10 Covid orders - 2020 
ಸುದ್ದಿಗಳು

ಕೋವಿಡ್‌ ವಿರುದ್ಧದ ಹೋರಾಟ: 2020ರಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿದ ಹತ್ತು ಪ್ರಮುಖ ಆದೇಶಗಳು

ದೇಶವು ನಿಧಾನಕ್ಕೆ ಸಹಜ ಸ್ಥಿತಿಗೆ ಮರಳುತ್ತಿರುವ ನಡುವೆ 2020ರಲ್ಲಿ ಕೋವಿಡ್‌ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನಿರ್ವಹಿಸಿದ ಪಾತ್ರದ ಬಗ್ಗೆ ಹಿಂದಿರುಗಿ ನೋಡುವ ಯತ್ನವನ್ನು ಇಲ್ಲಿ ಮಾಡಲಾಗಿದೆ.

Bar & Bench

ಕೋವಿಡ್‌ ವ್ಯಾಪಿಸಿದ್ದರಿಂದ ಪ್ರಸಕ್ತ ವರ್ಷ ಬಹುತೇಕ ನಷ್ಟವಾಗಿದ್ದು, ಉಳಿದ ಭಾಗದಲ್ಲಿನ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಯತ್ನ ನಡೆಸಿವೆ. ಈ ಹೋರಾಟದಲ್ಲಿ ಸರ್ಕಾರಗಳು ಮತ್ತು ಪ್ರಾಧಿಕಾರಗಳು ಸುಧಾರಣೆಯತ್ತ ಹೆಜ್ಜೆ ಇರಿಸಿರುವುದನ್ನು ಖಚಿತ ಪಡಿಸಿಕೊಳ್ಳಲು ತನ್ನ ಮಿತಿಯಲ್ಲಿ ಸುಪ್ರೀಂ ಕೋರ್ಟ್‌ ನಿಗಾ ಇರಿಸಿತು.

ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೆಗೆದುಕೊಂಡ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾದರೆ, ಇನ್ನು ಕೆಲ ನಿರ್ಧಾರಗಳಿಗೆ ಕಟು ಟೀಕೆಯೂ ವ್ಯಕ್ತವಾಯಿತು. ಮತ್ತೆ ಕೆಲವೆಡೆ ತಪ್ಪುಗಳನ್ನು ಸರಿಪಡಿಸಿಕೊಂಡಿರುವುದು ನಡೆದಿದ್ದೂ ಆಗಿದೆ. ಮೊದಲಿಗೆ ವಲಸೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಸರ್ಕಾರ ನಿಲುವಿಗೆ ಪೂರಕವಾಗಿ ನಡೆದುಕೊಳ್ಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದ ಸುಪ್ರೀಂ ಕೋರ್ಟ್‌ ಆನಂತರ ಅದನ್ನು ಸರಿಪಡಿಸಿಕೊಳ್ಳುವ ಯತ್ನ ಮಾಡಿದರೂ ಅದಾಗಲೇ ಕಾಲ ಮಿಂಚಿ ಹೋಗಿತ್ತು.

ದೇಶವು ನಿಧಾನಕ್ಕೆ ಸಹಜ ಸ್ಥಿತಿಯತ್ತ ಬರುತ್ತಿರುವ ನಡುವೆ 2020ರಲ್ಲಿ ಕೋವಿಡ್‌ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಪಾತ್ರದ ಬಗ್ಗೆ ಹಿಂದಿರುಗಿ ನೋಡುವ ಯತ್ನ ಈ ಲೇಖನದ್ದಾಗಿದೆ. ಕೋವಿಡ್‌ಗೆ ಸಂಬಂಧಿಸಿದಂತೆ ನ್ಯಾಯಾಲಯ ಹೊರಡಿಸಿದ ಪ್ರಮುಖ ಹತ್ತು ಆದೇಶಗಳು ಇಂತಿವೆ:

