Arvind Kejriwal Facebook
ಸುದ್ದಿಗಳು

ಅರವಿಂದ್‌ ಕೇಜ್ರಿವಾಲ್‌ಗೆ ಐದು ಷರತ್ತು ವಿಧಿಸಿ ಮಧ್ಯಂತರ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್‌

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಶುಕ್ರವಾರ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಅರೆ ನ್ಯಾಯಿಕವಾಗಿದ್ದು, ಬಂಧನ ಕಾನೂನು ಸಿಂಧುತ್ವ ಪ್ರಶ್ನೆ ಪರಿಗಣನೆಯಲ್ಲಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಮಗ್ರ ಮತ್ತು ಸ್ವತಂತ್ರ ದೃಷ್ಟಿಕೋನ ಸಮರ್ಥನೀಯ ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

“ಮೇಲ್ಮನವಿದಾರರು ದೆಹಲಿ ಮುಖ್ಯಮಂತ್ರಿಯಾಗಿದ್ದು, ರಾಷ್ಟ್ರೀಯ ಪಕ್ಷದ ನಾಯಕರಾಗಿದ್ದಾರೆ. ಕೇಜ್ರಿವಾಲ್‌ ವಿರುದ್ದ ಗಂಭೀರ ಆರೋಪ ಮಾಡಲಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಅವರನ್ನು ದೋಷಿ ಎಂದು ಘೋಷಿಸಲಾಗಿಲ್ಲ. ಅವರಿಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇಲ್ಲ. ಅವರು ಸಮಾಜಕ್ಕೆ ಬೆದರಿಕೆಯಾಗುವ ವ್ಯಕ್ತಿಯಲ್ಲ” ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್‌ ವಿಧಿಸಿರುವ ಷರತ್ತುಗಳು ಏನು:

  • ಕೇಜ್ರಿವಾಲ್‌ 50 ಸಾವಿರ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಒಬ್ಬರ ಭದ್ರತೆ ಒದಗಿಸಬೇಕು.

  • ಮುಖ್ಯಮಂತ್ರಿ ಕಾರ್ಯಾಲಯ ಹಾಗೂ ದೆಹಲಿ ಸಚಿವಾಲಯಕ್ಕೆ ಅವರು ಭೇಟಿ ನೀಡಬಾರದು.

  • ಅಗತ್ಯವಿಲ್ಲದ ಹೊರತಾಗಿ ಅವರು ಅಧಿಕೃತ ದಾಖಲೆಗಳಿಗೆ ಸಹಿ ಹಾಕುವಂತಿಲ್ಲ. ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅವರಿಂದ ಒಪ್ಪಿಗೆ ಪಡೆಯುವುದು ಅಗತ್ಯವಾಗಿದೆ.

  • ಹಾಲಿ ಪ್ರಕರಣದಲ್ಲಿ ತಮ್ಮ ಪಾತ್ರದ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲ.

  • ಯಾವುದೇ ಸಾಕ್ಷಿಯೊಂದಿಗೆ ಅವರು ಮಾತನಾಡುವಂತಿಲ್ಲ ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳನ್ನು ಪಡೆಯುವಂತಿಲ್ಲ.

ಇದೇ ವೇಳೆ, ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡುವುದು ಸಾಮಾನ್ಯ ಜನರ ಹೋಲಿಕೆಯಲ್ಲಿ ರಾಜಕಾರಣಿಗಳಿಗೆ ಸವಲತ್ತು ಕಲ್ಪಿಸಿದಂತೆ ಎಂಬ ಪ್ರಾಸಿಕ್ಯೂಷನ್‌ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

“ಮಧ್ಯಂತರ ಜಾಮೀನು ನೀಡುವ ಪ್ರಶ್ನೆ ಬಂದಾಗ ನ್ಯಾಯಾಲಯಗಳು ಯಾವಾಗಲೂ ಆಕ್ಷೇಪಿತ ವ್ಯಕ್ತಿಯ ವಿಶಿಷ್ಟತೆ ಮತ್ತು ಸುತ್ತಲಿನ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಅದನ್ನು ನಗಣ್ಯವಾಗಿ ಕಾಣುವುದು ಅಧರ್ಮ ಮತ್ತು ತಪ್ಪು” ಎಂದು ಆದೇಶದಲ್ಲಿ ಹೇಳಲಾಗಿದೆ.