Justice M Nagaprasanna and Karnataka HC 
ಸುದ್ದಿಗಳು

ಹೆಣ್ಣು ಭ್ರೂಣ ಹತ್ಯೆ ಶಾಸನಬದ್ಧ ಅಪರಾಧವಲ್ಲ ಮಾತ್ರವಲ್ಲ, ಅದೊಂದು ನೈತಿಕ ಕಳಂಕ, ಸಾಂವಿಧಾನಿಕ ಅವಮಾನ: ಹೈಕೋರ್ಟ್‌

“ವೈದ್ಯಕೀಯ ಪರಿಣತಿಯ ಸೋಗಿನಲ್ಲಿ ಲಿಂಗ ತಾರತಮ್ಯದ ವ್ಯಾಪಾರ ಮಾಡುವವರು ಸಮಾಜಕ್ಕೆ ಅಪಾಯ ಉಂಟು ಮಾಡಬಲ್ಲರು. ಇಂತಹ ಗಂಭೀರ ಪ್ರಕರಣಗಳಲ್ಲಿ ಆರಂಭದಲ್ಲೇ ಕೋರ್ಟ್‌ ಸಡಿಲಿಕೆಗೆ ಅವಕಾಶ ನೀಡಿದರೆ ಕಾನೂನೇ ಅರ್ಥ ಹೀನವಾಗುತ್ತದೆ” ಎಂದಿರುವ ನ್ಯಾಯಾಲಯ.

Bar & Bench

“ಹೆಣ್ಣು ಭ್ರೂಣ ಹತ್ಯೆ ಕೇವಲ ಶಾಸನಬದ್ಧ ಅಪರಾಧವಲ್ಲ. ಅದೊಂದು ನೈತಿಕ ಕಳಂಕ ಮತ್ತು ಸಾಂವಿಧಾನಿಕ ಅವಮಾನ” ಎಂದು ಸ್ಪಂದನಶೀಲ ಶಬ್ದಗಳ ಮೂಲಕ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ಕಾನೂನುಬಾಹಿರವಾಗಿ ಭ್ರೂಣ ಲಿಂಗ ಪತ್ತೆ ನಿರ್ಧರಿಸುವ ಉದ್ದೇಶಕ್ಕಾಗಿ ಪೋಷಕರನ್ನು ಕರೆತರಲು ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸಿದ ಇಬ್ಬರು ಆರೋಪಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಲು ನಿರಾಕರಿಸಿದೆ.

ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿ ಚನ್ನಪಟ್ಟಣ ತಾಲ್ಲೂಕು ಮಾಲೂರಿನ ಶಾರದಮ್ಮ ಹಾಗೂ ಇವರ ಪತಿ ದಾಸೇಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.

“ಪ್ರಸ್ತುತ ಪ್ರಕರಣದಲ್ಲಿ ಕಂಡುಬರುತ್ತಿರುವ ಸ್ಪಷ್ಟ ಸಂಗತಿಗಳನ್ನು ಗಮನಿಸಿದರೆ, ಈ ಹಂತದಲ್ಲಿ ಹೈಕೋರ್ಟ್‌ ತನ್ನ ಅಂತರ್ಗತ ಅಥವಾ ಅಸಾಧಾರಣ ನ್ಯಾಯ ವ್ಯಾಪ್ತಿಯನ್ನು ಚಲಾಯಿಸುವ ನೆಪದಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲ. ಇದು ಮೊಕದ್ದಮೆಯನ್ನು ಶೈಶವಾವಸ್ಥೆಯಲ್ಲಿಯೇ ಹತ್ತಿಕ್ಕಿದಂತಾಗುತ್ತದೆ. ಆರೋಪಗಳ ಸತ್ಯಾಸತ್ಯತೆ ಅಥವಾ ಅಥವಾ ಸಾಕ್ಷ್ಯಗಳನ್ನು ಒರೆಗೆ ಹಚ್ಚುವುದು ವಿಚಾರಣಾಧೀನ ನ್ಯಾಯಾಲಯದ ನಿರ್ಣಾಯಕ ಅಂಶಗಳಿಗೆ ಸಂಬಂಧಿಸಿದೆ” ಎಂದಿದೆ.

