Karnataka HC 
ಸುದ್ದಿಗಳು

ಕೋವಿಡ್‌ ಸಂಕಷ್ಟ: ವಕೀಲರ ನಿಯೋಗದ ಮನವಿ ಪುರಸ್ಕರಿಸದ ರಾಜ್ಯ ಸರ್ಕಾರ ಹಾಗೂ ವಕೀಲರ ಪರಿಷತ್‌ ಗೆ ಹೈಕೋರ್ಟ್ ನೋಟಿಸ್

ತನ್ನ ನಿಯೋಗದ ಮನವಿಯನ್ನು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವುದರ ಜೊತೆಗೆ ಅಗತ್ಯವಿರುವ ವಕೀಲರಿಗೆ ಹಂಚಿಕೆ ಮಾಡಲು ₹1.5 ಕೋಟಿ ಬಿಡುಗಡೆ ಮಾಡುವಂತೆ ಸೂಚಿಸಬೇಕು ಎಂದು ಬೆಂಗಳೂರು ವಕೀಲರ ಪರಿಷತ್ ಹೈಕೋರ್ಟ್ ಗೆ ಮನವಿ ಮಾಡಿದೆ.

Bar & Bench

ಕೋವಿಡ್ ಹಿನ್ನೆಲೆಯಲ್ಲಿ ವಕೀಲರಿಗೆ ಆರ್ಥಿಕ ಸಹಾಯ ಮಾಡಲು ಕೋರಿದ್ದ ವಕೀಲರ ಸಂಘಗಳ ನಿಯೋಗದ ಮನವಿಯನ್ನು ತಿರಸ್ಕರಿಸಿದ ಸರ್ಕಾರಿ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಗೆ ನೋಟಿಸ್ ಜಾರಿಗೊಳಿಸಿದೆ (ವಕೀಲರ ಸಂಸ್ಥೆಗಳು, ಬೆಂಗಳೂರು ವರ್ಸಸ್ ಕರ್ನಾಟಕ ರಾಜ್ಯ).

ತಮ್ಮ ಸದಸ್ಯರ ಆರ್ಥಿಕ ಸಹಾಯಕ್ಕಾಗಿ ರಾಜ್ಯ ವಕೀಲರ ಪರಿಷತ್ತನ್ನು (ಕೆಎಸ್‌ಬಿಸಿ) ಸಂಪರ್ಕಿಸುವಂತೆ ವಕೀಲರ ಪರಿಷತ್ತುಗಳಿಗೆ ರಾಜ್ಯ ಸರ್ಕಾರವು ಆಗಸ್ಟ್ 20ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಬೆಂಗಳೂರಿನ ವಕೀಲರ ಪರಿಷತ್ತು (ಎಎಬಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಬುಧವಾರ ಕೆಎಸ್‌ಬಿಸಿ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಸೆಪ್ಟೆಂಬರ್ 28ಕ್ಕೆ ವಿಚಾರಣೆ ಮುಂದೂಡಿತು.

ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ₹5 ಕೋಟಿ ಅನುದಾನವನ್ನು ಹಂಚಿಕೆ ಮಾಡಲು ಕೆಎಸ್‌ಬಿಎಸ್ ಜಾರಿಗೊಳಿಸಿರುವ ಯೋಜನೆಯನ್ನೂ ಎಎಬಿ ಪ್ರಶ್ನಿಸಿದೆ.

“ಆರ್ಥಿಕ ಸಹಾಯ ಕೋರುವ ವಕೀಲರಿಗೆ ಪ್ರಕರಣದಲ್ಲಿ ಎರಡನೇ ಪ್ರತಿವಾದಿಯಾಗಿರುವ ಕೆಎಸ್‌ಬಿಸಿ ಜಾರಿಗೊಳಿಸಿರುವ ಯೋಜನೆಯಲ್ಲಿ ಅವಿವೇಕದ ಮತ್ತು ತಾರತಮ್ಯದ ಷರತ್ತುಗಳನ್ನು ವಿಧಿಸಲಾಗಿದೆ. ಉಲ್ಲೇಖಿತ ಯೋಜನೆಯಲ್ಲಿ ಮಹಿಳಾ ವಕೀಲರು, 40 ವರ್ಷ ಮೀರಿದವರು ಮತ್ತು 1.1.2010ರ ನಂತರ ನೋಂದಣಿ ಮಾಡಿಸಿರುವ ವಕೀಲರು ಆರ್ಥಿಕ ಸಹಾಯಕ್ಕೆ ಅರ್ಹರಲ್ಲ ಎಂದು ಹೇಳಲಾಗಿದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಹೆಚ್ಚುವರಿಯಾಗಿ ₹1.5 ಕೋಟಿ ಬಿಡುಗಡೆ ಮಾಡುವಂತೆ ಕೋರಿರುವ ತನ್ನ ಮನವಿಯನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಹೈಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ಎಎಬಿ ಕೋರಿದೆ.

“... ಒಂದೇ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕದ ನೆರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಮಿಗಿಲಾಗಿ ಆರ್ಥಿಕ ಸಹಾಯ ಮಾಡಿವೆ. ಆದರೆ, ಕರ್ನಾಟಕ ಸರ್ಕಾರವು ತೊಂದರೆಯಲ್ಲಿ ಸಿಲುಕಿರುವ ವಕೀಲರನ್ನು ಪರಿಗಣಿಸದೇ ಕೇವಲ ₹5 ಕೋಟಿ ಬಿಡುಗಡೆ ಮಾಡಿದೆ” ಎಂದು ಹೇಳಲಾಗಿದೆ.

ಮತ್ತೊಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಕೆಎಸ್‌ಬಿಸಿಯು 7,844 ಅರ್ಜಿಗಳನ್ನು ಮನ್ನಿಸಿ ಆರ್ಥಿಕ ಸಹಾಯ ಮಾಡಲಾಗಿದ್ದು, 1,163 ಅರ್ಜಿಗಳು ತಿರಸ್ಕೃತಗೊಂಡಿವೆ. ರಾಜ್ಯ ಸರ್ಕಾರ ಮಂಜೂರು ಮಾಡಿರುವ ₹5 ಕೋಟಿ ಪೈಕಿ ₹3,29,20,000 ಹಂಚಿಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಸೆಪ್ಟೆಂಬರ್ 28ಕ್ಕೆ ನಿಗದಿಯಾಗಿರುವ ವಿಚಾರಣೆ ಸಂದರ್ಭದಲ್ಲಿ ಎರಡೂ ಅರ್ಜಿಗಳನ್ನು ಒಟ್ಟಿಗೆ ಮಂಡಿಸುವಂತೆ ರಿಜಿಸ್ಟ್ರಿಗೆ ನ್ಯಾಯಾಪೀಠ ಸೂಚಿಸಿದೆ.