Infosys co-founder Kris Gopalakrishnan and Bengaluru city civil court 
ಸುದ್ದಿಗಳು

ಇನ್ಫೋಸಿಸ್‌ ಸಹ ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣನ್‌ ಸೇರಿ 18 ಮಂದಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

ಜನವರಿ 17ರಂದು ವಿಶೇಷ ನ್ಯಾಯಾಲಯವು ಆದೇಶ ಮಾಡಿದ್ದು, ಜನವರಿ 27ರಂದು ಸದಾಶಿವನಗರ ಪೊಲೀಸರು 18 ಮಂದಿಯ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

Bar & Bench

ಪ್ರತಿಷ್ಠಿತ ಇನ್ಫೋಸಿಸ್‌ ಸಹ ಸಂಸ್ಥಾಪಕ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣನ್‌, ಐಐಎಸ್‌ಸಿ ಮಾಜಿ ನಿರ್ದೇಶಕ ಪಿ ಬಲರಾಮ್‌ ಸೇರಿ 18 ಮಂದಿಯ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ಬೆಂಗಳೂರಿನ ವಿಶೇಷ ಸತ್ರ ನ್ಯಾಯಾಲಯ ಈಚೆಗೆ ಆದೇಶಿಸಿದ ಬೆನ್ನಿಗೇ, ಸದಾಶಿವನಗರ ಠಾಣೆಯ ಪೊಲೀಸರು ಸೋಮವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

ಐಐಸಿಎಸ್‌ಯ ಸುಸ್ಥಿರ ತಂತ್ರಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಭೋವಿ ಸಮುದಾಯದ ಡಾ. ಡಿ ಸಣ್ಣ ದುರ್ಗಪ್ಪ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ಬೆಂಗಳೂರಿನ 71ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರಾದ ಕೆ ರಾಜೇಶ್‌ ಕರ್ಣಂ ಅವರು ಜನವರಿ 17ರಂದು ಆದೇಶ ಮಾಡಿದ್ದಾರೆ.

Special Judge Rajesh Karnam K

“ದೂರುದಾರರು ಹಾಜರಿದ್ದು, ಆರೋಪಿಗಳಾದ ಗೋವಿಂದನ್‌ ರಂಗರಾಜನ್‌, ಶ್ರೀಧರ್‌ ವಾರಿಯರ್‌, ಅನಿಲ್‌ ಕುಮಾರ್‌, ನಮ್ರತಾ ಗುಂಡಯ್ಯ, ಡಾ. ನಿರ್ಮಲಾ, ಕೆವಿಎಸ್‌ ಹರಿ ಮತ್ತು ದಾಸಪ್ಪ ಅವರಿಗೆ ವೈಯಕ್ತಿಕ ನೋಟಿಸ್‌ ಜಾರಿ ಮಾಡಲಾಗಿದೆ. ಆರೋಪಿಗಳಾದ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣನ್‌, ದೀಪ್ಸಿಕಾ ಚಕ್ರವರ್ತಿ, ಪಿ ಬಾಲಚಂದ್ರ, ಪಿ ಬಲರಾಮ, ಅಂಜಲಿ ಎ. ಕಾರಂಡೆ ಮತ್ತು ಪ್ರದೀಪ್‌ ಎಸ್‌. ಸಾವ್ಕಾರ್‌ ಅವರಿಗೆ ಇಮೇಲ್‌ ಮೂಲಕ ನೋಟಿಸ್‌ ಕಳುಹಿಸಲಾಗಿದೆ. ಆರೋಪಿಗಳಾದ ಸಂಧ್ಯಾ ವಿಶ್ವೇಶ್ವರಯ್ಯ, ಹೇಮಲತಾ ಮ್ಹಿಷಿ, ಅಭಿಲಾಶ್‌ ರಾಜು ಮತ್ತು ವಿಕ್ಟರ್‌ ಮನೋಹರನ್‌ ಅವರಿಗೆ ದೂರಿನ ಪ್ರತಿ ನೀಡಲಾಗಿಲ್ಲ. ದೂರುದಾರರಿಗೆ ಸಂಬಂಧಿಸಿದಂತೆ 17.08.2017ರವರೆಗೆ ಸಂಸ್ಥೆಯ ಆಂತರಿಕ ಆಡಿಟ್‌ ವರದಿ ಸಲ್ಲಿಸಲು ಮೊದಲನೇ ಆರೋಪಿ ಗೋವಿಂದನ್‌ ರಂಗರಾಜನ್‌ ಅವರಿಗೆ ನಿರ್ದೇಶಿಸಲಾಗಿದೆ" ಎಂದು ನ್ಯಾಯಾಲಯವು ಆದೇಶಿಸಿದೆ.

