Ranjith, Kerala High court 
ಸುದ್ದಿಗಳು

ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್ ಕದ ತಟ್ಟಿದ ಮಲಯಾಳಂ ನಿರ್ದೇಶಕ ರಂಜಿತ್

ಬಂಗಾಳಿ ನಟಿಯೊಬ್ಬರು ತಮ್ಮ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Bar & Bench

ಬಂಗಾಳಿ ನಟಿಯೊಬ್ಬರು ತಮ್ಮ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿ ಕುರಿತು ಆಗಸ್ಟ್ 19, 2024ರಂದು ನ್ಯಾ. ಕೆ ಹೇಮಾ ಸಮಿತಿ ವರದಿ ಪ್ರಕಟವಾದ ಬಳಿಕ ರಂಜಿತ್‌ ವಿರುದ್ಧ ಆರೋಪ ಮಾಡಲಾಗಿತ್ತು.

2009ರಲ್ಲಿ "ಪಲೇರಿಮಾಣಿಕ್ಯಂ" ಚಿತ್ರದ ಚರ್ಚೆಯ ಸಂದರ್ಭದಲ್ಲಿ ನಟಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪ ರಂಜಿತ್ ಮೇಲಿದೆ. ರಂಜಿತ್ ಅವರು ಎರ್ನಾಕುಲಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿದ್ದಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಆ ಪರಿಸ್ಥಿತಿಯಿಂದ ಪಾರಾಗುವಲ್ಲಿ ಯಶಸ್ವಿಯಾದ ತಾನು ಆ ಅನುಭವವನ್ನು ನಂತರ ಚಿತ್ರಕಥೆಗಾರರೊಂದಿಗೆ ಹಂಚಿಕೊಂಡಿದ್ದೆ ಎಂದು ನಟಿ ಹೇಳಿದ್ದರು.

ದೂರ ಪ್ರಯಾಣದ ಸಮಸ್ಯೆ ಮತ್ತು ಬೆಂಬಲದ ಕೊರತೆಯಿಂದಾಗಿ ಆಗ ರಂಜಿತ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಟಿಗೆ ಸಾಧ್ಯವಾಗಿರಲಿಲ್ಲ. ಆದರೆ ನ್ಯಾ ಹೇಮಾ ಸಮಿತಿ ವರದಿ ಬಿಡುಗಡೆಯಿಂದ ಸ್ಫೂರ್ತಿಗೊಂಡ ಅವರು ತಮ್ಮ ಅನುಭವಗಳನ್ನು ಮಾಧ್ಯಮಗಳೆದುರು  ಹಂಚಿಕೊಳ್ಳಲು ನಿರ್ಧರಿಸಿದರು.

ಬಳಿಕ ಐಪಿಸಿ ಸೆಕ್ಷನ್‌ 354ರ ಅಡಿ (ಮಹಿಳೆಯ ಘನತೆಗೆ ಧಕ್ಕೆ ತರುವ ಸಲುವಾಗಿ ಮಹಿಳೆ ಮೇಲೆ ದಾಳಿ ಇಲ್ಲವೇ ಕ್ರಿಮಿನಲ್‌ ಬಲಪ್ರಯೋಗ) ಕೊಚ್ಚಿ ಪೊಲೀಸ್‌ ಆಯುಕ್ತರಿಗೆ ಇಮೇಲ್‌ ಮೂಲಕ ನಟಿ ಔಪಚಾರಿಕ ದೂರು ಸಲ್ಲಿಸಿದ್ದರು. ಆರೋಪಗಳ ಹಿನ್ನೆಲೆಯಲ್ಲಿ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆದರೆ ಸಾರ್ವಜನಿಕವಾಗಿ ಆರೋಪ ನಿರಾಕರಿಸುತ್ತಲೇ ಬಂದಿರುವ ರಂಜಿತ್‌ ಇವು ಆಧಾರ ರಹಿತ ಮತ್ತು ತಮ್ಮ ವಿರುದ್ಧದ ಷಡ್ಯಂತ್ರದ ಭಾಗ ಎಂದಿದ್ದಾರೆ.

ತನ್ನ ವಿರುದ್ಧದ ಆರೋಪ ಜಾಮೀನು ನೀಡಬಹುದಾದ ಅಪರಾಧವಾಗಿದ್ದು ತಾನು ಜಾಮೀನು ಪಡೆಯಲು ಅರ್ಹನಾಗಿದ್ದೇನೆ. ಚಿತ್ರದ ಪಾತ್ರಕ್ಕೆ ಆಯ್ಕೆಯಾಗದ ಕಾರಣ ಅಸಮಾಧಾನಗೊಂಡ ನಟಿ ತನ್ನ ವಿರುದ್ಧ ಆರೋಪ ಮಾಡಿದ್ದಾರೆ. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ನನ್ನನ್ನು ಕೆಳಗಿಳಿಸಲು ಬಯಸಿದ್ದವರು ಈ ದೂರಿಗೆ ಪ್ರೇರಣೆಯಾಗಿದ್ದಾರೆ ಎಂದು ರಂಜಿತ್‌ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.