಮಾಡಲಾಗದು” ಎಂದು ಪೀಠ ಹೇಳಿದೆ.

ಸದ್ಯದ ಪರಿಸ್ಥಿತಿ ಅಸಾಧಾರಣವಾದುದು ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಪೀಠಕ್ಕೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಬೊಬ್ಡೆ ಅವರು “ನಿಮಗೆ ಯಾವ ಅಧಿಕಾರವಿದೆ ಎಂಬುದನ್ನು ನೀವು ನಮ್ಮಿಂದೇಕೆ ಕೇಳಬಯಸುತ್ತೀರಿ? ಪೊಲೀಸ್‌ ಕಾಯಿದೆಯ ಅನ್ವಯ ಭಾರತ ಸರ್ಕಾರಕ್ಕೆ ಯಾವ ಅಧಿಕಾರಗಳಿವೆ ಎಂದು ಸುಪ್ರೀಂ ಕೋರ್ಟ್‌ ಹೇಳಬೇಕೆ” ಎಂದರು.

ಈ ಪ್ರಕರಣದ ವಿಚಾರಣೆಯನ್ನು ಹಿಂದೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರನ್ನೊಳಗೊಂಡಿದ್ದ ಪೀಠವು ಇಂದು ಲಭ್ಯವಿಲ್ಲದೇ ಇರುವುದರಿಂದ ಸದರಿ ಪ್ರಕರದ ವಿಚಾರಣೆ ನಡೆಸುವುದಿಲ್ಲ ಎಂದು ಸಿಜೆಐ ಹಾಗೂ ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ್‌ ರಾವ್‌ ಮತ್ತು ವಿನೀತ್‌ ಶರಣ್‌ ಅವರಿದ್ದ ಪೀಠವು ಹೇಳಿದ್ದು, ಬುಧವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.

ದೆಹಲಿಗೆ ರೈತರ ಪ್ರವೇಶಕ್ಕೆ ಸಂಬಂಧಿಸಿದ ವಿಚಾರದ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ದೆಹಲಿ ಪೊಲೀಸರಿಗೆ ಇರುವುದರಿಂದ ನ್ಯಾಯಾಲಯ ಯಾವುದೇ ಆದೇಶ ಹೊರಡಿಸುವುದಿಲ್ಲ ಎಂದು ಸಿಜೆಐ ಬೊಬ್ಡೆ ಅವರು ವೇಣುಗೋಪಾಲ್‌ ಅವರಿಗೆ ವಿವರಿಸಿದರು.

ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ವ್ಯಕ್ತಪಡಿಸಿ ಈಚೆಗೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ವಿವಾದಿತ ಕೃಷಿ ಕಾಯಿದೆಗಳ ಜಾರಿಗೆ ಮಧ್ಯಂತರ ತಡೆ ವಿಧಿಸಿತ್ತು.