ಮುಂದುವರೆದು, "ಮಹಿಳೆಯರ ಮೇಲಿನ ದೌರ್ಜನ್ಯ ನಿಷೇಧಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ಕುರಿತು ಐಐಎಸ್‌ಸಿ ನಿರ್ದೇಶಕರು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 18, 18(A) ಅಡಿ ಅಗತ್ಯ ಕ್ರಮಕೈಗೊಂಡು ವರದಿ ಸಲ್ಲಿಸುವ ಸಂಬಂಧ ಶೇಷಾದ್ರಿಪುರಂ ಸಹಾಯಕ ಪೊಲೀಸ್‌ ಆಯುಕ್ತರಿಗೆ ಕಚೇರಿಯು ದೂರಿನ ಪ್ರತಿಯನ್ನು ಕಳುಹಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಮಾರ್ಚ್‌ 17ಕ್ಕೆ ಮುಂದೂಡಿದೆ.

ವಿಶೇಷ ನ್ಯಾಯಾಲಯದಿಂದ ಮೇಲಿನ ಆದೇಶ ಹೊರಬೀಳುತ್ತಿದ್ದಂತೆ ಜನವರಿ 27ರಂದು ಸದಾಶಿವನಗರ ಪೊಲೀಸರು ಗೋಂವಿದನ್‌ ರಂಗರಾನ್‌, ಶ್ರೀಧರ್‌ ವಾರಿಯರ್‌, ಸೇನಾಪತಿ ಕ್ರಿಶ್‌ ಗೋಪಾಲಕೃಷ್ಣನ್‌, ಅನಿಲ್‌ ಕುಮಾರ್‌, ದೀಪ್ಸಿಕಾ ಚಕ್ರವರ್ತಿ, ನಮ್ರತಾ ಗುಂಡಯ್ಯ, ಡಾ. ನಿರ್ಮಲಾ, ಸಂಧ್ಯಾ ವಿಶ್ವೇಶ್ವರಯ್ಯ, ಕೆವಿಎಸ್‌ ಹರಿ, ದಾಸಪ್ಪ, ಪಿ ಬಾಲಚಂದ್ರ, ಪಿ ಬಲರಾಮ, ಅಂಜಲಿ ಕೆ ಕಾರಂಡೆ, ಹೇಮಲತಾ ಮ್ಹಿಷಿ, ಕೆ ಚಟ್ಟೋಪಾಧ್ಯಾಯ, ಪ್ರದೀಪ್‌ ಸಾವ್ಕಾರ್‌, ಅಭಿಲಾಷ್‌ ರಾಜು, ವಿಕ್ಟರ್‌ ಮನೋಹರನ್‌ ಅವರನ್ನು ಕ್ರಮವಾಗಿ 18 ಆರೋಪಿಗಳನ್ನಾಗಿಸಿ ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ 3(8), 3(14), 3(1)(2), 3(x) ಅಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?: ಸಣ್ಣ ದುರ್ಗಪ್ಪ ನೀಡಿರುವ ದೂರಿನ ಅನ್ವಯ ದಾಖಲಿಸಿರುವ ಎಫ್‌ಐಆರ್‌ನಲ್ಲಿ ದೂರಿನಲ್ಲಿ ಮೇಲೆ ಹೇಳಿದ ಹದಿನೆಂಟು ಆರೋಪಿಗಳನ್ನು ಉಲ್ಲೇಖಿಸಲಾಗಿದೆ.

ಮುಂದುವರೆದು, ಐಐಎಸ್‌ಸಿಯಲ್ಲಿ 2014ರಲ್ಲಿ ಹನಿಟ್ರ್ಯಾಪ್‌ ಮೂಲಕ ತನ್ನನ್ನು ಸೇವೆಯಿಂದ ವಜಾ ಮಾಡಿಸಲಾಗಿದೆ. ಅಲ್ಲದೇ, ಗೋಂವಿದನ್‌ ರಂಗರಾನ್‌, ಶ್ರೀಧರ್‌ ವಾರಿಯರ್‌, ಸೇನಾಪತಿ ಕ್ರಿಶ್‌ ಗೋಪಾಲಕೃಷ್ಣನ್‌, ಅನಿಲ್‌ ಕುಮಾರ್‌, ದೀಪ್ಸಿಕಾ ಚಕ್ರವರ್ತಿ, ನಮ್ರತಾ ಗುಂಡಯ್ಯ, ಡಾ. ನಿರ್ಮಲಾ, ಸಂಧ್ಯಾ ವಿಶ್ವೇಶ್ವರಯ್ಯ, ಕೆವಿಎಸ್‌ ಹರಿ, ದಾಸಪ್ಪ, ಪಿ ಬಾಲಚಂದ್ರ, ಪಿ ಬಲರಾಮ, ಅಂಜಲಿ ಕೆ ಕಾರಂಡೆ, ಹೇಮಲತಾ ಮ್ಹಿಷಿ, ಕೆ ಚಟ್ಟೋಪಾಧ್ಯಾಯ, ಪ್ರದೀಪ್‌ ಸಾವ್ಕಾರ್‌, ಅಭಿಲಾಷ್‌ ರಾಜು, ವಿಕ್ಟರ್‌ ಮನೋಹರನ್‌ ಅವರು 2008ರಿಂದ 2025ರವರೆಗೆ ತನ್ನ ಮೇಲೆ ಜಾತಿ ನಿಂದನೆ ಮಾಡಿ, ದೌರ್ಜನ್ಯ ಎಸಗಿದ್ದಾರೆ.