ವಲಸೆ ಕಾರ್ಮಿಕರ ಬಿಕ್ಕಟ್ಟು

ಕೇಂದ್ರ ಸರ್ಕಾರವು ಕೋವಿಡ್‌ ನಿಯಂತ್ರಿಸುವ ಉದ್ದೇಶದಿಂದ ಯಾವುದೇ ಮುನ್ಸೂಚನೆ ನೀಡದೇ ಲಾಕ್‌ಡೌನ್‌ ಘೋಷಿಸಿದ್ದರಿಂದ ಜೀವನ ನಿರ್ವಹಣೆಗಾಗಿ ಮೆಟ್ರೊ ನಗರಗಳು ಸೇರಿದಂತೆ ದೇಶದ ವಿವಿಧೆಡೆ ಚದುರಿ ಹೋಗಿದ್ದ ವಲಸೆ ಕಾರ್ಮಿಕರು ತಮ್ಮ ತವರೂರಿಗೆ ತೆರಳಲು ಹರಸಾಹಸಪಟ್ಟರು. ಮಾರ್ಚ್‌-ಏಪ್ರಿಲ್‌ನಲ್ಲಿ ನಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲು ಸುಪ್ರೀಂ ಕೋರ್ಟ್‌ ವಿಫಲವಾಗಿದೆ ಎಂದು ಅದರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಅಪಾರ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬರಿಗಾಲಲ್ಲಿ ಸಾವಿರಾರು ಕಿಲೋ ಮೀಟರ್‌ ನಡೆದು ತಮ್ಮ ಊರುಗಳಿಗೆ ಮರಳಿದ್ದನ್ನು ಮಾಧ್ಯಮಗಳು ಸೆರೆ ಹಿಡಿದು ಬಿತ್ತರಿಸಿದ್ದವು. ಈ ವಿಚಾರದಲಿ ಮಧ್ಯಪ್ರವೇಶಿಸಲು ಕನಿಷ್ಠ ಮೂರು ಬಾರಿ ನ್ಯಾಯಾಲಯವು ನಿರಾಕರಿಸುವ ಮೂಲಕ ಅಸೂಕ್ಷ್ಮತೆ ಪ್ರದರ್ಶಿಸಿತ್ತು. ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಮನವಿ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು “ಅವರಿಗೆ ಆಹಾರ ಪೂರೈಸುತ್ತಿರಬೇಕಾದರೆ ಅವರಿಗೆ ಆಹಾರ ಖರೀದಿಸಲು ಹಣವೇಕೆ?” ಎಂದು ಪ್ರಶ್ನಿಸುವ ಮೂಲಕ ವ್ಯಾಪಕ ಟೀಕೆಗೆ ಒಳಗಾಗಿದ್ದರು.

ಕೇಂದ್ರ ಸರ್ಕಾರದ ನಿಲುವಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಅದನ್ನು ಒಪ್ಪಿಕೊಂಡಿದ್ದಕ್ಕೆ ಸುಪ್ರೀಂ ಕೋರ್ಟ್‌ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದನ್ನು ಟೀಕಿಸಿ ಹಲವು ನಿವೃತ್ತ ನ್ಯಾಯಮೂರ್ತಿಗಳು ಕಟುವಾದ ಲೇಖನಗಳನ್ನು ಬರೆದರು. ಮಾನವಿಯತೆಯ ಆಧಾರದಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಮುಂಬೈನ ಕನಿಷ್ಠ ಇಪ್ಪತ್ತು ವಕೀಲರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದರು. ತದನಂತರ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತು. ಬಳಿಕ ಹದಿನೈದು ದಿನಗಳ ಒಳಗೆ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರವರ ಸ್ಥಳಗಳಿಗೆ ತಲುಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತು.

ಕೋರಿಕೆ ಸಲ್ಲಿಸಿದ 24 ಗಂಟೆಯ ಒಳಗೆ ಶ್ರಮಿಕ್‌ ರೈಲುಗಳನ್ನು ಆರಂಭಿಸಬೇಕು. ವಲಸೆ ಕಾರ್ಮಿಕರಿಗೆ ಉದ್ಯೋಗ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರಗಳು ಸಹಾಯವಾಣಿ ಆರಂಭಿಸಬೇಕು. ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಸಮಾಲೋಚನಾ ಕೇಂದ್ರಗಳನ್ನು ಆರಂಭಿಸಬೇಕು ಎಂದು ನ್ಯಾಯಾಲಯ ಹೇಳಿತು.

