ಜೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಂದೆ ಅಸಾರಾಮ್ ಬಾಪು ಅವರನ್ನು ಭೇಟಿ ಮಾಡಲು ತಾತ್ಕಾಲಿಕ ಜಾಮೀನು ನೀಡುವಂತೆ ಸ್ವಯಂ ಘೋಷಿತ ದೇವಮಾನವ ನಾರಾಯಣ್ ಸಾಯಿ ಶುಕ್ರವಾರ ಗುಜರಾತ್ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ಸಾಯಿ ಮತ್ತು ಅಸಾರಾಮ್ ಬಾಪು ಇಬ್ಬರೂ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಪ್ರಸ್ತುತ ಸೆರೆವಾಸ ಅನುಭವಿಸುತ್ತಿದ್ದಾರೆ.
ಆದರೆ ತಮ್ಮ ತಂದೆಯ ಕುರಿತು ಸಾಯಿ ಅವರು ಹೇಳಿರುವ ಮಾತನ್ನು ಮೊದಲು ಪರಿಶೀಲಿಸಬೇಕಾಗುತ್ತದೆ ಏಕೆಂದರೆ ತಾನು ಅವರನ್ನು ನಂಬುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಸುಪೇಹಿಯಾ ಮತ್ತು ವಿಮಲ್ ವ್ಯಾಸ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಅಸಾರಾಂ ಬಾಪು ಅವರು ಜೋಧಪುರದ ಏಮ್ಸ್ ವೈದ್ಯಕೀಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾಯಿ ಅವರು ಅಲ್ಲಿ ಏನು ಮಾಡುತ್ತಾರೆ ಎಂದು ಸಾಯಿ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಐ.ಎಚ್ ಸೈಯದ್ ಅವರನ್ನು ನ್ಯಾಯಮೂರ್ತಿ ಸುಪೇಹಿಯಾ ಪ್ರಶ್ನಿಸಿದರು.
ಅಸಾರಾಂ ಅವರಿಗೆ ಚಿಕಿತ್ಸೆ ನೀಡುತ್ತಿರುವ ಕುರಿತು ವೈದ್ಯರ ಪ್ರಮಾಣಪತ್ರವಿದೆ ಎಂದು ಸೈಯದ್ ಅವರು ತಿಳಿಸಿದರು. ಅದಕ್ಕೆ ತೃಪ್ತವಾಗದ ನ್ಯಾಯಮೂರ್ತಿಯವರು "ದಾಖಲೆಗಳನ್ನು ನಾವು ಪರಿಶೀಲಿಸಬೇಕಾಉತ್ತದೆ ಏಕೆಂದರೆ ಸಾಯಿ ಅವರ ಹಿನ್ನೆಲೆ ಗಮನಿಸಿದರೆ ಅವರನ್ನು ನಂಬಲಾಗದು" ಎಂದು ಆಕ್ಷೇಪಿಸಿದರು.
ವಿಶೇಷ ಎಂದರೆ, ಈ ಹಿಂದೆ ವೈದ್ಯಕೀಯ ಆಧಾರದಲ್ಲಿ ಜಾಮೀನು ಕೋರುವಾಗ ಹೈಕೋರ್ಟ್‌ಗೆ ನಕಲಿ ದಾಖಲೆ ಸಲ್ಲಿಸಿದ್ದಕ್ಕಾಗಿ ಸಾಯಿ ಅವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದನ್ನು ಗಮನಿಸಿ ಫೆಬ್ರವರಿ 3 ರಂದು ಸಾಯಿ ಅವರ ಇದೇ ರೀತಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಸಾಯಿ ಅವರ ತಂದೆ ಅಸಾರಾಮ್ ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದ್ದನ್ನು ಕೂಡ ನ್ಯಾಯಪೀಠ ಶುಕ್ರವಾರ ಗಮನಿಸಿತು. ಪೆರೋಲ್ ಕೋರಿ ಅಸಾರಂ ಅವರು ನೀಡಿದ ಕಾರಣಗಳು, ಹಾಗೆಯೇ ಪೆರೋಲ್ ನಿರಾಕರಿಸಿ ರಾಜಸ್ಥಾನ ಹೈಕೋರ್ಟ್ ನೀಡಿದ ಕಾರಣಗಳನ್ನು ಪರಿಶೀಲಿಸಬೇಕಿದೆ ಎಂದು ನ್ಯಾಯಾಲಯ ತಿಳಿಸಿತು.
"ಅಸಾರಾಂ ಗಂಭೀರ ಸ್ಥಿತಿಯಲ್ಲಿದ್ದು ಒಮ್ಮೆಯಾದರೂ ಕಾವಲು ಪಡೆಯ ಜೊತೆಯಲ್ಲಿದ್ದೇ ತಮ್ಮ ಸ್ವಂತ ಖರ್ಚಿನಲ್ಲಿ ಸಾಯಿ ಅವರು ತಮ್ಮ ತಂದೆಯನ್ನು ಕಾಣಲು ಅವಕಾಶ ಮಾಡಿಕೊಡಬೇಕೆಂದು" ಸೈಯದ್ ಪ್ರತಿಕ್ರಿಯಿಸಿದರು.
ಆದರೆ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ತನಗೆ ದಾಖಲೆಯಲ್ಲಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತು. ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಯಲಿದೆ.