ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಬಳಿ ಗುಂಡು ಹಾರಿಸಿದ ಆರೋಪ ಎದುರಿಸುತ್ತಿದ್ದ ಅನುಜ್ ತಪನ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ ಕುರಿತು ನಡೆಯುತ್ತಿರುವ ವಿಚಾರಣೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಬುಧವಾರ ಮುಂಬೈ ಪೊಲೀಸರಿಗೆ ಸೂಚಿಸಿದೆ [ಅನುಜ್ ಥಪನ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಇದೇ ವೇಳೆ ಪ್ರಕರಣದ ತನಿಖೆಯನ್ನು ಕುರುಡಾಗಿ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ನುಡಿದಿದೆ.
ನ್ಯಾಯಾಲಯ ಕುರುಡಾಗಿ ಮೂರನೇ ಸಂಸ್ಥೆಗೆ (ಸಿಬಿಐ) ಪ್ರಕರಣ ವರ್ಗಾಯಿಸಲಾಗದು. ಸರ್ಕಾರ ಯಾವುದೇ ಎಫ್‌ಐಆರ್ ಇಲ್ಲ ಎಂದು ಹೇಳಲಿ. ತನಿಖೆ ನಡೆಯುತ್ತಿದ್ದು ಬಳಿಕ ನೋಡೋಣ ಎಂದು ಪೀಠ ಹೇಳಿತು.
ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮಗ ಸಾವನ್ನಪ್ಪಿದ್ದಾನೆ. ಆತನ ಮೇಲೆ ಮುಂಬೈ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದರು ಎಂದು ತಪನ್ ತಾಯಿ ರೀಟಾ ದೂರಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ವಕೀಲರಾದ ಶ್ರೀರಾಮ್ ಪರಕ್ಕತ್ ಮತ್ತು ರಾಜವಂತ್ ಕೌರ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಥಾಪನ್ ಸಾವಿನ ಕುರಿತು ಸಿಬಿಐ ತನಿಖೆ ನಡಸುವಂತೆ ವಿನಂತಿಸಲಾಗಿತ್ತು. ಅಲ್ಲದೆ ತಪನ್ ಸಾವಿನ ಕುರಿತು ಹೊಸದಾಗಿ ಮರಣೋತ್ತರ ಪರೀಕ್ಷೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಲಾಗಿತ್ತು.
ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಜಕ್ತಾ ಶಿಂಧೆ ಅವರು ಬುಧವಾರ ವಾದ ಮಂಡಿಸಿ, ಆಕಸ್ಮಿಕ ಸಾವು ವರದಿ (ಎಡಿಆರ್) ದಾಖಲಾಗಿದ್ದು, ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ಪ್ರಕರಣದ ನಡೆಸುತ್ತಿದೆ ಎಂದರು.
ಪೊಲೀಸ್ ಕಸ್ಟಡಿಯಲ್ಲಿದ್ದಾಗ ತಪನ್ ಸಾವು ಸಂಭವಿಸಿದ್ದರಿಂದ ಮ್ಯಾಜಿಸ್ಟ್ರೇಟ್ ವಿಚಾರಣೆ ಕೂಡ ಆರಂಭವಾಗಿದೆ ಎಂದು ಶಿಂಧೆ ನ್ಯಾಯಾಲಯಕ್ಕೆ ತಿಳಿಸಿದರು.
ಬಳಿಕ ಸಿಐಡಿ ತನಿಖೆಯ ಪ್ರಗತಿ ಮತ್ತು ಸಾವಿನ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಮತ್ತು ಪೊಲೀಸ್ ಅಧಿಕಾರಿಗಳ ಸಿಸಿಟಿವಿ ದೃಶ್ಯಾವಳಿ ಮತ್ತು ಕರೆ ವಿವರ ದಾಖಲೆಗಳನ್ನು (ಸಿಡಿಆರ್) ಸಂರಕ್ಷಿಸಿಡುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ನ್ಯಾಯಮೂರ್ತಿಗಳಾದ ಸಂದೀಪ್ ಮಾರ್ನೆ ಮತ್ತು ನೀಲಾ ಗೋಖಲೆ ಅವರಿದ್ದ ರಜಾಕಾಲೀನ ಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಮೇ 22ರಂದು ನಡೆಯಲಿದೆ.
ನಟ ಸಲ್ಮಾನ್ ಖಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಉಳಿದ ಆರೋಪಿಗಳಿಗೆ ಶಸ್ತ್ರಾಸ್ತ್ರ ಒದಗಿಸಿದ ಆರೋಪದಡಿ ತಪನ್‌ನನ್ನು ಉಳಿದ ಮೂವರು ವ್ಯಕ್ತಿಗಳೊಂದಿಗೆ ಮುಂಬೈ ಪೊಲೀಸ್ ಅಪರಾಧ ವಿಭಾಗ ಏಪ್ರಿಲ್ 26ರಂದು ಬಂಧಿಸಿತ್ತು.
ಏಪ್ರಿಲ್ 30 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದ ಆತನ ವಿರುದ್ಧ ಪೊಲೀಸರು ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಡಿಯೂ ಪ್ರಕರಣ ದಾಖಲಿಸಿದ್ದರು. ಏಪ್ರಿಲ್ 29ರಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನ್ಯಾಯಾಲಯ ತಪನ್ ಸೇರಿದಂತೆ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಮೇ 8 ರವರೆಗೆ ವಿಸ್ತರಿಸಿತ್ತು. ಉಳಿದ ಆರೋಪಿಗಳನ್ನು ವೈದ್ಯಕೀಯ ಕಾರಣಗಳಿಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಮೇ 1 ರಂದು, ತಪನ್ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದುಬಂದಿತ್ತು. ಮೇ 3ರಂದು ಹೈಕೋರ್ಟ್‌ನಲ್ಲಿ ಆತನ ತಾಯಿ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.