ಕೋವಿಡ್‌ ಹಿಮ್ಮೆಟ್ಟಿಸಲು ಸರ್ಕಾರ-ಸಾರ್ವಜನಿಕ ಒಪ್ಪಂದ

ಸರ್ಕಾರ ಮತ್ತು ನಾಗರಿಕರು ಒಟ್ಟಾಗಿ ಸೇರಿ ಸಾಂಕ್ರಾಮಿಕರ ರೋಗ ತಡೆಗಟ್ಟಲು ಜಂಟಿಯಾಗಿ ಕಾರ್ಯಾಚರಣೆ ನಡೆಸುವಂತೆ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸುಭಾಷ್‌ ರೆಡ್ಡಿ ಮತ್ತು ಎಂ ಆರ್‌ ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ನಿರ್ದೇಶಿಸಿತ್ತು. ಅಲ್ಲದೇ ಎಲ್ಲಾ ರಾಜ್ಯ ಸರ್ಕಾರಗಳು ಸೌಹಾರ್ದದಿಂದ ಕೇಂದ್ರ ಸರ್ಕಾರದ ಜೊತೆ ಕೋವಿಡ್‌ ತೊಲಗಿಸಲು ಕೆಲಸ ಮಾಡಬೇಕು ಎಂಬುದು ಸೇರಿದಂತೆ ಹಲವು ನಿರ್ದೇಶಗಳನ್ನು ನ್ಯಾಯಾಲಯ ನೀಡಿತ್ತು.

ಆಯುಷ್‌ ವೈದ್ಯರು ಕೋವಿಡ್‌ ಗುಣಪಡಿಸುವ ಹೆಸರಿನಲ್ಲಿ  ಔಷಧ ಶಿಫಾರಸು ಮಾಡುವಂತಿಲ್ಲ

ಕೋವಿಡ್‌-19 ಅನ್ನು ಗುಣಪಡಿಸುವ ಔಷಧಿ ಎನ್ನುವ ಶಿಫಾರಸು ಅಥವಾ ಜಾಹೀರಾತನ್ನು ಆಯುಷ್ ವೈದ್ಯರು ನೀಡುವಂತಿಲ್ಲ ಎನ್ನುವ ಕೇರಳ ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತು.

ಕೇರಳ ಹೈಕೋರ್ಟ್‌ ಆಗಸ್ಟ್‌ 21ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಡಾ. ಎಕೆಬಿ ಸದ್ಭಾವನಾ ಮಿಷನ್‌ ಆಫ್‌ ಹೋಮಿಯೊ ಫಾರ್ಮಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸುಭಾಷ್‌ ರೆಡ್ಡಿ ಮತ್ತು ಎಂ ಆರ್‌ ಶಾ ಅವರಿದ್ದ ತ್ರಿಸದಸ್ಯ ಪೀಠವು ತೀರ್ಪಿನಲ್ಲಿ ಬದಲಾವಣೆ ಮಾಡಲು ನಿರಾಕರಿಸಿತು.

ಮನೆಯ ಹೊರಗೆ ಕೋವಿಡ್‌ ಭಿತ್ತಿಪತ್ರ ಅಂಟಿಸುವಂತಿಲ್ಲ

ಕೋವಿಡ್‌ ರೋಗಿಗಳ ಮನೆಯ ಹೊರಗೆ ಭಿತ್ತಿಪತ್ರ ಲಗತ್ತಿಸುವ ಮೂಲಕ ಅವರ ಗುರುತು ಬಹಿರಂಗಪಡಿಸಬಾರದು ಎಂದು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಅಂಥ ಭಿತ್ತಿಪತ್ರಗಳನ್ನು ಅಂಟಿಸುವುದು ರೋಗಿಯ ಖಾಸಗಿ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಸಲ್ಲಿಸಲಾಗಿದ್ದ ಮನವಿಯನ್ನು ಆಧರಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಕಾರ್ಖಾನೆ ಸಿಬ್ಬಂದಿಗೆ ಹೆಚ್ಚುವರಿ ಸಮಯದ ವೇತನ ನೀಡದಂತೆ ಸೂಚಿಸಿದ್ದ ಅಧಿಸೂಚನೆ ವಜಾ

ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸಲು ಉತ್ತಮ ವಾತಾವರಣ ಮತ್ತು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ನೀಡಲಾಗುವ ವೇತನದಿಂದ ವಿನಾಯತಿ ನೀಡಿ ಅಧಿಸೂಚನೆ ಹೊರಡಿಸಿದ್ದ ಗುಜರಾತ್‌ ಸರ್ಕಾರದ ಆದೇಶವನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌, ಇಂದೂ ಮಲ್ಹೋತ್ರಾ ಮತ್ತು ಕೆ ಎಂ ಜೋಸೆಫ್‌ ಅವರಿದ್ದ ತ್ರಿಸದಸ್ಯ ಪೀಠವು ವಜಾಗೊಳಿಸಿತ್ತು.

ಸಾಲ ಪಾವತಿ ಮಾಡಿಲ್ಲ ಎಂದ ಮಾತ್ರಕ್ಕೆ ಡಿಫಾಲ್ಟ್‌ ಖಾತೆಗಳನ್ನು ವಸೂಲಾಗದ ಸಾಲ ಎಂದು ಘೋಷಿಸಬಾರದು

2020ರ ಆಗಸ್ಟ್‌ 31ರ ವರೆಗೆ ಅನುತ್ಪಾದಕ (ಎನ್‌ಪಿಎ) ಎಂದು ಘೋಷಿಸಿಲ್ಲದ ಖಾತೆಗಳನ್ನು ಮುಂದಿನ ಆದೇಶದವರೆಗೆ ಎನ್‌ಪಿಎ ಎಂದು ಘೋಷಿಸಬಾರದು ಎಂದು ಸೆಪ್ಟೆಂಬರ್‌ 3ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠವು ಮಧ್ಯಂತರ ಆದೇಶ ಹೊರಡಿಸಿತ್ತು. ಬ್ಯಾಂಕ್‌ಗಳು ನೀಡಿದ್ದ ಸಾಲ ಮರುಪಾವತಿ ಅವಧಿ ವಿಸ್ತರಣೆ ಮತ್ತು ಚಕ್ರಬಡ್ಡಿ ವಜಾ ಕುರಿತ ಅರ್ಜಿ ವಿಚಾರಣೆ ನಡೆಸಿದ ಪೀಠವು ಆದೇಶ ಹೊರಡಿಸಿತ್ತು.

ಪಿಎಂ ಕೇರ್ಸ್‌ನಿಂದ ಎನ್‌ಡಿಆರ್‌ಎಫ್‌ಗೆ ಹಣ ವರ್ಗಾವಣೆಯಿಲ್ಲ

ಕೋವಿಡ್‌ ಪರಿಹಾರ ಕಾರ್ಯಕ್ಕಾಗಿ ಸೃಷ್ಟಿಸಲಾದ ಪಿಎಂ ಕೇರ್ಸ್‌ ನಿಧಿಯ ಮೂಲಕ ಸಂಗ್ರಹಿಸಲಾದ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ (ಎನ್‌ಡಿಆರ್‌ಎಫ್‌) ವರ್ಗಾಯಿಸಲಾಗದು ಎಂದು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಆರ್‌ ಸುಭಾಷ್‌ ರೆಡ್ಡಿ ಮತ್ತು ಎಂ ಆರ್‌ ಶಾ ಅವರಿದ್ದ ತ್ರಿಸದಸ್ಯ ಪೀಠವು ಆದೇಶಿಸಿತ್ತು. ಪಿಎಂ ಕೇರ್ಸ್‌ಗೆ ಸ್ವಯಂಪ್ರೇರಿತವಾಗಿ ಜನರು ದೇಣಿಗೆ ನೀಡಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು.