“ವೈದ್ಯಕೀಯ ಪರಿಣತಿಯ ಸೋಗಿನಲ್ಲಿ ಲಿಂಗ ತಾರತಮ್ಯದ ವ್ಯಾಪಾರ ಮಾಡುವವರು ಸಮಾಜಕ್ಕೆ ಅಪಾಯ ಉಂಟು ಮಾಡಬಲ್ಲರು. ಇಂತಹ ಗಂಭೀರ ಪ್ರಕರಣಗಳಲ್ಲಿ ಆರಂಭದಲ್ಲೇ ಕೋರ್ಟ್‌ ಸಡಿಲಿಕೆಗೆ ಅವಕಾಶ ನೀಡಿದರೆ ಕಾನೂನೇ ಅರ್ಥ ಹೀನವಾಗುತ್ತದೆ ಮತ್ತು ಲಿಂಗಭೇದದ ಅಪರಾಧಗಳನ್ನು ಉತ್ತೇಜಿಸುವ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ಈ ಹಂತದಲ್ಲಿ ಪ್ರಕರಣ ರದ್ದುಪಡಿಸುವುದು ಸೂಕ್ತವಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರರ ವಿರುದ್ಧ ವೈದ್ಯಕೀಯ ಗರ್ಭಪಾತ ಕಾಯಿದೆ–1971ರ ಸೆಕ್ಷನ್ 4 ಮತ್ತು ಭಾರತೀಯ ನ್ಯಾಯ ಸಂಹಿತಾ–2023ರ ಸೆಕ್ಷನ್ 91 ಮತ್ತು 3(5)ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. 

ಚನ್ನಪಟ್ಟಣ ತಾಲ್ಲೂಕಿನ ದಂಪತಿ ತಮಗೆ ಜನಿಸಲಿರುವ ಮೂರನೇ ಮಗುವಿನ ಲಿಂಗವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಪೂರ್ವಕ ಅನ್ವೇಷಣೆ ಪ್ರಾರಂಭಿಸಿದ್ದರು. ಈ ಹಂತದಲ್ಲಿ ತಮ್ಮ ಸಂಬಂಧಿಕರಾದ ಶಾರದಮ್ಮ ಮತ್ತು ದಾಸೇಗೌಡ ಅವರ ಸಹಾಯದಿಂದ ಜಿಲ್ಲಾಸ್ಪತ್ರೆಯ ಡಾ.ಶಶಿ ಅವರ ಮೂಲಕ ಅಕ್ರಮವಾಗಿ ಲಿಂಗ ಪತ್ತೆಗೆ ಸ್ಕ್ಯಾನಿಂಗ್‌ ಮಾಡಿಸಿದ್ದರು. ಗರ್ಭಿಣಿಗೆ ಖಾಸಗಿ ಕ್ಲಿನಿಕ್‌ನಲ್ಲಿ ಗರ್ಭಪಾತಕ್ಕೆ ಔಷಧಿ ನೀಡಲಾಗಿದೆ ಮತ್ತು ಔಷಧಿ ಸೇವಿಸಿದ ರಾತ್ರಿ ಮಹಿಳೆಗೆ ತೀವ್ರ ರಕ್ತಸ್ರಾವ ಉಂಟಾಗಿ ಭ್ರೂಣ ಮೃತಪಟ್ಟಿತ್ತು. ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದರು.

ಆರೋಪಿಗಳು ಲಿಂಗ ಪರೀಕ್ಷೆಗೆ ರೋಗಿಗಳನ್ನು ಕರೆತರುವ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಬೆಳಕಿಗೆ ಬಂದಿರುವುದು ಒಂದೇ ಘಟನೆ. ಆದರೆ, ಇದರ ಹಿಂದೆ ಹಲವು ಘಟನೆಗಳು ಮರೆಯಾಗಿರುವುದು ಕಂಡು ಬರುತ್ತದೆ. ಅಷ್ಟೇ ಅಲ್ಲ, ಘಟನೆ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

Saradamma and other Vs State of Karnataka.pdf
Preview