ಅಖಿಲ ಭಾರತ ವಕೀಲ ಪರಿಷತ್ ಪರೀಕ್ಷೆಯನ್ನು (ಎಐಬಿಇ) ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳು ಬರೆಯುವುದಕ್ಕೆ ಅನುಮತಿಸುವ ಸಂಬಂಧ ನಿಯಮಗಳನ್ನು ರೂಪಿಸುತ್ತಿರುವುದಾಗಿ ಭಾರತೀಯ ವಕೀಲರ ಪರಿಷತ್ ಈಚೆಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಪದವಿಗೂ ಮುನ್ನ ಎಐಬಿಇ ಪರೀಕ್ಷೆ ಬರೆಯುವುದಕ್ಕೆ ನಿರ್ಬಂಧ ವಿಧಿಸಿದ್ದ ಬಿಸಿಐನ ಇತ್ತೀಚಿನ ಅಧಿಸೂಚನೆ ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ಒಂಭತ್ತು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
"ನಿಯಮ ರೂಪಿಸಿದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಸ್ಪಷ್ಟತೆ ಸಿಗಲಿದೆ. ಯಾವಾಗ ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂಬುದನ್ನು ಮುಂದಿನ ವಾರ ಬಿಸಿಐ ತಿಳಿಸಬೇಕು” ಎಂದು ಪೀಠ ಹೇಳಿತು.
ಕಾನೂನು ಶಾಲೆಯಲ್ಲಿ ಅಂತಿಮ ಸೆಮಿಸ್ಟರ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಎಐಬಿಇ ಪರೀಕ್ಷೆ ಬರೆಯಲು ಅರ್ಹರು ಎಂದಿರುವ ಸಾಂವಿಧಾನಿಕ ಪೀಠದ ಆದೇಶಕ್ಕೆ ವಿರುದ್ಧವಾಗಿ ಬಿಸಿಐ ನಿರ್ಧಾರ ಕೈಗೊಂಡಿದೆ. ತೆಲಂಗಾಣ ಹೈಕೋರ್ಟ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಾಂವಿಧಾನಿಕ ಪೀಠದ ಆದೇಶಕ್ಕೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವಂತೆ ಬಿಸಿಐಗೆ ನಿರ್ದೇಶಿಸಿದೆ ಎಂದು ಅರ್ಜಿದಾರರು ವಿವರಿಸಿದ್ದಾರೆ.
ಹಾಲಿ ವಿಚಾರಗಳು ಫಲಿತಾಂಶ ಪ್ರಕಟಿಸಿರುವ ವಿಶ್ವವಿದ್ಯಾಲಯಗಳು ಮತ್ತು ಫಲಿತಾಂಶ ಪ್ರಕಟಿಸದ ವಿದ್ಯಾರ್ಥಿಗಳು ಎಂಬ ಭೇದ ಸೃಷ್ಟಿಸುತ್ತವೆ. ಹೀಗಾಗಿ, ಆಕ್ಷೇಪಾರ್ಹವಾದ ಅಧಿಸೂಚನೆಯನ್ನು ರದ್ದುಪಡಿಸಬೇಕು. ನವೆಂಬರ್ 24ಕ್ಕೆ ನಿಗದಿಯಾಗಿರುವ ಪರೀಕ್ಷೆ ಬರೆಯಲು ಅನುಮತಿಸಬೇಕು. ಹೀಗೆ ಮಾಡುವುದರಿಂದ ವೃತ್ತಿ ದೃಷ್ಟಿಯಿಂದ ಮೌಲ್ಯಯುತವಾದ ಸಮಯ ವ್ಯರ್ಥವಾಗುವುದಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳು ವಕೀಲರ ಪರಿಷತ್ ಪರೀಕ್ಷೆ ಬರೆಯಲು ಅನುಮತಿಸುವುದನ್ನು ಪರಿಗಣಿಸಬೇಕು ಎಂದು ಸಾಂವಿಧಾನಿಕ ಪೀಠಕ್ಕೆ ಹಿಂದೆ ಅಮಿಕಸ್ ಕ್ಯೂರಿಯಾಗಿದ್ದ ಕೆ ವಿ ವಿಶ್ವನಾಥನ್ (ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ) ನೀಡಿದ್ದ ಸಲಹೆ ಪರಿಗಣಿಸಬೇಕು ಎಂದು ಕೋರಲಾಯಿತು. ಇದಕ್ಕೆ ಬಿಸಿಐ ಪ್ರತಿನಿಧಿಸಿದ್ದ ವಕೀಲರು ಅಮಿಕಸ್ ಸಲಹೆಗಳು ಪರಿಗಣನೆಯಲ್ಲಿವೆ ಎಂದಿದ್ದಾರೆ.