ಕೋವಿಡ್‌ ಚಿಕಿತ್ಸೆಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದಲ್ಲಿ ಸುಪ್ರೀಂ ನಿರ್ದೇಶನ

ಕೋವಿಡ್‌ ಸೋಂಕಿತರಿಗೆ ನೀಡುವ ಚಿಕಿತ್ಸೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸಂಜಯ್‌ ಕಿಶನ್‌ ಕೌಲ್‌ ಮತ್ತು ಎಂ ಆರ್‌ ಶಾ ಅವರಿದ್ದ ತ್ರಿಸದಸ್ಯ ಪೀಠವು ವಿಸ್ತೃತವಾದ ನಿರ್ದೇಶನಗಳನ್ನು ನೀಡಿತು. ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನ್ಯಾಯಾಲಯವು ಆದೇಶಿಸಿತು.

ಕೋವಿಡ್‌ ಸಂದರ್ಭದಲ್ಲಿ ಪರೀಕ್ಷೆಗಳು

ಕೋವಿಡ್‌ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಹತ್ತು ಮತ್ತು ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದ ಬೆನ್ನಿಗೇ ಪ್ರಸಕ್ತ ವರ್ಷದ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಸಿಬಿಎಸ್‌ಇಯು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ದಿನೇಶ್‌ ಮಹೇಶ್ವರಿ ಮತ್ತು ಸಂಜೀವ್‌ ಖನ್ನಾ ಅವರಿದ್ದ ತ್ರಿಸದಸ್ಯ ಪೀಠಕ್ಕೆ ತನ್ನ ನಿರ್ಧಾರ ವಿವರಿಸಿತು.

ಕೋವಿಡ್‌ ಪರೀಕ್ಷಾ ಶುಲ್ಕ ನಿಗದಿ

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲುಎಸ್‌) ಮತ್ತು ಆಯುಷ್ಮಾನ್‌ ಭಾರತ್‌ ಯೋಜನೆಗೆ ಒಳಪಟ್ಟಿರುವವರಿಗೆ ಮಾತ್ರ ಕೋವಿಡ್‌ ಪರೀಕ್ಷೆಯನ್ನು ಉಚಿತವಾಗಿ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ರವೀಂದ್ರ ಎಸ್‌ ಭಟ್‌ ಅವರಿದ್ದ ವಿಭಾಗೀಯ ಪೀಠವು ಸ್ಪಷ್ಟಪಡಿಸಿತು. ದೇಶದಲ್ಲಿರುವ ಎಲ್ಲಾ ಖಾಸಗಿ ಪ್ರಯೋಗಾಲಯಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ಉಚಿತವಾಗಿ ಕೋವಿಡ್‌ ಪರೀಕ್ಷೆ ಮಾಡಬೇಕು ಎಂದು ಆದೇಶಿಸಿದ್ದ ನಿರ್ಣಯವನ್ನು ನ್ಯಾಯಾಲಯ ಬಳಿಕ ಪರಿಷ್ಕರಿಸಿತು.

ಸುಪ್ರೀಂ ಕೋರ್ಟ್‌ ಆದೇಶ ಪರಿಷ್ಕರಿಸಿದ ಹಿನ್ನೆಲೆಯಲ್ಲಿ ಖಾಸಗಿ ಪ್ರಯೋಗಾಲಯಗಳು ಇಡಬ್ಲುಎಸ್‌ ಅಥವಾ ಆಯುಷ್ಮಾನ್‌ ಯೋಜನೆಗೆ ಒಳಪಟ್ಟಿಲ್ಲದವರಿಗೆ ರೂ.4,500 ಶುಲ್ಕ ವಿಧಿಸಿಲು ಆರಂಭಿಸಿದವು. ಭಾರತೀಯ ವೈದ್ಯಕೀಯ ಸಂಶೋಧನಾ ಒಕ್ಕೂಟ (ಐಸಿಎಂಆರ್)‌ ನಿಗದಿಪಡಿಸಿದಷ್ಟು ಶುಲ್ಕವನ್ನು ಖಾಸಗಿ ಪ್ರಯೋಗಾಲಯಗಳು ವಿಧಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿತ್ತು.