ಭಾರತೀಯ ವಕೀಲರ ಪರಿಷತ್ ನಿಯಮ 5ರ ಪ್ರಕಾರ ಮೂರು ವರ್ಷದ ಕಾನೂನು ಪದವಿಗೆ (ಎಲ್‌ಎಲ್‌ಬಿ) ನೋಂದಣಿಯಾಗಲು ಮೂರು ವರ್ಷದ ಪದವಿ ಪ್ರಮಾಣ ಪತ್ರ ಹೊಂದಿದ್ದರೆ ಸಾಕು. +2 ಪದವಿ ಪೂರ್ವ ಶಿಕ್ಷಣದ ಪ್ರಮಾಣಪತ್ರವನ್ನು ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.
ಉದ್ಯೋಗ ಕೇಂದ್ರಿತ ಕೋರ್ಸ್ (ಜೆಒಸಿ) ಪಡೆದಿರುವುದರಿಂದ ಮೂರು ವರ್ಷದ ಕಾನೂನು ಪದವಿ ಪ್ರವೇಶಕ್ಕೆ ಅವಕಾಶ ನೀಡಲಾಗದು ಎಂದಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕ್ರಮ ಪ್ರಶ್ನಿಸಿ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ರಾಕೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪೀಠವು ತನ್ನ ಆದೇಶದಲ್ಲಿ "ಭಾರತೀಯ ವಕೀಲರ ಪರಿಷತ್ ನಿಯಮ 5(ಎ) ಪ್ರಕಾರ ಮೂರು ವರ್ಷದ ಕಾನೂನು ಪದವಿಗೆ ನೋಂದಣಿ ಪಡೆಯಲು ಪದವಿ ಪ್ರಮಾಣ ಪತ್ರ ನೀಡಿದ್ದರೆ ಪಿಯುಸಿ ಪ್ರಮಾಣ ಪತ್ರ ಅಗತ್ಯವಿಲ್ಲ. ಆದರೆ, ಐದು ವರ್ಷದ ಕಾನೂನು ಪದವಿಗೆ ಅರ್ಜಿ ಸಲ್ಲಿಸಿದರೆ ಎಸ್‌ಎಸ್‌ಎಲ್‌ಸಿ ಪಾಸಾದ ಬಳಿಕ ಎರಡು ವರ್ಷ ಪಿಯುಸಿ (ಸಿಬಿಎಸ್‌ಸಿ/ಐಸಿಎಸ್‌ಇ ಇಲ್ಲವೇ ರಾಜ್ಯ ಪಠ್ಯಕ್ರಮದ ದ್ವಿತೀಯ ಪಿಯುಸಿ) ಅಧ್ಯಯನ ಅವಶ್ಯ” ಎಂದು ಹೇಳಿದೆ.
“ಹಾಲಿ ಪ್ರಕರಣದಲ್ಲಿ ಅರ್ಜಿದಾರ ಜೆಒಸಿ ಪೂರ್ಣಗೊಳಿಸಿದ್ದು, ಇದನ್ನು ಆಧರಿಸಿ ಬಿ.ಕಾಂ ಪದವಿ ಪಡೆಯಲು ಅನುಮತಿಸಲಾಗಿದೆ. ಬಿ.ಕಾಂ ಪದವಿಯನ್ನೂ ಅವರು ಪೂರ್ಣಗೊಳಿಸಿದ್ದು, ನಿಯಮ 5ರ ಪ್ರಕಾರ ಮೊದಲ ಪದವಿ ಸರ್ಟಿಫಿಕೇಟ್ ಅನ್ನು ಅರ್ಜಿದಾರರು ಹೊಂದಿದ್ದಾರೆ. ಹೀಗಿರುವಾಗ +2 ಪದವಿ ಪೂರ್ವ ಸರ್ಟಿಫಿಕೇಟ್ ಹೊಂದಬೇಕು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ" ಎಂದರು.
ಅರ್ಜಿದಾರರ ಪರ ವಕೀಲ ಕೆ ಪ್ರಸನ್ನ ಶೆಟ್ಟಿ ಅವರು “ಅರ್ಜಿದಾರರು ಬಿ.ಕಾಂ ಪದವಿಗೆ ಸೇರ್ಪಡೆಯಾಗುವಾಗ ಜೆಒಸಿ ಸರ್ಟಿಫಿಕೇಟ್ ಅನ್ನು ಸೂಕ್ತ ಅರ್ಹತಾ ಪ್ರಮಾಣ ಪತ್ರ ಎಂದು ಪರಿಗಣಿಸಲಾಗಿದೆ. ಕಾನೂನು ಪದವಿಗೆ ಸೇರ್ಪಡೆಯಾಗಲು 10+2+3 ವರ್ಷ ಪದವಿ. ಈ ಎರಡೂ ವಿಚಾರಗಳಲ್ಲಿ ಅರ್ಜಿದಾರರು ಅರ್ಹರಾಗಿದ್ದಾರೆ. ಹೀಗಾಗಿ, ಕೆಎಸ್‌ಎಲ್‌ಯು ಅರ್ಹತಾ ಪತ್ರ ನೀಡಬೇಕು ಮತ್ತು ಬೆಂಗಳೂರಿನ ಸೌಂದರ್ಯ ಕಾನೂನು ಕಾಲೇಜು ಕಾನೂನು ಪದವಿಗೆ ಪ್ರವೇಶ ಕಲ್ಪಿಸಬೇಕು. ಜೆಒಸಿ ಪ್ರಮಾಣಪತ್ರ ಮುಂದಿನ ಶಿಕ್ಷಣಕ್ಕೆ ಅನ್ವಯಿಸುತ್ತದೆ ಎಂದು ವಾದಿಸಿದ್ದರು.
