ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಿಂದ (ಎನ್ಎಲ್‌ಯು) ಪದವಿ ಪಡೆಯದ ತಳ ಸಮುದಾಯಕ್ಕೆ ಸೇರಿದ ಹಾಗೂ ಮೊದಲ ತಲೆಮಾರಿನ ವಕೀಲರು ಮತ್ತು ಕಾನೂನು ಪದವೀಧರರು ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಹೆಚ್ಚು ಸವಾಲು ಎದುರಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ಗೌರವ್ ಕುಮಾರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ವಕೀಲರ ನೋಂದಣಿಗಾಗಿ ರಾಜ್ಯ ವಕೀಲರ ಪರಿಷತ್ತುಗಳು ಮತ್ತು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ವಿಧಿಸುವ ನೋಂದಣಿ ಶುಲ್ಕವು ವಕೀಲರ ಕಾಯಿದೆ ನಿಗದಿಪಡಿಸಿದ ಮಿತಿ ಮೀರುವಂತಿಲ್ಲ ಎಂದು ತೀರ್ಪು ನೀಡುವಾಗ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪದವಿ ಪೂರ್ಣಗೊಂಡ ಕೂಡಲೇ ಪ್ರಾಕ್ಟೀಸ್ ಆರಂಭಿಸುವ ವಕೀಲರಿಗೆ ಅವರು ಪ್ರಾಕ್ಟೀಸ್ ಮಾಡುವ ನ್ಯಾಯಾಲಯ ಮತ್ತು ಅವರು ಕೆಲಸಕ್ಕೆ ಸೇರುವ ಕಾನೂನು ಸಂಸ್ಥೆಗಳ ಆಧಾರದಲ್ಲಿ ಮಾಸಿಕ ₹ 10,000 ದಿಂದ ₹ 50,000ವರೆಗೆ ಗಳಿಸಬಹುದು.
ತಳ ಸಮುದಾಯಕ್ಕೆ ಸೇರಿದ, ಮೊದಲ ತಲೆ ಮಾರಿನ ವಕೀಲರು ಮತ್ತು ಕಾನೂನು ಪದವೀಧರರು ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಹೆಚ್ಚು ಸವಾಲು ಎದುರಿಸುತ್ತಾರೆ. ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಇಂಗ್ಲಿಷ್‌ನಲ್ಲೇ ನಡೆಯುವ ವಿಚಾರಣೆ ದಲಿತ ಸಮುದಾಯದ ಅನೇಕ ಕಾನೂನು ವಿದ್ಯಾರ್ಥಿಗಳ ಅವಕಾಶವನ್ನು ಮೊಟಕುಗೊಳಿಸುತ್ತವೆ. ಹೀಗಾಗಿ ನೋಂದಣಿ ಶುಲ್ಕದ ಹೆಸರಿನಲ್ಲಿ ಅತಿಯಾಗಿ ಶುಲ್ಕ ವಿಧಿಸುವುದು ಅನೇಕರಿಗೆ ಇನ್ನಷ್ಟು ಅಡ್ಡಿ ಉಂಟುಮಾಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಸಾಮಾಜಿಕ ಬಂಡವಾಳ ಮತ್ತು ಸಂಪರ್ಕಗಳು ಕಾನೂನು ವೃತ್ತಿಯಲ್ಲಿ ಪ್ರಮುಖ ಪಾತ್ರವಹಿಸಲಿದ್ದು ಇವುಗಳ ಕೊರತೆಯನ್ನು ತಳ ಸಮುದಾಯದ ವಕೀಲರು ಸಾಕಷ್ಟು ಅನುಭವಿಸುತ್ತಾರೆ. ಕಾನೂನು ಕ್ಷೇತ್ರದಲ್ಲಿ ವೈವಿಧ್ಯತೆ ತರುವುದಕ್ಕಾಗಿ ವಕೀಲ ವೃತ್ತಿಯಲ್ಲಿ ಸಮಾಜದಂಚಿನಲ್ಲಿರುವವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿತು.
ಮುಂದುವರೆದು, ಕಾನೂನು ಅಭ್ಯಾಸ ಮಾಡುವ ಹಕ್ಕು ಶಾಸನಬದ್ಧ ಹಕ್ಕು ಮಾತ್ರವಲ್ಲದೆ ಮೂಲಭೂತ ಹಕ್ಕು. ಅತಿಯಾದ ನೋಂದಣಿ ಶುಲ್ಕ ಈ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿತು.
ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧ ವಕೀಲ ಪರಿಷತ್ತುಗಳು ನಿಗದಿಪಡಿಸಿದ ಹೆಚ್ಚಿನ ನೋಂದಣಿ ಶುಲ್ಕಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.