ಐಐಎಸ್‌ಸಿಯಲ್ಲಿರುವ ಲೈಂಗಿಕ ಕಿರುಕುಳ ನಿಷೇಧ ಸಮಿತಿಯು ಒಬ್ಬೇ ಒಬ್ಬರು ಎನ್‌ಜಿಒ ಸದಸ್ಯರನ್ನು ಒಳಗೊಂಡಿಲ್ಲ. ಈ ಸಮಿತಿಗೆ ಕೆಲಸದಿಂದ ವಜಾ ಮಾಡುವ ಅಧಿಕಾರವಿಲ್ಲ ಎಂದು ಕರ್ನಾಟಕ ಶಾಸನ ಸಭೆ ತನಿಖೆಯಲ್ಲಿ ಹೇಳಲಾಗಿದೆ. ತನಿಖೆಯ ಸಂದರ್ಭದಲ್ಲಿ ತನ್ನನ್ನು ಪುನಾ ಕೆಲಸಕ್ಕೆ ಮರು ನೇಮಕ ಮಾಡಲಾಗುವುದು ಎಂದು ನಿರ್ದೇಶಕರು ಒಪ್ಪಿಕೊಂಡಿದ್ದರೂ ಇದುವರೆಗೆ ಮರು ನೇಮಕವಾಗಿಲ್ಲ ಎನ್ನುವ ದೂರುದಾರರ ಆರೋಪವನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ತನ್ನ ಹೆಸರಿಗೆ ಕಳಂಕ ಹಚ್ಚಿದ್ದು, ದೇಶದ ಬೇರೆಲ್ಲಿಯೂ ಕೆಲಸ ಸಿಗದಂತೆ ಮಾಡಲಾಗಿದೆ. ನ್ಯಾಯ ಕೋರಿ ಕೋರ್ಟ್‌ ಮೆಟ್ಟಿಲೇರಲು ಮುಂದಾದಾಗ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಲಾಗಿದೆ. ದೂರುದಾರ ಮಹಿಳೆಯು ಐಐಎಸ್‌ಸಿ ತೊರೆದಿದ್ದರೂ ತಮ್ಮನ್ನು ಇನ್ನೂ ಮರು ನೇಮಕ ಮಾಡಿಲ್ಲ. ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಇಮೇಲ್‌ ದೂರು ನೀಡಲಾಗಿದ್ದು, ಅದಕ್ಕೂ ಆರೋಪಿಗಳು ತಪ್ಪು ಉತ್ತರ ನೀಡಿದ್ದಾರೆ. ಐಐಎಸ್‌ಸಿಯಲ್ಲಿ ಇದುವರೆಗೆ 30 ಲೈಂಗಿಕ ಕಿರುಕುಳ ದೂರು ದಾಖಲಾಗಿದ್ದು, ಇದುವರೆಗೆ ಯಾರನ್ನೂ ಸೇವೆಯಿಂದ ವಜಾಗೊಳಿಸಲಾಗಿಲ್ಲ. ಐಐಎಸ್‌ಸಿಯಲ್ಲಿ ಎಸ್‌ಸಿಪಿ-ಟಿಎಸ್‌ಪಿಯ ಸುಮಾರು 2,500 ಕೋಟಿ ಅನುದಾನವನ್ನು ಲೂಟಿ ಮಾಡಲಾಗಿದೆ. ಐಐಎಸ್‌ಸಿ ನಿರ್ದೇಶಕರು 15 ಬಾರಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ತನಗೆ ಬೆದರಿಕೆ ಹಾಕುವುದಲ್ಲದೇ, ನ್ಯಾಯಮೂರ್ತಿಗಳನ್ನು ಬುಕ್‌ ಮಾಡಿಕೊಂಡು ಪ್ರಕರಣ ಗೆಲ್ಲುವುದಾಗಿ ಹೇಳಿದ್ದಾರೆ. ಹಾಗಾಗಿ, ಸದರಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಡಾ. ಸಣ್ಣ ದುರ್ಗಪ್ಪ ದೂರಿನಲ್ಲಿ ವಿವರಿಸಿರುವುದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.