Lokayukta and Karnataka HC 
ಸುದ್ದಿಗಳು

ಉಪ ಲೋಕಾಯುಕ್ತ ಹುದ್ದೆ ಭರ್ತಿ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಕರ್ನಾಟಕ ಹೈಕೋರ್ಟ್‌

ಲೋಕಾಯುಕ್ತರಾಗಿದ್ದ ವಿಶ್ವನಾಥ್‌ ಶೆಟ್ಟಿ ಅವರು ಜನವರಿಯಲ್ಲಿ ನಿವೃತ್ತರಾಗಿದ್ದರು. ಈ ಹುದ್ದೆಗೆ ಮೊದಲ ಉಪ ಲೋಕಾಯುಕ್ತ ಹುದ್ದೆಯಲ್ಲಿದ್ದ ನ್ಯಾ. ಬಿ ಎಸ್‌ ಪಾಟೀಲ್‌ ಅವರನ್ನು ಜೂನ್‌ನಲ್ಲಿ ಸರ್ಕಾರ ನೇಮಿಸಿತ್ತು. ಹೀಗಾಗಿ, ಆ ಸ್ಥಾನ ಖಾಲಿಯಾಗಿದೆ.

Bar & Bench

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಒಂದನೇ ಉಪ ಲೋಕಾಯುಕ್ತ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿ, ತುರ್ತಾಗಿ ಹುದ್ದೆ ತುಂಬುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ವಕೀಲ ಎಸ್‌ ಉಮಾಪತಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಸೇವಾ ನಿಯಮಗಳು) ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ನೋಟಿಸ್‌ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಆದೇಶಿಸಿತು.

ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಸ್‌ ವಿಶ್ವನಾಥ್‌ ಶೆಟ್ಟಿ ಅವರು ಜನವರಿ ಕೊನೆಯ ವಾರದಲ್ಲಿ ನಿವೃತ್ತಿ ಹೊಂದಿದ್ದರು. ಈ ಹುದ್ದೆಗೆ ಮೊದಲ ಉಪ ಲೋಕಾಯುಕ್ತ ಹುದ್ದೆಯಲ್ಲಿದ್ದ ನಿವೃತ್ತ ನ್ಯಾಯಮೂರ್ತಿ ಬಿ ಎಸ್‌ ಪಾಟೀಲ್‌ ಅವರನ್ನು ಜೂನ್‌ನಲ್ಲಿ ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಹೀಗಾಗಿ, ಆ ಸ್ಥಾನವು ಖಾಲಿಯಾಗಿದೆ. ಈ ಹುದ್ದೆಗೆ ಸೂಕ್ತವಾದವರನ್ನು ಭರ್ತಿ ಮಾಡುವಂತೆ ಅರ್ಜಿದಾರರು ಕೋರಿದ್ದಾರೆ.

ಎರಡನೇ ಉಪ ಲೋಕಾಯುಕ್ತ ಹುದ್ದೆಗೆ ಮಾರ್ಚ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ ಎನ್‌ ಫಣೀಂದ್ರ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶಿಸಿತ್ತು.