ಕೆಎಸ್‌ಎಲ್‌ಯು ಪ್ರತಿನಿಧಿಸಿದ್ದ ವಕೀಲ ಗಿರೀಶ್ ಕುಮಾರ್ ಅವರು “ಉದ್ಯೋಗ ಕೇಂದ್ರಿತ ಕೋರ್ಸ್‌ನಲ್ಲಿ ಅರ್ಜಿದಾರರು ಭಾಷೆಯನ್ನು ತೆಗೆದುಕೊಳ್ಳದಿದ್ದರೆ ಅದನ್ನು 10+2ಗೆ ತತ್ಸಮಾನ ಎನ್ನಲಾಗದು. ಜೆಒಸಿ ಕೋರ್ಸ್‌ನಲ್ಲಿ ಅರ್ಜಿದಾರರು ಒಂದು ಭಾಷೆಯನ್ನು ತೆಗೆದುಕೊಂಡಿದ್ದರೆ ಮಾತ್ರ ಅದನ್ನು 10+2ಗೆ ತತ್ಸಮಾನ ಎನ್ನಬಹುದು. ಭಾರತೀಯ ವಕೀಲರ ಪರಿಷತ್‌ನ ಸೂಚನೆಯ ಪ್ರಕಾರ ಜೆಒಸಿಯನ್ನು 10+2ಕ್ಕೆ ತತ್ಸಮಾನ ಎಂದು ಹೇಳಿಲ್ಲ. ಮೂರು ವರ್ಷದ ಕಾನೂನು ಪದವಿ ಪ್ರವೇಶಕ್ಕೆ 10+2+3 ವರ್ಷ ಪದವಿಯಾಗಿರಬೇಕು ಇಂದಿದೆ. ಈ ನೆಲೆಯಲ್ಲಿ 10+2 ಎಂದರೆ ಸಿಬಿಎಸ್‌ಇ/ಐಸಿಎಸ್‌ಇ ಅಥವಾ ಪಿಯುಸಿ ಆಗಿರಬೇಕು. ಇತರೆ ಕೋರ್ಸ್‌ಗಳನ್ನು 10+2ಕ್ಕೆ ಸಮ ಎಂದು ಹೇಳಲಾಗದು. ಈ ನೆಲೆಯಲ್ಲಿ ವಿಶ್ವವಿದ್ಯಾಲಯ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ. ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದಿದ್ದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರ ರಾಕೇಶ್ ಶೆಟ್ಟಿ 1999ರಲ್ಲಿ ಕಂಪ್ಯೂಟರ್ ತಂತ್ರಾಶಗಳಲ್ಲಿ ಉದ್ಯೋಗ ಆಧಾರಿತ ಪದವಿ ಪೂರ್ವ ಶಿಕ್ಷಣ (ಜೆಒಸಿ) ಅಧ್ಯಯನ ಮಾಡಿದ್ದರು. ಬಳಿಕ 2008ರಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ (ಬಿಕಾಂ) ಪೂರ್ಣಗೊಳಿಸಿದ್ದರು. ಹಲವು ವರ್ಷಗಳ ಕಾಲ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿದ ಬಳಿಕ 2024ರಲ್ಲಿ ಕಾನೂನು ಪದವಿ ಪಡೆಯಲು ಬೆಂಗಳೂರಿನ ಸೌಂದರ್ಯ ಕಾನೂನು ಕಾಲೇಜಿನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. 2024-25ರ ಸಾಲಿಗೆ ಶುಲ್ಕವನ್ನು ಪಾವತಿ ಮಾಡಿದ್ದರು.
ಈ ಮಧ್ಯೆ, 2021ರ ಆಗಸ್ಟ್ 6ರ ಸರ್ಕಾರದ ಆದೇಶದ ಪ್ರಕಾರ ಜೆಒಸಿಯನ್ನು ಪಿಯುಸಿಗೆ ಸಮಾನವಾದ್ದು ಎಂದು ಪರಿಗಣಿಸಲಾಗದು. ಹೀಗಾಗಿ ಅರ್ಜಿದಾರರ ನೋಂದಣಿ ಅರ್ಹತೆ ಹೊಂದಿಲ್ಲ ಎಂದು ತಿಳಿಸಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ನೋಂದಣಿ ನಿರಾಕರಿಸಿತ್ತು. ಈ ಕುರಿತು ಇ-ಮೇಲ್ ಸಂದೇಶವನ್ನು ರವಾನಿಸಿತ್ತು. ಇದನ್ನು ಪ್ರಶ್ನಿಸಿ ರಾಕೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಾನೂನು ಪದವಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಅಗತ್ಯವಿದೆ ಎಂದು ಹೇಳಲಾಗಿದೆ. ಆದರೆ, ಅರ್ಜಿದಾರರು ಎಲ್ಲ ಅರ್ಹತೆ ಪಡೆದಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಶ್ವವಿದ್ಯಾಲಯದ ಪರ ವಕೀಲರು, ಜೆಒಸಿಯಲ್ಲಿ ಭಾಷಾ ಅಧ್ಯಯನ ಇರುವುದಿಲ್ಲ. ಇದಕ್ಕಾಗಿ ಪಿಯುಸಿ ಎಂದು ಪರಿಗಣಿಸದಂತೆ ಸರ್ಕಾರ ಆದೇಶಿಸಿದೆ. ಆದ್ದರಿಂದ ಅರ್ಜಿದಾರರು ಕಾನೂನು ಪದವಿ ನೋಂದಣಿಗೆ ಅರ್ಹರಾಗುವುದಿಲ್ಲ ಎಂದು ವಾದಿಸಿದ್ದರು.