ಕೋವಿಡ್-19 ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳು ಈ ವರ್ಷ ಪಟಾಕಿ ಬಳಕೆ ಮೇಲೆ ನಿಷೇಧ ಹೇರಿದ್ದು ಈ ಉದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿರುವವರಿಗೆ ಪರ್ಯಾಯ ಉದ್ಯೋಗ ಯೋಜನೆಗಳನ್ನು ರೂಪಿಸಬೇಕು ಎಂದು ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳಿಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎನ್ ಕಿರುಬಾಕರನ್ ಮತ್ತು ಬಿ ಪುಗಳೇಂದಿ ಅವರಿದ್ದ ಮಧುರೈ ಪೀಠ ಇತ್ತೀಚೆಗೆ ಈ ಆದೇಶ ನೀಡಿದೆ. “ದೇಶದ ಹಲವಾರು ರಾಜ್ಯಗಳು ಪಟಾಕಿ ಸಿಡಿಸುವುದಕ್ಕೆ ನಿಷೇಧ ಹೇರಿರುವುದರಿಂದ ಇದು ಅಂತಿಮವಾಗಿ ಪಟಾಕಿ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಪಟಾಕಿ ಉದ್ಯಮ/ ಕೈಗಾರಿಕೆಗಳ ಮೇಲೆ ಮಾತ್ರವಲ್ಲದೆ ಅಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಮೇಲೂ ಇದು ಪರಿಣಾಮ ಬೀರುತ್ತಿದೆ. ಪಟಾಕಿ ಉದ್ಯಮದಲ್ಲಿ ದುಡಿಯುತ್ತಿರುವ ಕಾರ್ಮಿಕರ ಇಂತಹ ಅಪಾಯಕಾರಿ ಸಂದರ್ಭವನ್ನು ಪರಿಗಣಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರ್ಯಾಯ ಉದ್ಯೋಗ ಒದಗಿಸುವಂತಹ ಯೋಜನೆಗಳನ್ನು ತರಲಿವೆ ಎಂದು ನ್ಯಾಯಾಲಯ ಭಾವಿಸುತ್ತದೆ”ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ತಮಿಳುನಾಡು ಕೈಗಾರಿಕೋದ್ಯಮ ಇಲಾಖೆ ಮತ್ತು ಕೇಂದ್ರದ ವಾಣಿಜ್ಯ ಇಲಾಖೆಗಳನ್ನು ಪ್ರಕರಣದಲ್ಲಿ ಸ್ವಯಂ ಪ್ರೇರಿತವಾಗಿ ನ್ಯಾಯಾಲಯ ಪಕ್ಷಕಾರರನ್ನಾಗಿಸಿಕೊಂಡಿದೆ. ಪಟಾಕಿ ಉದ್ಯಮದಲ್ಲಿರುವವರ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಜೆ ವಾಸುದೇವನ್ ಎಂಬುವವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 2008ರ ಸ್ಫೋಟಕ ನಿಯಮಗಳು ಮತ್ತು 1950ರ ತಮಿಳುನಾಡು ಕಾರ್ಖಾನೆಗಳ ನಿಯಮಗಳನ್ನು ಉಲ್ಲಂಘಿಸಲಾಗಿದ್ದು ಪಟಾಕಿ ಉದ್ಯಮ ಕಾರ್ಮಿಕರ ಸುರಕ್ಷತೆಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಹಣ ಸುಲಿಗೆ ಮಾಡುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದ್ದು ಕಳೆದ ವರ್ಷ ಇದೇ ಬಗೆಯ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು ಎಂದು ಪ್ರತಿವಾದಿಗಳ ಪರ ವಕೀಲರು ವಾದಿಸಿದರು. ಆದರೆ ದೇಶದೆಲ್ಲೆಡೆ ಪಟಾಕಿಗಳನ್ನು ನಿಷೇಧಿಸುತ್ತಿರುವಾಗ ಸೂಕ್ತ ಸಮಯದಲ್ಲಿಯೇ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಅಲ್ಲದೆ ನ್ಯಾಯಾಲಯ ತಮಿಳುನಾಡಿನಲ್ಲಿರುವ ಪಟಾಕಿ ಉದ್ಯಮ/ ಕಂಪೆನಿಗಳ ಸಂಖ್ಯೆ, ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯಮದಲ್ಲಿ ಭಾಗಿಯಾಗಿರವ ಕಾರ್ಮಿಕರ ವಿವರ, ಅಂತಹ ಕೈಗಾರಿಕೆಗಳಲ್ಲಿ ಉಂಟಾದ ಅವಘಡಗಳು, ಜೀವಹಾನಿ, ಗಾಯಗೊಂಡವರ ಸಂಖ್ಯೆ ಹಾಗೂ ನೀಡಲಾದ ಪರಿಹಾರದ ಕುರಿತಂತೆ ವಿವರಗಳನ್ನು ಕೇಳಿದೆ. ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಡೆಸಲಾದ ತಪಾಸಣೆ, ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿರುವುದರ ವಿವರ ಮತ್ತು ಈ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದೆ. ಸಂಬಂಧಿತ ರಿಟ್ ಅರ್ಜಿಗಳ ಜೊತೆಗೆ ಡಿ. 4ರಂದು ಈ ಅರ್ಜಿಯನ್ನು ಕೂಡ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.