Justice R Basant 
ಸುದ್ದಿಗಳು

ಮಾಧ್ಯಮ ಭೀತಿಯಿಂದ ನ್ಯಾಯಾಧೀಶರ ಕಾರ್ಯಕ್ಷಮತೆಯ ಮೇಲೆ ಪರಿಣಾಮ: ನ್ಯಾ. ಬಸಂತ್

ಈಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ, ಕನ್ನಡಿಗ ಎಸ್ ರವೀಂದ್ರ ಭಟ್ ಅವರ ಗೌರವಾರ್ಥ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ 'ನ್ಯಾಯ ಕುರಿತ ಸಂವಾದʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Bar & Bench

ಇಂದಿನ ದಿನಗಳಲ್ಲಿ ಕಾಣುತ್ತಿರುವ ಮಾಧ್ಯಮ ಭೀತಿ ನ್ಯಾಯಾಧೀಶರ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹಿರಿಯ ವಕೀಲ ಮತ್ತು ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ಬಸಂತ್ ಇತ್ತೀಚೆಗೆ ಹೇಳಿದ್ದಾರೆ.

ನಿರ್ಭೀತ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವುದಾಗಿ ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕರಿಸುವುದನ್ನು ಉಲ್ಲೇಖಿಸಿದ ನ್ಯಾ. ಬಸಂತ್‌ ಮಾಧ್ಯಮಗಳ ಭಯ ನ್ಯಾಯ ನಿರ್ಣಾಯಕಾರರ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು.

ಮಾಧ್ಯಮಗಳಲ್ಲಿ ದೊರೆಯುತ್ತಿರುವ ಪ್ರಚಾರ ಪ್ರತಿಯೊಬ್ಬ ನ್ಯಾಯಾಧೀಶರಿಗೂ ಔದ್ಯೋಗಿಕ ಗಂಡಾಂತರವಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಪ್ರಾಕ್ಟೀಸ್‌ ಮಾಡುತ್ತಿರುವ ನ್ಯಾ. ಬಸಂತ್‌ ಅವರು ಪ್ರಕರಣದ ತೀರ್ಪು ಪ್ರಕಟವಾಗುವ ಮೊದಲೇ ಟಿವಿ ವಾಹಿನಿಗಳು ಕಾನೂನು ವಿಷಯವಾಗಿ ಚರ್ಚೆ ಆರಂಭಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.

 “ಇದೀಗ ತೀರ್ಪು ಹೊರಬಿದ್ದಿದ್ದರೆ ಆ ಸಮಯದಲ್ಲೇ ನ್ಯಾಯಾಲಯದ ಹೊರಗೆ ಮಾಧ್ಯಮಗಳು ಅದರ ಬಗ್ಗೆ ಚರ್ಚೆ ಆರಂಭಿಸಿರುತ್ತಾರೆ. ಇದು ಔದ್ಯೋಗಿಕ ಗಂಡಾಂತರ” ಎಂದು ಅವರು ತಿಳಿಸಿದರು.

ಈಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ, ಕನ್ನಡಿಗ ಎಸ್‌ ರವೀಂದ್ರ ಭಟ್ ಅವರ ಗೌರವಾರ್ಥ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಅವರ ಕುಟುಂಬಸ್ಥರು, ಸ್ನೇಹಿತರು, ಹಾಲಿ ಹಾಗೂ ನಿವೃತ್ತ ವಕೀಲ ಗುಮಾಸ್ತರು ಹಮ್ಮಿಕೊಂಡಿದ್ದ 'ನ್ಯಾಯ ಕುರಿತ ಸಂವಾದʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ, ಯು ಯು ಲಲಿತ್‌, ಎಸ್ ಮುರಳೀಧರ್, ಬದರ್ ಅಹ್ಮದ್, ಆರ್ ಬಸಂತ್, ಹಿರಿಯ ವಕೀಲ ರಾಜು ರಾಮಚಂದ್ರನ್ ಹಾಗೂ ವಕೀಲೆ ಮಾಳವಿಕಾ ಪ್ರಸಾದ್ ಅವರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.