National Green Tribunal, use of firecrackers
National Green Tribunal, use of firecrackers 
ಸುದ್ದಿಗಳು

ಆರೋಗ್ಯ ಬಲಿ ಪಡೆದು ಆಚರಣೆಗಳು ನಡೆಯಬಾರದು ಎಂದ ಎನ್‌ಜಿಟಿ: ಪಟಾಕಿ ನಿರ್ಬಂಧ ಕಟ್ಟುನಿಟ್ಟಿನ ಪಾಲನೆಗೆ ತಾಕೀತು

Bar & Bench

ಪಟಾಕಿಗಳ ಬಳಕೆಯ ಮೇಲಿನ ನಿಯಂತ್ರಣ ಮತ್ತು ನಿರ್ಬಂಧಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಎನ್‌ಜಿಟಿ ಪ್ರಧಾನ ಪೀಠ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭೋಪಾಲ್‌ ಎನ್‌ಜಿಟಿ ತಾಕೀತು ಮಾಡಿದೆ  [ಡಾ. ಪಿ ಜಿ ನಾಜಪಾಂಡೆ ಮತ್ತಿತರರು ಹಾಗೂ ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಆರೋಗ್ಯದ ಮೂಲಭೂತ ಹಕ್ಕನ್ನು ಆಚರಣೆಯ ನೆಪದಲ್ಲಿ ಉಲ್ಲಂಘಿಸಲು ಯಾರಿಗೂ ಅವಕಾಶ ನೀಡಲಾಗದು ಎಂದು ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಶಿಯೋ ಕುಮಾರ್ ಸಿಂಗ್ ಮತ್ತು ತಜ್ಞ ಸದಸ್ಯ ಡಾ ಅಫ್ರೋಜ್ ಅಹ್ಮದ್ ತಿಳಿಸಿತು.

“ಆಚರಣೆಯ ನೆಪದಲ್ಲಿ ಉಳಿದವರ ಆರೋಗ್ಯವನ್ನು ಬಲಿಪಡೆಯುವಂತಿಲ್ಲ. ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಇತರರ ಆರೋಗ್ಯದ ಹಕ್ಕನ್ನು ಕಿತ್ತುಕೊಳ್ಳಲು ಯಾರಿಗೂ ಅನುಮತಿ ನೀಡಲಾಗದು. ಉಳಿದವರ ಜೀವನದೊಂದಿಗೆ ಅದರಲ್ಲಿಯೂ ಹಿರಿಯ ನಾಗರಿಕರು ಮತ್ತು ಮಕ್ಕಳ ಬದುಕಿನೊಂದಿಗೆ ಆಟವಾಡಲು ಅನುಮತಿ ನೀಡುವುದಿಲ್ಲ” ಎಂದು ನ್ಯಾಯಮಂಡಳಿ ಎಚ್ಚರಿಕೆ ನೀಡಿದೆ.

ಪಟಾಕಿ ಸಿಡಿಸುವುದಕ್ಕೆ ‘ಸಂಪೂರ್ಣ ನಿಷೇಧʼ ಇಲ್ಲ ಎಂದೂ ನ್ಯಾಯಪೀಠ ಇದೇ ಆದೇಶದಲ್ಲಿ ಸ್ಪಷ್ಟಪಡಿಸಿದೆ. ನಾಗರಿಕರ, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯಕ್ಕೆ ಹಾನಿಯುಂಟುಮಾಡುವ ಪಟಾಕಿಗಳನ್ನು ಮಾತ್ರ ನಿಷೇಧಿಸಲಾಗಿದೆ. ಆಚರಣೆಯ ನೆಪದಲ್ಲಿ ಯಾವುದೇ ನಿಷೇಧಿತ ಪಟಾಕಿಗಳನ್ನು ಬಳಸಲು ಅನುಮತಿ ನೀಡಬಾರದು ಎಂದು ನ್ಯಾಯಪೀಠ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.

ಅರ್ಜುನ್ ಗೋಪಾಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಕೆಲ ಬಗೆಯ ಪಟಾಕಿಗಳನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್ ಉಳಿದ ಪಟಾಕಿಗಳ ನಿಯಂತ್ರಣಕ್ಕೆ ನಿರ್ದೇಶಿಸಿತು. ದೀಪಾವಳಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ನಿಗದಿತ ಸಮಯ ಮತ್ತು ಸ್ಥಳದಲ್ಲಿ ಮಾತ್ರ ಪಟಾಕಿಗಳನ್ನು ಬಳಸಬಹುದೆಂದು ಅದು ಸೂಚಿಸಿತ್ತು. ಅಲ್ಲದೆ ನಿಷೇಧಿತ ಪಟಾಕಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ 2021ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ಎನ್‌ಜಿಟಿ ಹಾಗೂ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಅನುಸಾರ ಮಧ್ಯಪ್ರದೇಶ ಸರ್ಕಾರ ಅನೇಕ ಸಾರ್ವಜನಿಕ ಸೂಚನೆಗಳನ್ನು ನೀಡಿದ ಹೊರತಾಗಿಯೂ ಅವುಗಳ ಪಾಲನೆಯಾಗುತ್ತಿಲ್ಲ. ಹೀಗಾಗಿ ಹಿಂದಿನ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ಎನ್‌ಜಿಟಿ ಕೇಂದ್ರ ವಲಯ ಪೀಠದೆದುರು ಜಾರಿ ಅರ್ಜಿ ಸಲ್ಲಿಸಲಾಗಿತ್ತು. ನವೆಂಬರ್ 8 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.